ವೀರಶೈವ ಮಹಾಸಭಾದ ಪದಾಧಿಕಾರಿಗಳು, ಸಮುದಾಯದ ಮುಖಂಡರು, ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಕಲಬುರಗಿ: ಜಗದ್ಗುರು ರೇಣುಕಾಚಾರ್ಯರ ಜಯಂತಿಯು ನಮ್ಮ ನಾಡಿನ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಸ್ಮರಿಸುವ ಸುದಿನವಾಗಿದೆ. ಮನುಕುಲಕ್ಕೆ ದಾರಿದೀಪವಾಗಿರುವ ಮಹಾನುಭಾವರ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ, ಜೀವನೋಪಾಯ ಹಾಗೂ ಉದ್ಯಮಶೀಲತೆ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ರವಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಧರ್ಮವು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಇದು ಸಕಲ ಮಾನವಕುಲಕ್ಕೂ ಮಾರ್ಗದರ್ಶನ ನೀಡುವ ಮತ್ತು ಜೀವನವನ್ನು ಸಾರ್ಥಕಗೊಳಿಸುವ ಉದಾತ್ತ ಧರ್ಮವಾಗಿದೆ ಎಂದು ಹೇಳಿದರು.
ಇಂದಿನ ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ಯುವಕರು ತಮ್ಮ ಮೂಲ ಬೇರುಗಳನ್ನು, ಧಾರ್ಮಿಕ ಆಚರಣೆಗಳನ್ನು ಮರೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಕ್ಕಳಲ್ಲಿ ಧಾರ್ಮಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ತಿಳಿಸಿದರು.
ಬೇಡಿಕೆಗಳ ಈಡೇರಿಕೆಗೆ ಸಚಿವರ ಭರವಸೆ
ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿಗಾಗಿ ವಿಶೇಷ ಪ್ರಾಧಿಕಾರ ರಚನೆ, ಜಂಗಮ ಸಮಾಜದ ವಿವಿಧ ಅಗತ್ಯಗಳಿಗಾಗಿ ಸಿ.ಎ ಸೈಟ್ ಮಂಜೂರು, ಜಗದ್ಗುರು ಅಭಿವೃಧ್ದಿ ಮಂಡಳಿಯನ್ನು ಸ್ಥಾಪನೆ ಕುರಿತಂತೆ ಸಮುದಾಯದ ಮುಖಂಡರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಶಾಸಕ ಎಂ.ವೈ.ಪಾಟೀಲ ಮಾತನಾಡಿ ಧರ್ಮವನ್ನು ಕೇವಲ ಒಂದು ಜಾತಿಗೆ ಅಥವಾ ಪದ್ಧತಿಗೆ ಸೀಮಿತಗೊಳಿಸಬಾರದು. ಧರ್ಮ ಎಂದರೆ ಬದುಕಿನ ಹಾದಿ. ರೇಣುಕಾಚಾರ್ಯರು ಸಾರಿದ ಶಾಂತಿ ಮತ್ತು ಸಹಬಾಳ್ವೆಯ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮತ್ತು ಉನ್ನತ ವಿಚಾರಗಳನ್ನು ಕಲಿಸಿಕೊಡುವುದು ತಾಯಂದಿರ ಜವಾಬ್ದಾರಿಯಾಗಿದೆ. ಕುಟುಂಬವೇ ಸಂಸ್ಕಾರದ ಮೊದಲ ಪಾಠಶಾಲೆ ಎಂಬುದನ್ನು ನೆನಪಿಸಿದರು. ಜಂಗಮ ಸಮಾಜವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಅದು ಅತ್ಯಂತ ಶ್ರೀಮಂತ ಸಮಾಜವಾಗಿದೆ. ಇಲ್ಲಿ ಆರ್ಥಿಕ ಸ್ಥಿತಿಗಿಂತಲೂ ಜ್ಞಾನ, ನಡವಳಿಕೆ ಮತ್ತು ಸದ್ಗುಣಗಳಿಗೆ ಹೆಚ್ಚಿನ ಮೌಲ್ಯ ನೀಡಲಾಗುತ್ತದೆ. ಈ ಶ್ರೀಮಂತಿಕೆಯನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯ ಎಂದರು.
ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅವರು ಮಾತನಾಡಿ, ರೇಣುಕಾಚಾರ್ಯರು ಸಮಾಜದಲ್ಲಿ ಜಾತಿ-ಭೇದವಿಲ್ಲದ ಸಮಾನತೆಯನ್ನು ಸಾರಿದ ಗುರುಗಳು. ಬಸವಣ್ಣನವರು ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರು ಸಮಾಜದ ಉದ್ಧಾರಕ್ಕಾಗಿ ಹೇಗೆ ಶ್ರಮಿಸಿದರೋ, ಅದೇ ಮಾದರಿಯಲ್ಲಿ ರೇಣುಕಾಚಾರ್ಯರು ಸಮಾಜದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದ್ದರು. ವೀರಶೈವ ಸಮಾಜವು ಸೌಜನ್ಯ, ಒಳ್ಳೆಯತನ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಸಾಗಬೇಕು ಎಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್.ಎಂ. ಹಿರೇಮಠ ಅವರು ವಿಶೇಷ ಉಪನ್ಯಾಸ ನೀಡಿ, ಧರ್ಮ ಎನ್ನುವ ಶಬ್ದ ಕೇವಲ ಅಷ್ಟಕ್ಕೆ ಸೀಮಿತವಾಗದೆ, ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡಾಗ ಮಾತ್ರ ಧರ್ಮವು ಪರಿಪೂರ್ಣವಾಗುತ್ತದೆ. ಮನುಷ್ಯ ಕೂಡ ಒಂದು ಜೀವಿ, ಆದರೆ ಅವನು ಸಮಾಜ, ನಾಗರಿಕತೆ ಮತ್ತು ಸಂಸ್ಕೃತಿಯನ್ನು ಹೊಂದಿರುವಂತಹ ವಿಶಿಷ್ಟ ಜೀವಿ. ಸಮಾಜ ಮತ್ತು ಸಂಸ್ಕೃತಿ ಇರುವ ಕಡೆ ಧರ್ಮದ ಅನಿವಾರ್ಯತೆ ಇರುತ್ತದೆ. ಕೇವಲ ತಿನ್ನುವುದು, ಮಲಗುವುದು ಮತ್ತು ಸಂತಾನೋತ್ಪತ್ತಿ ಮಾಡುವುದಷ್ಟೇ ಬದುಕಿನ ಗುರಿಯಾಗಿದ್ದರೆ ಅಂತಹವರಿಗೆ ಧರ್ಮದ ಅವಶ್ಯಕತೆಯಿಲ್ಲ. ಆದರೆ ಮನುಷ್ಯನಾಗಿ ಬದುಕುವಾಗ ಧರ್ಮ, ನೈತಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ಇದಕ್ಕೂ ಮುನ್ನ ನಗರದ ಸೂಪರ್ ಮಾರ್ಕೆಟ್ ಪ್ರದೇಶದ ಪೋಲಿಸ್ ಚೌಕ್ ದಿಂದ ರಂಗಮಂದಿರ ವರೆಗೆ ಪೂಜ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಸಲಗರ್ ಗ್ರಾಮದ ಪೂಜ್ಯ ಶ್ರೀ ಷ. ಬ್ರ. ದ್ವಿತೀಯ ಸಾಂಬಶಿವ ಶಿವಾಚಾರ್ಯರ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಅ. ನಾಸಿ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶಿವಪ್ರಭು ಹಿರೇಮಠ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ. ಶರಣಕುಮಾರ್ ಮೋದಿ, ಜಿಲ್ಲಾ ಜಂಗಮ ಸಮಾಜ ಅಧ್ಯಕ್ಷ ಬಸವರಾಜ ಮಠಪತಿ ಕಮಲಾಪುರ, ಡಾ.ಸುಧಾ ಹಾಲಕಾಯಿ, ಜ್ಯೋತಿ ಪಾಟೀಲ್ ನಾಗಯ್ಯ ಮಠಪತಿ ಸೇರಿದಂತೆ
ವೀರಶೈವ ಮಹಾಸಭಾದ ಪದಾಧಿಕಾರಿಗಳು, ಸಮುದಾಯದ ಮುಖಂಡರು, ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.