ಪರಿಸರ ಹಾಗೂ ಜನಜೀವನದ ಸೌಹಾರ್ದ ಸಂಬಂಧ ಕಾಯ್ದುಕೊಂಡಿರುವ ಉತ್ತರಕನ್ನಡದಲ್ಲೀಗ ನದಿ ತಿರುವು ಯೋಜನೆಗಳ ಆತಂಕ ಎದ್ದಿದೆ. ಮೇಲ್ನೋಟಕ್ಕೆ ಜಿಲ್ಲೆಯೊಂದರ ಜನರ ಸಂಕಟ ಎನಿಸಬಹುದಾದರೂ ಇಡೀ ಪರಿಸರದ ಮೇಲೆ ಆ ಮೂಲಕ ಪಶ್ಚಿಮಘಟ್ಟದ ಮೇಲೆ, ಸಮುದ್ರದ ಮೇಲೆ ಅದು ಬೀರಬಹುದಾದ ಪರಿಣಾಮ ಚಿಂತನಾರ್ಹ. ಒಟ್ಟೂ 47ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿರುವ ಈ ಯೋಜನೆಗಳು ಕಾರ್ಯಸಾಧುವೇ? ಒಂದು ವಿಶ್ಲೇಷಣೆ ಇಲ್ಲಿದೆ.
ಅಪಾರ ಜೀವವೈವಿಧ್ಯದ ನೆಲೆ ಪಶ್ಚಿಮಘಟ್ಟ. ದೇಶದ ಶೇಕಡ 40ರಷ್ಟು ಭೂಪ್ರದೇಶಕ್ಕೆ ನೀರುಣಿಸುವ ಅನೇಕ ನದಿಗಳಿಗೆ ಅದುವೇ ಮೂಲ. ಮುಂಗಾರು ಮಾರುತಗಳನ್ನು ತಡೆದು ಮಳೆ ಸುರಿಯಲು ಕಾರಣವಾಗುವುದು ಅದರ ಪ್ರಮುಖ ಕಾಯಕ. 2012ರಿಂದಲೇ ಈ ಪಶ್ಚಿಮಘಟ್ಟ ವಿಶ್ವಪರಂಪರೆಯ ತಾಣವೆಂಬ ಗೌರವ ಪಡೆದಿದೆ. ಇಲ್ಲಿನ ಹೆಚ್ಚಿನ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಸಾವಿರಾರು ಪ್ರಭೇದದ ವನ್ಯ ಸಂಕುಲಗಳ ಮನೆಯಿದು. 325ಕ್ಕೂ ಹೆಚ್ಚು ಅಳಿವಿನಂಚಿನ ಪ್ರಾಣಿಗಳು, ಅಪಾರ ಪ್ರಮಾಣದ ಪಕ್ಷಿವೈವಿಧ್ಯದ ವಾಸಸ್ಥಾನ. ವಿನಾಶದಂಚಿನಲ್ಲಿರುವ ಪುನುಗಿನ ಬೆಕ್ಕು, ಸಿಂಗಳೀಕದಂಥ 139 ಸಸ್ತನಿಗಳು ಇಲ್ಲಿವೆ.
ಕರ್ನಾಟಕದ ಪಶ್ಚಿಮಘಟ್ಟವು 5 ಸಾವಿರಕ್ಕೂ ಹೆಚ್ಚು ಆನೆಗಳು, ದೇಶದ ವ್ಯಾಘ್ರಗಳ ಸಂಖ್ಯೆಯ ಶೇಕಡ 10ರಷ್ಟು ಹುಲಿಗಳಿಗೆ ಆಶ್ರಯ ನೀಡಿದೆ. ಬಹುದೊಡ್ಡ ಸಂಖ್ಯೆಯ ಕೀಟವೈವಿಧ್ಯ, ಗಿಡಮೂಲಿಕೆಗಳು ಇಲ್ಲಿವೆ. ಇಂಥ ಪಶ್ಚಿಮಘಟ್ಟದ ಒಡಲು ದುರ್ಬಲಗೊಳಿಸುವ, ಲಕ್ಷಾಂತರ ಮರಗಳನ್ನು ನಾಶಮಾಡುವ ಹಾಗೂ ಆಮೂಲಕ ಪರಿಸರ ಸಮತೋಲನವನ್ನೇ ಅಲುಗಾಡಿಸುವ ಕೆಲಸ ಆಗುತ್ತಲೇ ಇದೆ. ಈ ಪರಿಸರವು ಜೀವಿಗಳ ಬದುಕಿಗೇನೆಲ್ಲ ಕೊಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾರದ ಆಡಳಿತಗಾರರ ‘ಜಾಣನಿಲುವು’ ಮನುಕುಲದ ಭವಿಷ್ಯಕ್ಕೇ ಅಪಾಯ ತಂದೊಡ್ಡುತ್ತಿದೆ. ಇದೇ ಪಶ್ಚಿಮಘಟ್ಟದಲ್ಲಿ ಎತ್ತಿನ ಹೊಳೆ ತಿರುವು ಯೋಜನೆ ಹತ್ತಾರು ವರ್ಷಗಳಿಂದ ಕುಂಟುತ್ತಿದೆ. 6 ಸಾವಿರ ಕೋಟಿಯಿಂದ ಶುರುವಾದ ವೆಚ್ಚ 20 ಸಾವಿರ ಕೋಟಿಗೆ ತಲುಪಿದೆ. ‘ಇದೊಂದು ವಿಫಲ ನೀರಾವರಿ ಯೋಜನೆ, ಪುನಃ ನದಿತಿರುವು ಯೋಜನೆ ಕೈಗೊಳ್ಳುವ ಹುಚ್ಚು ಸಾಹಸ ಮಾಡಬೇಡಿ’ ಎಂದು ಸರ್ಕಾರಕ್ಕೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ ಕೂಡ. ಆದರೆ ಅದನ್ನೆಲ್ಲ ಕೇಳುವ ವ್ಯವಧಾನ ಆಡಳಿತಗಾರರಿಗೆಲ್ಲಿ ಬರಬೇಕು? ನೆನಪಿಡಿ, ಉತ್ತರಕನ್ನಡ ಜಿಲ್ಲೆಯೊಂದರಲ್ಲಿಯೇ 20ಕ್ಕೂ ಹೆಚ್ಚು ಬೃಹತ್ ಯೋಜನೆಗಳನ್ನು ತರುವ ಪ್ರಸ್ತಾಪವಿದೆ. ಅವೇನಾದರೂ ಜಾರಿಯಾದರೆ- ಈಗಾಗಲೇ ನೆಲ ಕುಸಿಯತೊಡಗಿರುವ, ಕೈಗಾ ಪರಮಾಣು ಸ್ಥಾವರವಿರುವ- ಜಿಲ್ಲೆಯೇ ನೆಲಸಮವಾಗುವ ಹಂತ ತಲುಪಬಹುದು!.
2014ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ನೀಡಿರುವ ವರದಿಯು ‘ಉತ್ತರಕನ್ನಡದ ಪರಿಸರ ಧಾರಣಾ ಸಾಮರ್ಥ್ಯ ಮುಗಿದಿದೆ, ಹೊಸ ಬೃಹತ್ ಅರಣ್ಯ ನಾಶದ ಯೋಜನೆಗಳು ಬೇಡವೇ ಬೇಡ’ ಎಂದು ಉಲ್ಲೇಖಿಸಿದೆ. ಇದೆಲ್ಲದರ ನಡುವೆಯೂ ಆಡಳಿತಗಾರರ ಬೇಜವಾಬ್ದಾರಿಗೆೆ ಸಾಕ್ಷಿಯೆಂಬಂತೆ ಎರಡು ಜೀವನದಿಗಳ ಸರಾಗ ಹರಿವನ್ನು ತಿರುಗಿಸುವ ನಿಸರ್ಗವಿರೋಧಿ ಪ್ರಯತ್ನ ಅಲ್ಲಿ ಆರಂಭವಾಗಿದೆೆ. 1. ಬೇಡ್ತಿ-ವರದಾ 2. ಅಘನಾಶಿನಿ-ವೇದಾವತಿ - ಎರಡೂ ನದಿ ತಿರುವು ಯೋಜನೆಗಳು.
1.ನೀರಿಲ್ಲದ ನೀರಾವರಿ ಯೋಜನೆ!
ಹಾವೇರಿ ಜಿಲ್ಲೆಗೆ ಉತ್ತರಕನ್ನಡದ ಯಲ್ಲಾಪುರದ ಬೇಡ್ತಿ ನದಿಯಿಂದ ಹಾಗೂ ಶಿರಸಿ ತಾಲೂಕು ಪಟ್ಟಣದ ಹೊಳೆ, ಶಾಲ್ಮಲಾ ನದಿಯಿಂದ ಕಾಲುವೆ ಮೂಲಕ ನೀರು ಸಾಗಿಸುವ ಬೃಹತ್ ಯೋಜನೆಯೇ ಬೇಡ್ತಿ-ವರದಾ ನದಿತಿರುವು ಯೋಜನೆ. ಯೋಜನೆಯ ವೆಚ್ಚ ಸದ್ಯ 15000 ಕೋಟಿ ರೂ. ಮಾತ್ರ! 25 ವರ್ಷಗಳಿಂದ ಮೂರು ಬಾರಿ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿತ್ತು. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ತೀವ್ರಜನಾಂದೋಲನ ನಡೆದಿದ್ದರಿಂದ ಯೋಜನೆಗೆ ತಡೆ ಬಿದ್ದಿತ್ತು. ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯದ ಅಧ್ಯಯನ ಆಗದೆ ಹೊಸ ಯೋಜನೆ ಪ್ರಸ್ತಾಪ ಬೇಡವೆಂದು 2003-2004ರಲ್ಲೇ ವಾದಿಸಲಾಗಿತ್ತು. ಇದನ್ನು ಒಪ್ಪಿ 2004ರಲ್ಲಿ ಬೇಡ್ತಿ-ವರದಾ ಯೋಜನೆ ಸ್ಥಗಿತಗೊಂಡಿತ್ತು. ಗಮನಾರ್ಹ ಸಂಗತಿಯೆಂದರೆ 2021ರಲ್ಲಿ ಸರ್ಕಾರವೇ ರಚಿಸಿದ್ದ ಭೂಕುಸಿತ ಅಧ್ಯಯನ ಸಮಿತಿ ಉತ್ತರಕನ್ನಡ ಜಿಲ್ಲೆಯ ಬೇಡ್ತಿ-ಶಾಲ್ಮಲಾ ಕಣಿವೆಗಳನ್ನು ಸೂಕ್ಷ್ಮಭೂಕುಸಿತ ಸಂಭಾವ್ಯಪ್ರದೇಶಗಳು ಎಂದು ಗುರುತಿಸಿದೆ. ಈ ನಾಲ್ಕು ವರ್ಷಗಳಲ್ಲಿ ಇಲ್ಲಿ ಭಾರೀ ಭೂಕುಸಿತಗಳು ಘಟಿಸಿವೆ.
ಆದರೆ ತಜ್ಞರು ಹಾಗೂ ಪರಿಸರ ಪ್ರಿಯರ ಪ್ರಕಾರ ‘ಇದು ಅವೈಜ್ಞಾನಿಕ ಪರಿಸರನಾಶಿ ಯೋಜನೆ. ಸ್ಪಷ್ಟವಾಗಿ ನೀರಿಲ್ಲದ ನೀರಾವರಿ ಯೋಜನೆ’. ಏಕೆಂದರೆ ಬೇಡ್ತಿ ನದಿ ನೀರನ್ನು ಈಗಾಗಲೇ ಯಲ್ಲಾಪುರ, ಶಿರಸಿ, ಅಂಕೋಲಾ ತಾಲೂಕುಗಳ 15 ಲಕ್ಷ ರೈತರು ಅವಲಂಬಿಸಿದ್ದ್ದಾರೆ. ಸುಮಾರು 15 ಲಕ್ಷ ಜನರಿರುವ 190 ಹಳ್ಳಿಗಳು, 40,000 ಪಂಪ್ಸೆಟ್ಟುಗಳು ಬೇಡ್ತಿ ಕಣಿವೆ ನೀರನ್ನು ನಂಬಿಕೊಂಡಿವೆ. ಇದೀಗ ಶಿರಸಿ, ಯಲ್ಲಾಪುರ, ಮುಂಡಗೋಡು ತಾಲೂಕಿನ ‘ಬಹುಗ್ರಾಮ ಕುಡಿಯುವ ನೀರು ಯೋಜನೆ’ಗೆ ಬೇಡ್ತಿ ನೀರನ್ನೇ ಒಯ್ಯುವ ಯೋಜನೆ ಮುಕ್ತಾಯ ಹಂತದಲ್ಲಿದೆ.
ಯಲ್ಲಾಪುರ ಪಟ್ಟಣಕ್ಕೂ ಬೇಡ್ತಿಯಿಂದ ನೀರು ಪೂರೈಸುವ ಯೋಜನೆ ಜಾರಿ ಆಗಿದೆ. ಇವೆಲ್ಲವುಗಳ ಜೊತೆ ಕಿರು ನೀರಾವರಿ ಇಲಾಖೆ ಶಾಲ್ಮಲಾ, ಪಟ್ಟಣದ ಹೊಳೆ ಸೇರಿ ಬೇಡ್ತಿ ಕಣಿವೆಯ ಹಳ್ಳಗಳಿಗೆ 15 ಸ್ಥಳಗಳಲ್ಲಿ ಕಿರು ನೀರಾವರಿ ಯೋಜನೆ, ಬಾಂದಾರ ಕಿಂಡಿ ಅಣೆಕಟ್ಟೆ ನಿರ್ಮಾಣ ಮಾಡಿದೆ. ಸೀ ಬರ್ಡ್ ನೌಕಾನೆಲೆ ಮತ್ತು ಕಾರವಾರಕ್ಕೆ 20 ವರ್ಷಗಳಿಂದ ಬೇಡ್ತಿ (ಗಂಗಾವಳಿ) ನದಿಯಿಂದ ನೀರು ಸರಬರಾಜಾಗುತ್ತಿದೆ. ಆದ್ದರಿಂದ ಹಾವೇರಿಗೆ ಒಯ್ಯಲು ಬೇಡ್ತಿಯಲ್ಲಿ ನೀರೇ ಇರುವುದಿಲ್ಲ. ಹೀಗಾಗಿ ರಾಜ್ಯ ನೀರಾವರಿ ಇಲಾಖೆ ಹಾಗೂ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯವರು ನೀಡಿರುವ, 20 ಟಿ.ಎಂ.ಸಿ ನೀರು ಬೇಡ್ತಿ-ವರದಾ ಯೋಜನೆಗೆ ಲಭ್ಯವಾಗಲಿದೆ ಎನ್ನುವ ಅಂಕಿಅಂಶವೇ ವಾಸ್ತವಕ್ಕೆ ದೂರವಾಗಿದೆ’. ಆದರೂ ಹಾವೇರಿ ಜಿಲ್ಲೆಗೆ ಬೇಡ್ತಿಯಿಂದ ನೀರು ಕೊಡುವ ಹುಚ್ಚು ಸಾಹಸಕ್ಕೆ ಹಾವೇರಿಯ ಕೆಲ ರಾಜಕಾರಣಿಗಳು ಕೇಂದ್ರ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದಾರೆ.
ಬೇಡ್ತಿ-ಅಘನಾಶಿನಿ ಬೃಹತ್ ಜಲವಿದ್ಯುತ್ ಯೋಜನೆಗಳ ಸಂದರ್ಭದಲ್ಲಿ 1980-90ರ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೆಗ್ಗರಣಿ-ಗೋಳಿಮಕ್ಕಿ ಸನಿಹದ ಬಾಳೆಕೊಪ್ಪದಲ್ಲಿ ಅಘನಾಶಿನಿ ನದಿಗೆ ಬೃಹತ್ ಅಣೆಕಟ್ಟು ನಿರ್ವಿುಸಲು ಸ್ಥಳ ಗುರುತಿಸಲಾಗಿತ್ತು. ವ್ಯಾಪಕ ಜನಾಕ್ರೋಶದ ನಂತರ ಯೋಜನೆಯನ್ನು ಕೆಪಿಸಿ ಕೈಬಿಟ್ಟಿತ್ತು. 2017ರ ಹೊತ್ತಿಗೆ ಅಘನಾಶಿನಿ ವರದಾ ನದಿತಿರುವು ಯೋಜನೆ ಪ್ರಸ್ತಾಪವಾಯಿತು. ಶಿರಸಿಯಲ್ಲಿ ನಡೆದ ‘ಪಶ್ಚಿಮ ಘಟ್ಟ ಉಳಿಸಿ’ ಸಮ್ಮೇಳನದಲ್ಲಿ ಪೇಜಾವರ ಶ್ರೀಗಳ ಸಮ್ಮುಖದಲ್ಲಿ ಸ್ವರ್ಣವಲ್ಲೀ ಶ್ರೀಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 2021-22 ರಲ್ಲಿ ಬೇಡ್ತಿ-ವರದಾ ಯೋಜನೆ ಜೊತೆ ಅಘನಾಶಿನಿ ಯೋಜನೆಗೂ ತಡೆಬಿದ್ದಿತ್ತು. ಇದೀಗ 2025ರಲ್ಲಿ ಅಘನಾಶಿನಿ ತಿರುವು ಯೋಜನೆಗೆ ಸಿದ್ಧತೆಗಳು ನಡೆದಿವೆ.
ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ಜೋಡಿಸುವ ಯೋಜನೆ ಇದಾಗಿದೆ. ಇದು ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಆಲೋಚನೆ. ಅಘನಾಶಿನಿ ನದಿಗೆ ಸಿದ್ದಾಪುರ ತಾಲೂಕಿನ ಬಾಳೆಕೊಪ್ಪ ಬಳಿ ಅಣೆಕಟ್ಟೆ ಕಟ್ಟಿ, ಅಲ್ಲಿಂದ ನೀರು ಪಂಪ್ವಾಡಿ ಗೋಳಿಮಕ್ಕಿ, ಹಾರ್ಸಿಕಟ್ಟಾ, ಸಿದ್ದಾಪುರ, ಸಾಗರ, ಶಿವಮೊಗ್ಗ, ತರೀಕೆರೆ, ಅಜ್ಜಂಪುರ ಮಾರ್ಗವಾಗಿ ಹಿರಿಯೂರು ತಾಲೂಕಿನಲ್ಲಿರುವ ವಾಣಿವಿಲಾಸ ಜಲಾಶಯಕ್ಕೆ ನೀರು ತುಂಬಿಸುವುದು ಉದ್ದೇಶ. 35 ಟಿಎಂಸಿ ನೀರನ್ನು ಅಘನಾಶಿನಿಯಿಂದ ಎತ್ತಿ ಸಾಗಿಸುವ ಗುರಿ ಈ ಯೋಜನೆಯದು. ಹಾಗೆ ನೋಡಿದರೆ ಎತ್ತಿನಹೊಳೆ ಯೋಜನೆಗಿಂತಲೂ ಬೃಹತ್ತಾದ ಯೋಜನೆ. ಈಗಾಗಲೇ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಕಾರ್ಯಸಾಧ್ಯತಾ ವರದಿಯನ್ನೂ ತಯಾರಿಸಿದೆ.
ಅಘನಾಶಿನಿ-ವೇದಾವತಿ ಯೋಜನೆಗೆ 23000 ಕೋಟಿ ರೂ. ವೆಚ್ಚವಾಗಲಿದೆ. 194 ಕಿ.ಮೀ. ಉದ್ದ ಪೈಪ್ಲೈನ್ ಹಾಕಲಾಗುತ್ತದೆ. ಹೈದರಾಬಾದ್ ಕಚೇರಿಗೆ ಈಗಾಗಲೇ ವರದಿ ರವಾನೆಯಾಗಿದ್ದು, ಅಲ್ಲಿಂದ ದೆಹಲಿಯ ಕೇಂದ್ರ ಕಚೇರಿಗೆ ಹಸ್ತಾಂತರವಾಗಲಿದೆ.
ಅಘನಾಶಿನಿ ಕಣಿವೆ ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು 2012ರಲ್ಲೇ ಘೊಷಣೆಯಾಗಿದೆ. ಅಲ್ಲದೆ ಇದು ಭೂಕುಸಿತ ಸೂಕ್ಷ್ಮ ಪ್ರದೇಶ ಕೂಡ. ಶಿರಸಿ ಅರಣ್ಯ ವಿಭಾಗ, ಸಾಗರ ಅರಣ್ಯ ವಿಭಾಗಗಳ ವ್ಯಾಪ್ತಿಯ ಅಂದಾಜು 500 ಎಕರೆ ಅರಣ್ಯದ 1.20 ಲಕ್ಷ ಗಿಡ-ಮರಗಳು ಈ ಯೋಜನೆಗೆ ಬಲಿಯಾಗಲಿವೆ. ವ್ಯಾಪಕ ಭೂಕುಸಿತಕ್ಕೆ ಕಾರಣವಾಗಲಿದೆ. ಮಾತ್ರವಲ್ಲ, ಶಿರಸಿ, ಕುಮಟಾ ಪಟ್ಟಣಕ್ಕೆ, ಕುಮಟಾ ತಾಲೂಕಿನ ಬಹುಗ್ರಾಮ ಯೋಜನೆಗೆ ಹಾಗೂ ಒಂದು ಲಕ್ಷ ರೈತರ ಪಂಪ್ಸೆಟ್ಗಳಿಗೆ ನೀರು ಒದಗಿಸುವ ಅಘನಾಶಿನಿಯ ಕಾಯಕಕ್ಕೆ ನದಿ ತಿರುವು ಕಂಟಕ ತರುತ್ತಿದೆ ಎಂದು ವೃಕ್ಷ ಆಂದೋಲನದ ತಜ್ಞರ ತಂಡ ಎಚ್ಚರಿಸಿದೆ. ಕುಮಟಾ ಕರಾವಳಿ ಮೀನುಗಾರರು ಮತ್ತು ರೈತರ ಬದುಕು ಅಘನಾಶಿನಿ ನದೀ ನೀರನ್ನೇ ಅವಲಂಬಿಸಿದೆ.
1000 ಎಕರೆ ಬೆಟ್ಟ-ಅರಣ್ಯ ನಾಶ
ಬೇಡ್ತಿ-ವರದಾ ಯೋಜನೆ ಜಾರಿಯಿಂದ ನೀರಾವರಿ ಕಾಲುವೆ, ರಸ್ತೆ ಕಾಮಗಾರಿ, ವಿದ್ಯುತ್ ಮಾರ್ಗಗಳಿಂದ ಬೆಟ್ಟ-ಅರಣ್ಯ, ಗುಡ್ಡ, ಕಣಿವೆ ಪ್ರದೇಶದ ಕನಿಷ್ಠ 1000 ಎಕರೆ ಕಾಡು ನಿರ್ನಾಮವಾಗುತ್ತದೆ. ವನ್ಯಜೀವಿಗಳು ಅತಂತ್ರವಾಗುತ್ತವೆ. ವನ್ಯಜೀವಿ-ಮಾನವ ಸಂಘರ್ಷ ಇನ್ನೂ ಗಂಭೀರ ಸ್ಥಿತಿ ತಲುಪಲಿದೆ.
ಸಮುದ್ರಕ್ಕೆ ನೀರು ವ್ಯರ್ಥವಲ್ಲ!
ಸಮುದ್ರಕ್ಕೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ಹಲವರು ಉದ್ಘರಿಸುತ್ತಾರೆ. ಅದು ಸತ್ಯವಲ್ಲ. ವಾಸ್ತವವೆಂದರೆ ಸಮುದ್ರಕ್ಕೆ ಸಿಹಿ ನೀರು, ಫಲವತ್ತಾದ ನೀರು ಬರಬೇಕು. ಅದಿಲ್ಲವಾದರೆ ಮೀನು ಉತ್ಪಾದನೆ ಇರುವುದಿಲ್ಲ. ಅಲ್ಲಿನ ಪಾರಿಸಾರಿಕ ಸ್ಥಿತಿ ಹದಗೆಡುತ್ತದೆ. ಕರಾವಳಿ ಪ್ರದೇಶದ ಮೀನುಗಾರರು, ರೈತರು, ಜನತೆ ಬೇಡ್ತಿ-ಗಂಗಾವಳಿ ನದಿ ನೀರಿನ ಹರಿವನ್ನೇ ಅವಲಂಬಿಸಿದ್ದಾರೆ. ಅಂಕೋಲಾ-ಕುಮಟಾ ತಾಲೂಕಿನ ರೈತರಿಗೆ ಬೇಸಿಗೆಯಲ್ಲಿ ಸಿಹಿನೀರು ಸಿಗುವುದಿಲ್ಲ. ಉಪ್ಪುನೀರು ನದಿಯಲ್ಲಿ ಮೇಲಕ್ಕೆ ಏರುತ್ತ ಹೋಗುತ್ತದೆ.
ಪ್ರಕೃತಿ ಮೇಲೆ ಪ್ರಹಾರ
1.ನದಿ ತಿರುವಿಗಾಗಿ ಮರಗಳನ್ನು ಕಡಿಯುವುದರಿಂದ ಜೀವವೈವಿಧ್ಯ ನಾಶವಾಗುತ್ತದೆ.
2.ನದಿಗಳ ನೈಸರ್ಗಿಕ ಹರಿವು ಬದಲಾಗುವುದರಿಂದ ಭೂಗರ್ಭಜಲದ ಮಟ್ಟ, ನದಿ ತೀರದ ಪರಿಸರ ಮತ್ತು ಜಲಚರಗಳ ಜೀವಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
3.ಮೇಲ್ಮಣ್ಣಿನ ನಾಶದಿಂದ ಭೂಕುಸಿತ ಮತ್ತು ಪ್ರವಾಹದ ಅಪಾಯ ಹೆಚ್ಚಾಗುತ್ತದೆ. ಕರಾವಳಿ ಪ್ರದೇಶದಲ್ಲಿ ನೀರಿನ ಕೊರತೆಯಾಗಿ ಜನಜೀವನ, ಕೃಷಿ ಹಾಗೂ ಮೀನುಗಾರಿಕೆ ಸಂಕಷ್ಟ ಎದುರಿಸಬೇಕಾಗುತ್ತದೆ.
4.ಹಲವು ಗ್ರಾಮ-ಕುಟುಂಬಗಳು ಜಮೀನು ಕಳೆದುಕೊಳ್ಳಬೇಕಾಗುತ್ತದೆ.
5.ಹಲವು ಸಮುದಾಯಗಳ ಮತ್ತು ವನವಾಸಿಗಳ ಗ್ರಾಮೀಣ ಸಂಸ್ಕೃತಿ -ಆಚರಣೆ, ಪಾರಂಪರಿಕ ಕಸುಬು-ಕೌಶಲ, ಜೀವನಮೂಲಗಳು ನಾಶವಾಗುತ್ತವೆ.
6.ಅನಿವಾರ್ಯವಾಗಿ ಸ್ಥಳೀಯರು ಮತ್ತು ಸರ್ಕಾರದ ಸಂಘರ್ಷ ಹೆಚ್ಚಾಗಲಿದೆ.
7.ಯೋಜನೆ ನಿರ್ಮಾಣ ಮತ್ತು ನಿರ್ವಹಣೆಗೆ ಅಪಾರ ಹಣ ಖರ್ಚಾಗುತ್ತದೆ, ಆದರೆ ಫಲಿತಾಂಶ ಮಾತ್ರ ತೀರಾ ವ್ಯತಿರಿಕ್ತವಾಗಿರುತ್ತದೆ.
8.ಕೃಷಿ ಮತ್ತು ಮೀನುಗಾರಿಕೆಗೆ ಹಾನಿ, ನದಿಯ ಸ್ವಾಭಾವಿಕ ನೀರಿನ ಪೂರೈಕೆ ಕಡಿಮೆಯಾಗಿ ಇದನ್ನಾಧರಿಸಿರುವ ಕೃಷಿ ಇಳುವರಿ ಕುಸಿಯಲಿದೆ. ಹೀಗಾಗಿ ಹತ್ತಾರು ಸಾವಿರ ಕೃಷಿ ಮೀನುಗಾರಿಕೆ, ವನವಾಸಿ, ಕೃಷಿಕೂಲಿಕಾರರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ.
9.ಇಲ್ಲಿ ಹಾನಿಯಾದ ಅಮೂಲ್ಯ ಹಾಗೂ ಸೂಕ್ಷ್ಮ ಪರಿಸರವನ್ನು ಪುನಃ ಸ್ಥಾಪಿಸಲು ಅಸಾಧ್ಯ.
ಈ ಯೋಜನೆಗಳು ಬಯಲುಸೀಮೆಗೆ ತಾತ್ಕಾಲಿಕ ನೀರಿನ ಪರಿಹಾರ ನೀಡಬಹುದು. ಆದರೆ ದೀರ್ಘಾವಧಿಯಲ್ಲಿ ಇಲ್ಲಿನ ಪಶ್ಚಿಮಘಟ್ಟದ ಪರಿಸರ ನಾಶವಾಗಿ ನೀರು ಲಭ್ಯವಾಗದೆ ಅಲ್ಲಿಗೂ ಇಲ್ಲ, ಇಲ್ಲಿಗೂ ಇಲ್ಲ ಎಂಬಂತಾಗುತ್ತದೆ. ಹಾಗಾಗಿ, ಯೋಜನೆಯನ್ನು ಕೈಬಿಡಬೇಕು.
| ಅನಂತ ಅಶೀಸರ ಅಧ್ಯಕ್ಷ, ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ