- ರಾಜ್ಯಸಭೆ ಮಾದರಿಯಲ್ಲಿ ಚುನಾವಣೆ: ಅರುಣ್
- ಆಣೆ, ಪ್ರಮಾಣ ಬಗ್ಗೆ ಪ್ರಿಯಾಂಕ್ ಖರ್ಗೆ ಲೇವಡಿ
ವಿಧಾನ ಪರಿಷತ್ ಚುನಾವಣೆ ಬಳಿಕ ಚರ್ಚೆಗೆ ಗ್ರಾಸವಾಗಿದ್ದ ಅಡ್ಡ ಮತದಾನದ ವಿಷಯ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಚಂಡಮಾರುತವನ್ನೆ ಸೃಷ್ಟಿ ಮಾಡಿತು. ಅನುಮಾನದ ಮಾರುತವನ್ನೆ ಹೊತ್ತು ತಂದ ಅಡ್ಡಮತದಾನ ಪ್ರಕರಣದಿಂದ ಶಾಸಕರುಗಳ ನಡುವೆಯೇ ಅನುಮಾನ ಗಟ್ಟಿಯಾಗಿ ಮನೆ ಮಾಡುವಂತಾಗಿದೆ. ಆದರೆ ಅಡ್ಡಮತದಾನ ಮಾಡಿದವರು ಯಾರು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಎರಡೂ ಪಕ್ಷಗಳು ಹೆಣಗಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಒಂದು ಅಂದಾಜಿನ ಮೇಲೆ ಇಂತಿಥವರು ಅಡ್ಡಮತದಾನ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಏತನ್ಮಧ್ಯೆ ಹೈಕಮಾಂಡ್ ಬುಲಾವ್ ಮೇರೆಗೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅವರು ಹೈಕಮಾಂಡ್‌ಗೆ ಯಾವ ರೀತಿಯ ವಿವರಣೆಯನ್ನು ನೀಡುವುರು ಎನ್ನುವುದು ಕುತೂಹಲ ಕೆರಳಿಸಿದೆ.
ಅಡ್ಡಮತದಾನ ವಿಷಯಗಳು ನೇಪಥ್ಯಕ್ಕೆ ಸರಿಯುವ ಮುನ್ನ, ವ್ಯವಸ್ಥೆಯಲ್ಲಿನ ಲೋಪಗಳು ಸರಿಯಾಗಬೇಕು ಎನ್ನುವ ವಿಷಯವೂ ಗಂಭೀರವಾಗಿ ಮುನ್ನೆಲೆಗೆ ಬಂದಿದೆ.
ರಾಜ್ಯಸಭಾ ಚುನಾವಣೆ ಮಾದರಿಯಲ್ಲಿಯೇ ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆಯಬೇಕು ಎನ್ನುವ ಅಭಿಪ್ರಾಯಗಳು ಹೆಚ್ಚುತ್ತಿವೆ.
ಆಣೆ ಪ್ರಮಾಣ ಇಲ್ಲಿಗೆ ನಿಲ್ಲಿಸಿ : ಎಚ್ಡಿಕೆ
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅಡ್ಡಮತದಾನ ಮತ್ತು ಆಣೆ ಪ್ರಮಾಣ ವಿಷಯ ಇಲ್ಲಿಗೆ ನಿಲ್ಲಿಸೋಣ. ಈ ಸರ್ಕಾರ ಯಾರನ್ನ ಬೇಕಾದರೂ ಬ್ಲಾಕ್‌ಮೇಲ್ ಮಾಡುತ್ತೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯವರಿಗೆ ಸಲಹೆ ನೀಡಿದರು.
ಅಡ್ಡಮತದಾನ ಹೊಸದ್ದೇನಲ್ಲ. ಬಿಜೆಪಿ ನಾಯಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ. ಕಾಂಗ್ರೆಸ್ ಸರ್ಕಾರದಲ್ಲಿ ಹಣ ಬಲ ಮತ್ತು ತೋಳ ಬಲ ಹೆಚ್ಚಾಗಿದೆ. ಅವರು ರಾತ್ರೋರಾತ್ರಿ ಯಾರನ್ನ ಬೇಕಾದರೂ ಬ್ಲಾಕ್‌ಮೇಲ್ ಮಾಡಿ ಖರೀದಿಸಬಹುದು. ಇದು 2028ರ ಚುನಾವಣೆಗೆ ದಿಕ್ಕೂಚಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯಸಭೆ ಮಾದರಿಯಲ್ಲಿ ಚುನಾವಣೆ: ಅರುಣ್
ರಾಜ್ಯಸಭೆ ಚುನಾವಣೆಗೆ ಇರುವಂತೆಯೇ ವಿಧಾನ ಪರಿಷತ್ ಚುನಾವಣೆ ಮತವನ್ನು ಬೂತ್ ಏಜೆಂಟ್‌ಗೆ ತೋರಿಸಿ ಹಾಕುವಂತ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಬಿಜೆಪಿಯ ಹಿರಿಯ ಶಾಸಕ ಎಸ್.ಸುರೇಶ್ ಕುಮಾರ್ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬೆನ್ನಲ್ಲಿಯೇ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕೂಡ ಒತ್ತಾಯಿಸಿದ್ದಾರೆ.
ಆಣೆ, ಪ್ರಮಾಣ ಬಗ್ಗೆ ಲೇವಡಿ: ಪ್ರಿಯಾಂಕ್ ಖರ್ಗೆ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಮನ ಹೆಸರಲ್ಲೇ ಲೂಟಿ ಮಾಡುವ ಬಿಜೆಪಿಯವರು, ಮಂಜುನಾಥಸ್ವಾಮಿ ಹೆಸರಲ್ಲಿ ಸತ್ಯ ಹೇಳ್ತಾರಾ? ಬಿಜೆಪಿಯವರಿಗೆ ಅವರ ಪಕ್ಷವನ್ನು ನೋಡಿಕೊಳ್ಳಲು ಹೇಳಿ ಎಂದಿದ್ದಾರೆ.
ಖರ್ಗೆ ಸಾಹೇಬ್ರು ಹಿರಿಯರು ಅವರಿಗೆ ಅನುಭವವೂ ಇದೆ, ವಯಸ್ಸೂ ಇದೆ. ಯಾರನ್ನಾದ್ರೂ ಶಿಸ್ತಿನ ಹಾದಿಯಲ್ಲಿ ನಡೆಸುವ ಅಧಿಕಾರ ಇದೆ. ಬಿಜೆಪಿಯಲ್ಲಿ ಶಿಸ್ತೇ ಇಲ್ಲ. ಅದಕ್ಕೇ ಅಡ್ಡ ಮತದಾನ ಮಾಡಿದ್ದು ಅದಕ್ಕೇ ಮಂಜುನಾಥ್ ಸ್ವಾಮಿ ಹತ್ರ ಹೋಗ್ತಾ ಇರೋದು.
ಕಾಂಗ್ರೆಸ್ ನೂರು ಭಾಗವಾದರೂ ಆಗಲಿ, ಅವರಿಗೇನ್ ಸಮಸ್ಯೆ? ಯಾರ‌್ಯಾರು ಅಡ್ಡ ಮತದಾನ ಮಾಡಿದ್ದಾರೆ ಅನ್ನೋದನ್ನು ಮೊದಲು ಪರಿಶೀಲನೆ ಮಾಡಿ, ಆತ್ಮಾವಲೋಕನ ಮಾಡಿ ಬಿಜೆಪಿ ಅಧ್ಯಕ್ಷರು ಮಂಜುನಾಥ ಸ್ವಾಮಿ ಹತ್ರ ಹೋಗೋಣ ಅಂತಿದ್ದಾರೆ. ಪಾಪ ಬೇರೆಯವರು ಬೇಡ ಅಂತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
*ರಾಮನ ಹೆಸರಲ್ಲೇ ಲೂಟಿ ಮಾಡುವ ಬಿಜೆಪಿಯವರು, ಮಂಜುನಾಥಸ್ವಾಮಿ ಹೆಸರಲ್ಲಿ ಸತ್ಯ ಹೇಳ್ತಾರಾ? ಬಿಜೆಪಿಯವರಿಗೆ ಅವರ ಪಕ್ಷವನ್ನು ನೋಡಿಕೊಳ್ಳಲು ಹೇಳಿ.
-ಗೃಹ ಸಚಿವ ಪ್ರಿಯಾಂಕ್ ಖರ್ಗೆ