The railway overbridge should be inaugurated soon. 
ರಾಜ್ಯ

ಶೀಘ್ರ ರೈಲ್ವೆ ಮೇಲ್ಸೇತುವೆ ಉದ್ಘಾಟಿಸಲಿ

ಬಂಗಾರಪೇಟೆ:

ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸದೆ ವಿಳಂಬ ಮಾಡುತ್ತಿರುವುದಕ್ಕೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಮೇಲ್ಸೇತುವೆಯಲ್ಲಿನ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ, ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರೈಲ್ವೆ ಇಲಾಖೆಯಿಂದ 26 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ ಬೂದಿಕೋಟೆ ರೈಲ್ವೆ ಮೇಲ್ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಗುರುವಾರ ರೈತ ಸಂಘದಿಂದ ಮೇಲ್ಸೇತುವೆ ಮುಂಭಾಗ ಪ್ರತಿಭಟನೆ ನಡೆಸಿದರು.

17ರಂದು ಸೇತುವೆ ಲೋಕಾರ್ಪಣೆ?

ಬೂದಿಕೋಟೆ ರೈಲ್ವೆ ಮೇಲ್ಸೇತುವೆ ಆ.17ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಮೂಲಗಳಿಂದ ತಿಳಿದುಬಂದಿದ್ದು, ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಲೋಕಾರ್ಪಣೆಗೊಳಿಸಲಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿ ಜನರಿಗೆ ಅನುಕೂಲವಾಗಲಿದೆ. ಜತೆಗೆ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಲಿದೆ.

ನಷ್ಟಗೊಂಡ ಬೆಳೆ, ಚನಕೆಗಳನ್ನು ಪ್ರದರ್ಶಿಸಿ ಸರ್ಕಾರದ ಗಮನ ಸೆಳೆದ ಪ್ರತಿಭಟನಾಕಾರರು, ಬರದಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಪ್ರತಿ ಎಕರೆಗೆ 1 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಮರಗಲ್​ ಶ್ರೀನಿವಾಸ್​ ಮಾತನಾಡಿ, ಕೂಲಿ ಕಾರ್ಮಿಕರ ಬದುಕಿನ ರಕ್ಷಣೆಗೆ ಮನರೇಗಾ ಯೋಜನೆಯಡಿ ವರ್ಷದ 365 ದಿನ ಕೆಲಸ ನೀಡಬೇಕು. ಕೂಲಿ ಕಾರ್ಮಿಕರ ಹೆಸರಿನಲ್ಲಿ ಯಂತ್ರಗಳ ಮೂಲಕ ಕಾಮಗಾರಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ನಿಗಾ ತಂಡ ರಚಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರು ತಹಸೀಲ್ದಾರ್​ ಸುಜಾತಾ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ಕಳುಹಿಸುವುದಾಗಿ ತಹಸೀಲ್ದಾರ್​ ಭರವಸೆ ನೀಡಿದರು.