ಮುಗಬಾಳ ಗ್ರಾಮ ಪಂಚಾಯಿತಿ ಕಚೇರಿ
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಮುಗಬಾಳ ಗ್ರಾಮ ಪಂಚಾಯಿತಿವ್ಯಾಪ್ತಿಗೆ 12 ಗ್ರಾಮಗಳು ಒಳಪಟ್ಟಿದ್ದು, 21 ಗ್ರಾಮ ಪಂಚಾಯಿತಿ ಸದಸ್ಯರುಗಳನ್ನೊಳಗೊಂಡ ಗ್ರಾಪಂಗೆ 72 ಲಕ್ಷ ರೂ. ವಾರ್ಷಿ ತೆರಿಗೆ ಬರುತ್ತಿದ್ದರೂ ಗ್ರಾಮ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.
ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿಚರಂಡಿ ಹೂಳು ತುಂಬಿದ್ದು, ಕಸ ತೆಗೆದು ಸ್ವಚ್ಛಗೊಳಿಸದೆ ಇರುವುದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇನ್ನೊಂದಡೆ ಚರಂಡಿಯ ನಿಮಾರ್ಣವೇ ಇಲ್ಲದಾಗಿದೆ. ಹಲವು ಕಡೆ ರಸ್ತೆ ಬದಿ ಕಸದ ರಾಶಿಗಳು ಬಿದ್ದಿದ್ದು, ಸಾರ್ವಜನಿಕರು ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮತ್ತೊಂದೆಡೆ ನೀರು ಸರಬರಾಜು ಆಗದ ಕಾರಣ ಐದಾರು ತಿಂಗಳಿಂದ ಮನೆಗಳಿಗೆ ಟ್ಯಾಂಕರ್ ಮುಖಾಂತರ 500 ರೂ.ಕೊಟ್ಟು ನೀರು ಹಾಕಿಸಿಕೊಳ್ಳುತ್ತಿದ್ದೇವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಿಡಘಟ್ಟ ಗ್ರಾಮದ ಮನೆ ನಲ್ಲಿಗಳಲ್ಲಿನೀರು ಸರಬರಾಜು ಸಮಸ್ಯೆ ಇದ್ದು, ಶುದ್ಧ ನೀರಿನ ಘಟಕ ಇದ್ದರೂ ಇಲ್ಲದಂತಾಗಿದೆ.ಗ್ರಾಮದ ಮಧ್ಯಭಾಗದಲ್ಲಿ ದೇವಾಲಯ, ಹಾಲಿನ ಡೇರಿ, ಅಂಗನವಾಡಿ ಮುಂಭಾಗಚರಂಡಿ ಸ್ವಚ್ಛಗೊಳಿಸದ ಕಾರಣ ಗಬ್ಬು ನಾರುತ್ತಿದೆ. ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದ್ದು, ಜನ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಏನಾದರೂ ಅನಾರೋಗ್ಯ ಕಾಣಿಸಿಕೊಂಡರೆ ಪಕ್ಕದ ಮೈಲಾಪುರ ಗೇಟಿನ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಇದ್ದು, ಕೆಲವೊಮ್ಮೆ ಅಲ್ಲೂ ವೈದ್ಯರಿಲ್ಲದಿರುವಾಗ ಸಂಕಷ್ಟ ಅನುಭವಿಸುವಂತಾಗಿದೆ.
ಸೋರುತ್ತಿದೆ ಅಂಗನವಾಡಿ : ನಿಡಘಟ್ಟ ಗ್ರಾಮದ 2 ಅಂಗನವಾಡಿ ಕೇಂದ್ರಗಳಲ್ಲಿ 92 ಮಕ್ಕಳು ದಾಖಲಾತಿ ಹೊಂದಿದ್ದು, ಒಂದೇ ಕಟ್ಟಡದಲ್ಲಿ 42 ಮಕ್ಕಳು ಕೂರುತ್ತಿದ್ದು, ಕಟ್ಟಡದ ಒಳಗಡೆ ಮಳೆ ಬಂದರೆ ನೀರು ನುಗ್ಗುತ್ತದೆ. ಗೋಡೆಗಳೆಲ್ಲ ಶಿಥಿಲಗೊಂಡಿದ್ದು, ಬಿದ್ದು ಹೋಗುವ ಹಂತದಲ್ಲಿವೆ. ಒಂದು ನ್ಯಾಯಬೆಲೆ ಅಂಗಡಿ ಇಲ್ಲ. ಘನ ತ್ಯಾಜ್ಯಕ್ಕೆ ಕಟ್ಟಿರುವ ಕಟ್ಟಡದಲ್ಲಿ ದಿನಸಿ ವಿತರಣೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬೀದಿದೀಪ ನಿರ್ವಹಣೆಯಲ್ಲಿ ಅವ್ಯವಹಾರ? : ನಿಡಘಟ್ಟ ಗ್ರಾಮದಲ್ಲಿ ವಿವಿಧ ಕಂಪನಿಗಳಿದ್ದು ವರ್ಷಕ್ಕೆ 20 ಲಕ್ಷ ರೂ.ಗೂ ಅಧಿಕ ತೆರಿಗೆ ವಸೂಲಿ ಮಾಡಲಾಗುತ್ತದೆ. ಆದರೂ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಎಂದು ಆರೋಪಿಸಲಾಗಿದೆ. ಕೆಂಬಿಗನಹಳ್ಳಿಯಲ್ಲಿ ಚರಂಡಿ ಸ್ವಚ್ಛತೆ ಮತ್ತು ಸ್ಮಶಾನಕ್ಕೆ ರಸ್ತೆ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಫೆಬ್ರವರಿಯಲ್ಲಿ ಸ್ಥಳಿಯ ಸದಸ್ಯರ ಅವಧಿ ಮುಗಿದಿದ್ದು, ಬೀದಿದೀಪ ನಿರ್ವಹಣೆಯಲ್ಲಿ ಪಂಚಾಯಿತಿ ಅಧಿಕಾರಿಗಳು ಲಕ್ಷ ಲಕ್ಷ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಗ್ರಾಪಂ ಸದಸ್ಯ ದೂರಿದ್ದಾರೆ.
ಗ್ರಾಮದಲ್ಲಿ ಸುಮಾರು ತಿಂಗಳಿಂದ ನೀರಿನ ಸಮಸ್ಯೆ ಇದ್ದು, ಚರಂಡಿಗಳು ತುಂಬಿ ತುಳುಕುತ್ತಿವೆ. ಅದರ ದುರ್ವಾಸನೆಗೆ ಮನೆಗಳಲ್ಲಿ ವಾಸಮಾಡಲು ದೊಡ್ಡ ಸವಾಲಾಗಿದೆ. ಎಲ್ಲಿ ನೋಡಿದರೂ ಕಸದ ರಾಶಿ ಎದ್ದು ಕಾಣುತ್ತದೆ. ಶುದ್ಧ ನೀರಿನ ಘಟಕ ಇದ್ದರೂ ಇಲ್ಲದಂತಾಗಿದೆ.
ಐದಾರು ತಿಂಗಳಿಂದ ನೀರಿನ ಸಮಸ್ಯೆ ಎದುರಾಗಿದ್ದು, ಗ್ರಾಮ ಪಂಚಾಯಿತಿಯಿಂದಾಗಲಿ, ಚುನಾಯಿತ ಪ್ರತಿನಿಧಿಗಳಿಂದಾಗಲಿ ಬಗೆಹರಿಸಲು ಸಾಧ್ಯವಾಗಿಲ್ಲ. ಚುನಾವಣೆ ವೇಳೆ ಸಲ್ಲದ ಆಶ್ವಾಸನೆ ಕೊಟ್ಟು ಮತ್ತೆ ಚುನಾವಣೆ ಸಮಯದಲ್ಲಿ ಬರುತ್ತಾರೆ.