ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ
ಬೆಂಗಳೂರು: ಮಳೆ ಅಭಾವದಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಗಣನೀಯವಾಗಿ ಕುಸಿತವಾಗುತ್ತಿದ್ದು, ಸಕಾಲದಲ್ಲಿ ಮಳೆಯಾಗದಿದ್ದರೆ ರೈತರು ಮತ್ತು ಕುಸಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಲಿದೆ.
ಕೃಷ್ಣರಾಜಸಾಗರ, ಕಬಿನಿ, ತಾರಕ, ನುಗು, ಸುವರ್ಣಾವತಿ, ಮಂಚನಬೆಲೆ, ಅರ್ಕಾವತಿ, ಇಗ್ಗಲೂರು, ಕಣ್ವ, ಹಾರಂಗಿ, ಹೇಮಾವತಿ, ಯಗಚಿ, ಮಾರ್ಕೋನಹಳ್ಳಿ, ಮಾರ್ಕಂಡೇಯ ಅಣೆಕಟ್ಟು, ಮಲಪ್ರಭಾ, ಭದ್ರಾ, ತುಂಗಾ ಮೇಲ್ದಂಡೆ, ವಾರಾಹಿ, ಭೀಮಾ, ತುಂಗಭದ್ರಾ, ಆಲಮಟ್ಟಿ, ವಾಣಿವಿಲಾಸ, ಲಿಂಗನಮಕ್ಕಿ ಮತ್ತು ರಂಗಸಮುದ್ರ ಸೇರಿ ರಾಜ್ಯದಲ್ಲಿ ಒಟ್ಟಾರೆ 231 ಅಣೆಕಟ್ಟುಗಳಿವೆ. ಕಡಿಯುಲು ಮತ್ತು ಕೃಷಿಗೆ ಈ ಎಲ್ಲ ಅಣೆಕಟ್ಟುಗಳು ವರದಾನವಾಗಿವೆ. ಆದರೆ, ಈ ವರ್ಷ ಆರಂಭದಲ್ಲೇ ಮಳೆ ಕೊರತೆಯಾಗಿದ್ದು, ಬೇಸಿಗೆ ಮಳೆಯೂ ಕಡಿಮೆಯಾಗಿದ್ದರಿಂದ ಬಹುತೇಕ ಅಣೆಕಟ್ಟಗಳಲ್ಲಿ ಸಂಗ್ರಹವಾಗಿದ್ದ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರಾಜ್ಯದ ಎಲ್ಲ ಜಲಾಶಯಗಳಲ್ಲಿ ಶೇ.75 ನೀರು ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನ ಶೇ.23 ನೀರು ಮಾತ್ರ ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.
ರಾಜ್ಯದಲ್ಲಿರುವ 231 ಅಣೆಕಟ್ಟುಗಳ ಪೈಕಿ 218 ಅಣೆಕಟ್ಟುಗಳು ಪೂರ್ಣ ಪ್ರಮಾಣದ ಜಲ ಸಂಗ್ರಹಣಾ ಸಾಮರ್ಥ್ಯ ಹೊಂದಿವೆ. ಉಳಿದ ಅಣೆಕಟ್ಟುಗಳು ಹೂಳು ತುಂಬಿರುವ ಕಾರಣ ಮೂಲ ಜಲಸಂಗ್ರಹಣಾ ಸಾಮರ್ಥ್ಯ ತಗ್ಗಿದೆ. ಕೆಆರ್‌ಎಸ್, ಕಬಿನಿ, ಹಾರಂಗಿ ಜಲಾಶಯ ಭರ್ತಿಯಾಗಲು ಕೊಡಗಿನಲ್ಲಿ ಈಗಾಗಲೇ ಧಾರಾಕಾರ ಮಳೆಯಾಗಬೇಕಿತ್ತು. ಆದರೆ, ಆ ಭಾಗದಲ್ಲಿ ಇದುವರೆಗೆ ರಭಸವಾಗಿ ಮಳೆ ಸುರಿದಿಲ್ಲ. ಇದು ಮಂಡ್ಯ, ಮೈಸೂರು, ಕೊಡಗು ಮತ್ತು ಚಾಮರಾಜನಗರದ ರೈತರನ್ನು ಚಿಂತೆಗೀಡುಮಾಡಿದ್ದು, ಮಹಾನಗರ ಬೆಂಗಳೂರಿಗೂ ಈಗಿನಿಂದಲೇ ಜಲಸಂಕಷ್ಟದ ಆತಂಕ ಕಾಡುತ್ತಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಜನರ ಜೀವನಾಡಿಯಾಗಿದೆ. ಅವಳಿ ಜಿಲ್ಲೆಗಳ ಜನರು ಆಲಮಟ್ಟಿ ಜಲಾಶಯದ ಮೇಲೆ ಅವಲಂಬಿತರಾಗಿದ್ದು, ಮಳೆ ಇಲ್ಲದೆ ಜಲಾಶಯದ ನೀರು ಖಾಲಿಯಾಗುತ್ತಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯ ಯಾದಗಿರಿ, ಕಲಬುರಗಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ಜೀವನಾಡಿಯಾಗಿದೆ. ಆದರೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸಮರ್ಪಕ ಮಳೆಯಾಗದ ಕಾರಣ ಜಲಾಶಯದ ನೀರಿನ ಮಟ್ಟ ಕುಸಿತ ಕಂಡಿದೆ. ಮಧ್ಯ ಮತ್ತು ಕಲ್ಯಾಣ ಕರ್ನಾಟಕ ಜನರ ಜೀವನಡಿ ತುಂಗಭದ್ರಾ, ಹಾಸನದ ಹೇಮಾವತಿ ಮತ್ತು ಬೆಳಗಾವಿಯ ಘಟಪ್ರಭಾ ಜಲಾಶಯದಲ್ಲೂ ನೀರು ಕಡಿಮೆಯಾಗಿದೆ.
ಪಶ್ಚಿಮಘಟ್ಟದಲ್ಲಿ ಮಳೆ ಕುಠಿತ
ಮುಂಗಾರು ದುರ್ಬಲಗೊಂಡ ಪರಿಣಾಮ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ. ಜೂ.1ರಿಂದ ಜೂ.17ವರೆಗೆ ಶೇ.80 ಮಳೆ ಕುಂಠಿತವಾಗಿದೆ. ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶೇ.77 ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೇ. 76 ಮಳೆ ಕೊರತೆ ಎದುರಾಗಿದೆ. ಪೂರ್ವ ಮುಂಗಾರಿನ ಅವಧಿಯಲ್ಲೂ ರಾಜ್ಯದಲ್ಲಿ ಅಷ್ಟೇನೂ ಮಳೆಯಾಗಿಲ್ಲ. ಈ ಬಾರಿ ‘ಸೂಪರ್ ಎಲ್‌ನಿನೋ’ ಮುಂಗಾರಿನ ಮೇಲೆ ಪರಿಣಾಮ ಬೀರುತ್ತಿದೆ. ಮುಂದಿನ ದಿನಗಳಲ್ಲಿ ಕರಾವಳಿ, ಮಲೆನಾಡು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಒಟ್ಟು ಮಳೆ ಪ್ರಮಾಣದಲ್ಲಿ ಶೇ.75 ಮಳೆಯು ಮುಂಗಾರಿನ ಅವಧಿಯಲ್ಲಿ ಸುರಿಯುತ್ತದೆ. ಆದರೆ, ಈ ಬಾರಿ ನೈಋತ್ಯ ಮಾನ್ಸೂನ್ ಮೇಲೆ ‘ಎಲ್ ನಿನೋ’ ಪ್ರಭಾವದಿಂದ ಅಧಿಕ ತಾಪಮಾನ ಮತ್ತು ಮಳೆ ಕುಂಠಿತ ಉಂಟಾಗಲಿದೆ.
ಜೂ.1ರಿಂದ ಸೆ.30ರವರೆಗೆ ವಾಡಿಕೆಯಂತೆ 852 ಮಿಮೀ ಮಳೆಯಾಗಬೇಕು. ಮುಂಗಾರು ಅವಧಿ ಚೆನ್ನಾಗಿದ್ದರೆ ಮಾತ್ರ ಉತ್ತಮ ಮಳೆಯಾಗುತ್ತದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ವ್ಯಾಪ್ತಿಯ ಕರಾವಳಿಯಲ್ಲಿ ವಾಡಿಕೆಯಂತೆ 3,101 ಮಿಮೀಗೂ ಅಧಿಕವಾಗಿ ಸುರಿಯಬೇಕು. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಒಟ್ಟು 1,556 ಮಿಮೀ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದಲ್ಲಿ ಒಟ್ಟು 369 ಮಿಮೀ ಮಳೆಯಾಗಬೇಕು. ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಸೇರಿ ಒಟ್ಟು ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟು 479 ಮಿಮೀ ಮಿಮೀಗೂ ಅಧಿಕ ವರ್ಷಧಾರೆಯಾಗಬೇಕು. ಆದರೆ, ಜುಲೈನಲ್ಲಿ ‘ಎಲ್ ನಿನೋ’ ಶುರುವಾಗಲಿದ್ದು, ಇದು ಮುಂಗಾರಿನ ಮೇಲೆ ನೇರ ಪರಿಣಾಮ ಬೀರಲಿದೆ.
* ಮುಂಗಾರು ಬಲಗೊಳ್ಳಲು ಸದ್ಯಕ್ಕೆ ಪೂರಕ ವಾತಾವರಣ ಇಲ್ಲ
* ಮೋಡ ಕವಿದ ವಾತಾವರಣ ಇದ್ದರೂ ಮಳೆ ಬೀಳುತ್ತಿಲ್ಲ
* ಮಳೆ ಕುಂಠಿತವಾದರೆ ಆಹಾರ ಉತ್ಪಾದನೆ ಇಳಿಮುಖ
* ದೇಶದ ಆರ್ಥಿಕತೆ ಮೇಲೆ ಪರಿಣಾಮ
* ಕೃಷಿ ಚಟುವಟಿಕೆಗಳಿಗೆ ತೊಂದರೆ
ರಾಜ್ಯದಲ್ಲಿ ಇಷ್ಟೋತ್ತಿಗೆ ರಭಸವಾಗಿ ಮಳೆಯಾಗಿ ಜಲಾಶಯಗಳಿಗೆ ಒಳನೀರಿನ ಹರಿಯುವ ಮಟ್ಟ ಹೆಚ್ಚಾಗಬೇಕಿತ್ತು. ಎರಡು ತಿಂಗಳಿಂದ ಸರಿಯಾಗಿ ಮಳೆಯಾಗುತ್ತಿಲ್ಲ. ಇದರಿಂದಾಗಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯಲು, ಕೃಷಿಗೆ ನೀರು ಇಲ್ಲವಾಗುವ ಆತಂಕ ಕಾಡುತ್ತಿದೆ. ಈ ಬಗ್ಗೆ ಸರ್ಕಾರವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.