ಕಲಬುರಗಿ ಕಲಾಮಂಡಳ ಸಭಾಂಗಣದಲ್ಲಿ ಸಾಂಸತಿಕ ಪ್ರತಿಷ್ಠಾನ ಸಿರಿಗನ್ನಡ ವೇದಿಕೆ ಹಾಗೂ ಸಾ ಪ್ರತಿಷ್ಠಾನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಗವಿಸಿದ್ದಪ್ಪ ಪಾಟೀಲರ ಕೆಂಪು ಗುಲಾಬಿ ಹಾಯಿಕುಗಳು ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊ.ವಿಕ್ರಮ ವಿಸಾಜಿ, ಮಹಿಪಾಲರಡ್ಡಿ ಮುನ್ನೂರು, ಡಾ.ಗವಿಸಿದ್ದಪ್ಪ ಪಾಟೀಲ್​, ಬಸವರಾಜ ಕೊನೆಕ್​, ಡಾ.ಹಣಮಂತರಾವ್​ ದೊಡ್ಡಮನಿ, ಡಾ.ಸಿದ್ದರಾಮ ಹೊನ್ಕಲ್​ ಇತರರಿದ್ದರು. 
ರಾಜ್ಯ

ಹಾಯಿಕು ಕಾವ್ಯದಲ್ಲಿ ಧನಾತ್ಮಕ ಅಂಶ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ಸಿಯುಕೆ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಹೇಳಿಕೆ
  • ಕೆಂಪು ಗುಲಾಬಿ ಹಾಯಿಕು ಸಂಕಲನ ಲೋಕಾರ್ಪಣೆ
ಕಲಬುರಗಿ: ಜಪಾನಿನ ಹಾಯಿಕು ಕಾವ್ಯ ಪ್ರಕಾರವು ಸಕಾರಾತ್ಮಕ ಚಿಂತನೆಗಳ ಆಧಾರಿತವಾಗಿದ್ದು, ಕನ್ನಡದಲ್ಲಿಯೂ ಅದೇ ಧನಾತ್ಮಕ ಮನೋಭಾವದೊಂದಿಗೆ ಬೆಳೆಯುತ್ತಿರುವುದು ಸಂತಸದ ಸಂಗತಿ ಎಂದು ವಿದ್ವಾಂಸ, ಸಿಯುಕೆ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ ಹೇಳಿದರು.
ನಗರದ ಕಲಾಮಂಡಳ ಸಭಾಂಗಣದಲ್ಲಿ ಕಲಬುರಗಿ ಸಾಂಸತಿಕ ಪ್ರತಿಷ್ಠಾನ ಸಿರಿಗನ್ನಡ ವೇದಿಕೆ ಹಾಗೂ ಸಾ ಪ್ರತಿಷ್ಠಾನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಗವಿಸಿದ್ದಪ್ಪ ಪಾಟೀಲರ ಕೆಂಪು ಗುಲಾಬಿ ಹಾಯಿಕುಗಳು ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಾಯಿಕು ಕಾವ್ಯದಲ್ಲಿ ತಾತ್ವಿಕ ಚಿಂತನೆ ಪ್ರಮುಖವಾಗಿದ್ದು, ಕಾವ್ಯದ ಭಾಷೆಯನ್ನು ಬಳಸುವಲ್ಲಿ ವಿವೇಕ ಅಗತ್ಯ. ಪ್ರಕೃತಿ, ದೈವೀ ಆರಾಧನೆ ಸೇರಿ ಧನಾತ್ಮಕ ಅಂಶಗಳನ್ನು ಒಳಗೊಂಡಿರುವ ಹಾಯಿಕುಗಳಲ್ಲಿ ನಕಾರಾತ್ಮಕ ವಿಚಾರಗಳಿಗೆ ಅವಕಾಶವಿಲ್ಲ. ಅಕ್ಷರಗಳ ಪಾವಿತ್ರ$್ಯವೇ ಈ ಕಾವ್ಯ ಪ್ರಕಾರದ ಜೀವಾಳ ಎಂದು ಹೇಳಿದರು.
ಕವಿ ಡಾ.ಗವಿಸಿದ್ದಪ್ಪ ಪಾಟೀಲ ಅವರು ವಿದ್ಯಾರ್ಥಿ ದಿಸೆಯಿಂದಲೇ ಅಪಾರ ಓದುಗರಾಗಿದ್ದು, ಜೀವನದ ಹಲವು ತಿರುವುಗಳ ನಡುವೆಯೂ ಓದು, ಅಧ್ಯಯನ ಮತ್ತು ಬರಹ ಮುಂದುವರಿಸಿರುವುದು ಅವರ ಕಾವ್ಯಶಕ್ತಿ ತೋರಿಸುತ್ತದೆ ಎಂದು ಶ್ಲಾಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ದರಾಮ ಹೊನ್ನಲ್​ ಮಾತನಾಡಿದರು.
ಕೃತಿ ಪರಿಚಯ ಮಾಡಿದ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ, ಹಾಯಿಕು ಕಾವ್ಯದ ಇತಿಹಾಸ ಹಾಗೂ ಕನ್ನಡದಲ್ಲಿ ಅದರ ಬೆಳವಣಿಗೆ ವಿವರಿಸಿ, ಗವಿಸಿದ್ದಪ್ಪ ಪಾಟೀಲರು ವೈವಿಧ್ಯಮಯ ವಿಷಯಗಳ ಮೂಲಕ ಹಾಯಿಕು ಕಾವ್ಯಕ್ಕೆ ಹೊಸ ಆಯಾಮ ನೀಡಿದ್ದಾರೆ ಎಂದು ಹೇಳಿದರು.
ಪ್ರಕಾಶಕ ಬಸವರಾಜ ಕೊನೇಕ್​ ಮಾತನಾಡಿ, ಬರವಣಿಗೆಯನ್ನು ತಪಸ್ಸಿನಂತೆ ಸ್ವೀಕರಿಸಿದ ಪಾಟೀಲರ ಕೃತಿಗಳು ಹೆಚ್ಚಿನ ಜನಪ್ರಿಯತೆ ಪಡೆಯಲಿ ಎಂದು ಹಾರೈಸಿದರು. ಕನ್ನಡ ನಾಡು ಲೇಖಕರ ಓದುಗರ ಸಂದ ಅಧ್ಯಕ್ಷ ಅಪ್ಪಾರಾವ್​ ಅಕ್ಕೋಣಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಡಾ.ಹನುಮಂತರಾವ ದೊಡ್ಡಮನಿ ಮಾತನಾಡಿ, ಇಂದಿನ ಕವಿಯ ಬರಹಗಳು ಎಲ್ಲರಿಗೂ ಮೆಚ್ಚುಗೆಯಾಗಿದ್ದು, ಸಾಹಿತ್ಯಾಸಕ್ತರು ಒಂದೇ ವೇದಿಕೆಯಲ್ಲಿ ಸೇರುವುದು ಸಂತಸದ ಸಂಗತಿ ಎಂದರು.
ಹಾಯಿಕು ಸಿರಿ ಪ್ರಶಸ್ತಿಯನ್ನು ಸಾಹಿತಿ ಪ್ರಭಾಕರ ಜೋಷಿ, ಡಾ.ಜಯದೇವಿ ಗಾಯಕವಾಡ, ಡಾ.ವಿಜಯಕುಮಾರ ಜಿ. ಪರುತೆ, ಡಾ.ಮಲ್ಲಿನಾಥ ತಳವಾರ, ಆರತಿ ಕಡಗಂಚಿ, ಶಿವಲೀಲಾ ಡೆಂಗಿ ಹಾಗೂ ಉತ್ತಮ ದೊಡ್ಮನಿ ಅವರಿಗೆ ಪ್ರದಾನ ಮಾಡಲಾಯಿತು.
ಕವಿಗೋಷ್ಠಿಯಲ್ಲಿ ಡಾ.ಶೀಲಾದೇವಿ ಬಿರಾದಾರ, ಡಾ.ಕಪಿಲ್​ದೇವ ಚಕ್ರವರ್ತಿ, ಡಾ.ಬಿ.ಆರ್​.ಅಣ್ಣಾಸಾಗರ್​, ಭೀಮಸೇನ ಗಾಯಕವಾಡ ಇತರರು ಹಾಯಿಕುಗಳನ್ನು ವಾಚಿಸಿದರು. ಸಾಹಿತಿ ಬಿ.ಎಚ್​.ನಿರಗುಡಿ ಇತರರಿದ್ದರು.
"

ನೂರಾರು ಕೃತಿಗಳನ್ನು ರಚಿಸಿರುವ ಗವಿಸಿದ್ದಪ್ಪ ಪಾಟೀಲರು ಹಾಯಿಕು ಸಂಕಲನದ ಮೂಲಕ ಮತ್ತೊಂದು ಕಾವ್ಯ ಪ್ರಕಾರದಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಹೊರಗಿನ ದೇಶದಿಂದ ಬಂದ ಹಾಯಿಕು ಈಗ ಕನ್ನಡಕ್ಕೆ ಒಗ್ಗಿ ನಮ್ಮದೇ ಕಾವ್ಯ ಪ್ರಕಾರವಾಗಿ ಬೆಳೆಯುತ್ತಿರುವುದು ಸಂತಸದ ಸಂಗತಿ.

ಡಾ.ಸಿದ್ಧರಾಮ ಹೊನ್ಕಲ್​,

ಸದಸ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ.