ವಿಜಯಪುರ :
ಹೋಬಳಿಯಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ರಾಗಿ, ಅವರೆ ಬಿತ್ತನೆ ಭೂಮಿಹದ ಮಾಡಿಕೊಂಡಿದ್ದ ರೈತರಲ್ಲಿ ಆಶ್ಲೇಷ ಮಳೆ ಆಶಾಭಾವ ಮೂಡಿಸಿದೆ.
ಹೋಬಳಿ ವ್ಯಾಪ್ತಿಯಲ್ಲಿ ಮಳೆಕೊರತೆಯಿಂದ ರೈತರು ಕಂಗಾಲಾಗಿದ್ದರು. ಉಳುಮೆಗೆ ಭೂಮಿಯನ್ನು ಹದಗೊಳಿಸಿಕೊಂಡು, ಮಳೆಗಾಗಿ ಆಕಾಶದತ್ತ ನೋಡುತ್ತಿದ್ದರು. ಈ ಮಧ್ಯೆ ಸೋಮವಾರ ಸುಮಾರು ಗಂಟೆ ಮಳೆ ಸುರಿದು, ಕೃಷಿ ಚಟುವಟಿಕೆಗಳಿಗೆ ನಿರೀೆ ಮೂಡಿಸಿತ್ತು. ಕೆಲ ರೈತರು ಆಗಲೇ ರಾಗಿ ಬಿತ್ತನೆಯನ್ನೂ ಕೈಗೊಂಡಿದ್ದರು. ಈಗ ಬುಧವಾರ ಸಂಜೆ ಮತ್ತೆ ಬಿದ್ದ ಮಳೆಯಿಂದಾಗಿ ರೈತರು ಹರ್ಷಗೊಂಡಿದ್ದು, ಗುರುವಾರದಿಂದ ಹೋಬಳಿಯಾದ್ಯಂತ ರಾಗಿ ಹಾಗೂ ಅವರೆ ಬಿತ್ತನೆ ಚುರುಕುಗೊಳ್ಳಲಿದೆ.
ಕಾಲೋಚಿತ ಮಳೆ ಬಂದರಷ್ಟೇ ಉತ್ತಮ ಇಳುವರಿ: ಮುಂದಿನ ದಿನಗಳಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ಹೀಗೆಯೇ ಹದವಾದ ಮಳೆ ಸುರಿದರೆ ಈ ಬಾರಿ ರಾಗಿ, ಹುರುಳಿ, ಜೋಳ ಹಾಗೂ ಅವರೆ ಅಕ್ಟೋಬರ್ವೇಳೆಗೆ ರೈತರ ಕೈಗೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಭರವಸೆ ವ್ಯಕ್ತವಾಗಿದೆ.
ಬಳುವನಹಳ್ಳಿ ರೈತ ಕೃಷ್ಣಪ್ಪ ಮಾತನಾಡಿ, ಸಾಮಾನ್ಯವಾಗಿ ಮೇ ತಿಂಗಳ ಕೊನೇ ವಾರದಲ್ಲಿಯೇ ಬರಬೇಕಾಗಿದ್ದ ಮಳೆ ಆಗಸ್ಟ್ ಆರಂಭವಾದರೂ ಸುರಿದಿರಲಿಲ್ಲ. ಈ ವರ್ಷ ಬೆಳೆ ತೆಗೆಯಲು ಸಾಧ್ಯ ಇಲ್ಲವೇನೋ? ಎಂಬ ಆತಂಕಕ್ಕೆ ತಳ್ಳಲ್ಪಟ್ಟಿದ್ದೆವು. ತಡವಾಗಿಯಾದರೂ ಇದೀಗ ಬಿದ್ದಿರುವ ಮಳೆಯು ರೈತರ ಕೈ ಹಿಡಿಯುವ ಭರವಸೆ ಮೂಡಿಸಿದೆ.