ಸವಳು-ಜವಳು ಭೂಮಿ 
ರಾಜ್ಯ

ಸವಳು-ಜವಳು ಭೂಮಿಗೆ ಸಿಗುತ್ತಿಲ್ಲ ಉಪಚಾರ

ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು
ಸಕಾಲದಲ್ಲಿ ಮಳೆಯಾಗಿ ಕರೆ ಕಟ್ಟೆಗಳು ತುಂಬಿದ್ದರೂ ಫಲವತ್ತತೆ ಕೊರತೆಯಿಂದ ದಿನೇ ದಿನೆ ಸವಳು-ಜವಳು ಭೂಮಿ ಹೆಚ್ಚಾಗುತ್ತಿದ್ದು, ಕೃಷಿ ಉತ್ಪಾದನೆಯಲ್ಲಿ ಕುಂಠಿತವಾಗುವ ಆತಂಕ ರೈತರಲ್ಲಿ ಎದುರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಿಗೆ ಬರಬೇಕೆಂಬ ಆಗ್ರಹ ಕೇಳಿಬಂದಿವೆ.
ರಾಜ್ಯ ದೂರ ಸಂವೇದಿಕ ಅನ್ವಯಿಕ ಕೇಂದ್ರದ ಮಾಹಿತಿ ಅನ್ವಯ 2022ನೇ ಸಾಲಿನಲ್ಲಿ ರಾಜ್ಯದಲ್ಲಿ 41,816.80 ಹೆಕ್ಟೇರ್ ಸವಳು ಜವಳು ಪ್ರದೇಶವನ್ನು ಗುರುತಿಸಲಾಗಿತ್ತು. ಆದರೆ, ಇದೀಗ 2026ರ ಮಾಹಿತಿ ಪ್ರಕಾರ ರಾಜ್ಯದಲ್ಲಿ 77,646.6 ಹೆಕ್ಟೇರ್ ಮಳೆ ಮಿಶ್ರಿತ ಸವಳು -ಜವಳು ಬಾಧಿತವಾಗಿದೆ. ಇದರಲ್ಲಿ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ 56,621.34 ಹೆಕ್ಟೇರ್ ಭೂಮಿ ಸವಳು-ಜವಳಾಗಿ ಲವತ್ತತೆ ಕಳೆದುಕೊಂಡಿರುವುದು ಸರ್ಕಾರದ ವರದಿಯಲ್ಲಿ ಬೆಳಕಿಗೆ ಬಂದಿದೆ.
ನಗರೀಕರಣದ ವೇಗದಿಂದಾಗಿ ಒಂದು ಕಡೆ ಕೃಷಿ ಭೂಮಿ ಕಡಿಮೆಯಾಗುತ್ತಿದ್ದರೆ ಮತ್ತೊಂದು ಕಡೆ ಇರುವ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಾ ಸಾಗುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಕೃಷಿ ಪದ್ದತಿ. ಅತಿಯಾದ ಗಡಸು ನೀರು ಬೋರ್‌ವೆಲ್ನಲ್ಲಿ ಮೇಲೆತ್ತಿ ನೀರಾವರಿಗೆ ಬಳಸುತ್ತಿರುವುದು, ರಾಸಾಯನಿಕ ಗೊಬ್ಬರ ಬಳಕೆ ಪ್ರಮಾಣ ಹೆಚ್ಚಿಸಿರುವುದು, ಮಳೆಯ ಪ್ರಮಾಣಕ್ಕಿಂತ ನೀರಿನ ಆವಿಯಾಗುವ ಪ್ರಮಾಣ ಹೆಚ್ಚಾಗುವ ಪರಿಣಾಮ ಮೇಲ್ಭಾಗದಲ್ಲಿ ಲವಣಯುಕ್ತ ಉಪ್ಪು ಶೇಖರಣೆ ಆಗಿ ಕೃಷಿ ಭೂಮಿಯು ಸವಳು ಜವಳಾಗಿ ನಿರುಪಯುಕ್ತ ಆಗಲು ಪ್ರಮುಖ ಕಾರಣವಾಗಿದೆ.
ಒಣ ಭೂಮಿ ಪ್ರದೇಶಗಳಲ್ಲಿ ಅಂತರ್ಜಲವು ಸಾಮಾನ್ಯವಾಗಿ ಗಣನೀಯ ಪ್ರಮಾಣದಲ್ಲಿ ಕರಗುವ ಲವಣಗಳನ್ನು ಹೊಂದಿರುತ್ತದೆ. ಬಾವಿ, ಕೂಳವೆ ಬಾವಿಗಳಲ್ಲಿ ಸಿಗುತ್ತಿರುವ ನೀರನ್ನು ಪರೀಕ್ಷಿಸದೇ ಜಮೀನುಗಳಿಗೆ ಬಳಸುವ ಕಾರಣ ಹೆಚ್ಚಿನ ಸಲು ಸಿಗದೆ ರೈತರು ನಷ್ಟ ಅನುಭವಿಸುತ್ತಾರೆ.
ಅಸಮರ್ಪಕ ಮತ್ತು ನೀರಿನ ದುರ್ಬಲ ಬಳಕೆಯಿಂದಾಗಿ ಅನೇಕ ಲವಣಯುಕ್ತ ಮಣ್ಣುಗಳನ್ನು ಅಚ್ಚುಕಟ್ಟು ಪ್ರದೇಶಗಳಲ್ಲಿ ಕಾಣಬಹುದಾಗಿದೆ. ನೀರಿನ ಇಂಗುವಿಕ ಕಡಿಮೆಯಿದ್ದಲ್ಲಿ ಮತ್ತು ಮಣ್ಣಿನ ಮೇಲ್ಪದರದಲ್ಲಿ ಲವಣಗಳು ಶೇಖರಣೆಯಾಗುವುದು, ಅಲ್ಲದೇ ಬೇರುಗಳು ಸಹ ಲವಣಗಳು ಕೆಳಗೆ ಬಸಿಯುವುದನ್ನು ತಡೆಯುತ್ತದೆ. ಬಂಡೆಗಳ ರಾಸಾಯನಿಕ ಕ್ರಿಯೆಯಿಂದ ಲವಣಗಳು ನೇರವಾಗಿ ಬಿಡುಗಡೆಗೊಳ್ಳುತ್ತವೆ. ಸೋಡಿಯಂ ಲವಣ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಲವಣಗಳಿಗಿಂತ ಹೆಚ್ಚು ಹಾನಿಕಾರಕವಾಗಿವೆ. ಇವೆಲ್ಲ ಭೂಮಿ ಸವಳು ಜವಳಾಗಲು ಕಾರಣವಾಗಲಿದೆ.
ಅಚ್ಚುಕಟ್ಟು ಪ್ರದೇಶದಲ್ಲಿ ಹನಿ ನೀರಾವರಿಗಿಂತ ಹೆಚ್ಚಾಗಿ ನೀರು ಹರಿಸುವ ಪದ್ಧತಿಯಿಂದಲೂ ಭೂಮಿ ಲವತ್ತತೆ ಕಳೆದುಕೊಳ್ಳಲಿದೆ. ಜತೆಗೆ ಒಂದೇ ಬೆಳೆಯನ್ನು ಬೆಳೆಯುವ ಪರಿಣಾಮ ಭೂಮಿಯಲ್ಲಿ ಲವತ್ತತೆ ಕಡಿಮೆಯಾಗುತ್ತದೆ. ಮಿಶ್ರ ಬೆಳೆ ಮತ್ತು ನೈಸರ್ಗಿಕ ಬೆಳೆ ಬೆಳೆಯದಿದ್ದರೇ ಸವಳು- ಜವಳು ಭೂಮಿಯಾಗಿ ಪರಿವರ್ತನೆಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯ

ಜಲಾನಯನ ಇಲಾಖೆಯ ಕಾಡಾ ನಿರ್ದೇಶನಾಲಯ ಮತ್ತು ಕೃಷಿ ಇಲಾಖೆ ನಡುವೆ ಸಮನ್ವಯತೆ ಇಲ್ಲದ ಕಾರಣ ಸವಳು -ಜವಳು ಭೂಮಿಯನ್ನು ಲವತ್ತತೆ ಮಾಡುವ ಯೋಜನೆ ಅನುಷ್ಠಾನದಲ್ಲಿ ಹಿನ್ನಡೆಯಾಗುತ್ತಿದೆ. ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಉಪ ಯೋಜನೆ- ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆ ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವೆ ಶೇ.60:40ರ ಅನುಪಾತದಲ್ಲಿ ಸವಳು ಜವಳು ಜಮೀನು ಉಪಚರಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ವ್ಯಾಪ್ತಿ ವಿಚಾರದಲ್ಲಿ ಎರಡು ಇಲಾಖೆಯಲ್ಲಿ ಗೊಂದಲ ಉಂಟಾಗಿದೆ. ಮತ್ತೊಂದೆಡೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ನರೇಗಾ ಯೋಜನೆಯಲ್ಲಿ ಸವಳು-ಜವಳು ಬಾಧಿತ ಮತ್ತು ಜಾಲವೃತ ಪ್ರದೇಶವನ್ನು ಗುರುತಿಸಿ ವೈಜ್ಞಾನಿಕವಾಗಿ ಬಸಿಕಾಳುವೆಗಳ ನಿರ್ಮಾಣ ಮಾಡಲಾಗುತ್ತಿತ್ತು. ನರೇಗಾ ಯೋಜನೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮಣ್ಣಿನ ಉಪಚರಿಸುವ ಕೆಲಸಕ್ಕೂ ಗ್ರಹಣ ಬಡಿದಿದೆ.

4.18 ಕೋಟಿಗೆ ಕೇಂದ್ರಕ್ಕೆ ಪತ್ರ :

2016-17ನೇ ಸಾಲಿನಿಂದ 2025-26ರ ವರೆಗೆ 31.43 ಕೋಟಿ ರೂ.ಗಳ ವೆಚ್ಚದಲ್ಲಿ ಸವಳು- ಜವಳು ಬಾಧಿತ ಪ್ರದೇಶದಲ್ಲಿ ಬಸಿಕಾಲುವೆ ನಿರ್ಮಾಣ ಮೂಲಕ ಮಣ್ಣಿನ ಸುಧಾರಣೆಗೆ 4208.19 ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ. ಮತ್ತಷ್ಟು ಭೂಮಿಯ ಅಭಿವೃದ್ಧಿಗೆ ಕೇಂದ್ರದಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸಮಸ್ಯಾತ್ಮಕ ಮಣ್ಣು ಸುಧಾರಣೆ ಕಾರ್ಯಕ್ರಮದಡಿ 4.18 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಕೃಷಿ ಇಲಾಖೆ ಕೇಳಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಪ್ರತಿಕ್ರಿಯೆ ಬಂದಿಲ್ಲ.


ಉತ್ತರ ಕರ್ನಾಟಕದ ಮಳೆಯಾಶ್ರಿತದಲ್ಲಿ ಸವಳು-ಜವಳು ಪ್ರದೇಶ ಮಾಹಿತಿ

ಜಿಲ್ಲೆ ಹೆಕ್ಟೇರ್‌ನಲ್ಲಿ
---------------------------
ಬಾಗಲಕೋಟೆ 1907.76
ಬಳ್ಳಾರಿ 818.28
ಬೆಳಗಾವಿ 1271.04
ಧಾರವಾಡ 222.65
ಗದಗ 700.56
ಹಾವೇರಿ 43.73
ಕಲಬುರಗಿ 246.40
ಕೊಪ್ಪಳ 7488.57
ರಾಯಚೂರು 22463.38
ಉತ್ತರಕನ್ನಡ 485.44
ವಿಜಯನಗರ 17750.18
ವಿಜಯಪುರ 51.16
ಯಾದಗಿರಿ 3172.21
---------------------------------
ಒಟ್ಟು 56621.34