ಆನೇಕಲ್​ ತಾಲೂಕಿನ ಸೂರ್ಯ ನಗರದ ಎರಡನೇ ಹಂತದಲ್ಲಿ ನಿರ್ಮಾಣ ಮಾಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಭವ್ಯ ಬಂಗಲೆಯು ಭೂತ ಬಂಗಲೆಯಾಗಿರುವುದು. 
ರಾಜ್ಯ

ಭೂತಬಂಗಲೆಯಾದ ಮಾಲಿನ್ಯ ನಿಯಂತ್ರಣ ಮಂಡಳಿ / ANEKAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನವೀನ್​ಶೆಟ್ಟಿ ಕೆರಾಡಿ ಆನೇಕಲ್​
ತಾಲೂಕಿನ ಸೂರ್ಯ ನಗರದ ಎರಡನೇ ಹಂತದಲ್ಲಿ ನಿರ್ಮಾಣ ಮಾಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಭವ್ಯ ಬಂಗಲೆಯು ಭೂತ ಬಂಗಲೆಯಾಗಿ ಪರಿವರ್ತನೆಯಾಗಿದೆ.
ಮಾಲಿನ್ಯ ಕಾಪಾಡಬೇಕಾದ ಜವಾಬ್ದಾರಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳದು. ಆದರೆ ಇದೇ ಅಧಿಕಾರಿಗಳು ಮುಖ್ಯ ಸ್ಥಾನದಲ್ಲಿ ಇರದೆ ಬೆಂಗಳೂರಿನ ರಾಜಾಜಿನಗರದಲ್ಲಿ ತಳ ಊರಿರುವುದರಿಂದ ಕಟ್ಟಡ ಉದ್ಘಾಟನೆ ಆದ ತಿಂಗಳಲ್ಲೆ ಬೀಗ ಹಾಕಲಾಗಿದೆ, ಆದರೆ ಬೆಳಗ್ಗೆ ಹಾಗೂ ಸಂಜೆ ವಾಚ್​ಮ್ಯಾನ್​ ಬೀಗ ಹಾಕಿ ತೆಗೆಯುತ್ತಿದ್ದು, ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನ ನೀರಲ್ಲಿ ಹೋಮ ಮಾಡಿದಂತಾಗಿದೆ.
ಸೂರ್ಯ ನಗರದ ಎರಡನೇ ಹಂತದಲ್ಲಿರುವ ನಾಗನಾಯಕನಹಳ್ಳಿ ಬಳಿ ಕರ್ನಾಟಕ ಹೌಸಿಂಗ್​ ಬೋರ್ಡ್​ಗೆ 2013ರಲ್ಲಿ ಸಿ.ಎ. ಸೈಟ್​ ಪಡೆದು ಮುಕ್ಕಾಲು ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಿ 2016ರ ಆಸುಪಾಸಿನಲ್ಲಿ ಉದ್ಘಾಟನೆ ಮಾಡಲಾಯಿತು. ಆದರೆ ಉದ್ಘಾಟನೆ ಆದ ಒಂದೇ ತಿಂಗಳಲ್ಲಿ ಇಲ್ಲಿನ ಅಧಿಕಾರಿಗಳು ಮತ್ತೆ ಬೆಂಗಳೂರಿನ ರಾಜಾಜಿನಗರಕ್ಕೆ ಸ್ಥಳಾಂತರವಾದರು. ಹೀಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ಕಟ್ಟಡವೀಗ ಅನಾಥವಾಗಿದೆ. ಕಟ್ಟಡದಲ್ಲಿ ನೊಣ ಹೊಡೆಯುವವರೂ ಗತಿಯಿಲ್ಲದೆ ಪೀಠೋಪಕರಣಗಳೂ ಹಾಳಾಗುತ್ತಿದ್ದು, ಗಿಡಗಂಟಿಗಳು ಬೆಳೆದು ಮಾಲಿನ್ಯ ನಿಯಂತ್ರಣ ಮಂಡಳಿಯೀಗ ಮಾಲಿನ್ಯ ಕಚೇರಿಯಾಗಿದೆ.
25000 ರೂಪಾಯಿ ಡೀಸೆಲ್​ ಖರ್ಚು ವಸೂಲಿ : ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಕಟ್ಟಡದ ಸುತ್ತ ಇರುವ ಗೇಟ್​ಗಳಿಗೆ ಬೀಗ ಹಾಕಿದ್ದು, ಪ್ರತಿದಿನ ಬರಬೇಕಾದ ಅಧಿಕಾರಿಗಳು ಬೆಂಗಳೂರಿನಿಂದ ಆಗಾಗ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ವಾಪಸ್​ ಹೋಗುತ್ತಿದ್ದಾರೆ. ಬೆಂಗಳೂರಿನಿಂದ ಇಲ್ಲಿಗೆ ಬಂದು ಒಂದು ದಿನಕ್ಕೆ 160 ಕಿಲೋಮೀಟರ್​ ವಾಪಸ್​ ಹೋಗುತ್ತಿದ್ದೇವೆ ಎನ್ನುವ ಲೆಕ್ಕವನ್ನು ಸಹ ಸರ್ಕಾರಕ್ಕೆ ನೀಡಿ ವಾಹನದ ಹಣವನ್ನು ಅಧಿಕಾರಿಗಳು ವಸೂಲಿ ಮಾಡುತ್ತಿದ್ದಾರೆ. ಬೆಂಗಳೂರಿನ ರಾಜಾಜಿನಗರದಿಂದ ಜಿಗಣಿ ಹಾಗೂ ಆನೇಕಲ್​ ಸುತ್ತಮುತ್ತ ಕೈಗಾರಿಕಾ ಪ್ರದೇಶಕ್ಕೆ ಬಂದು ಹೋಗಲು ತಿಂಗಳಿಗೆ 25000 ರೂಪಾಯಿ ಡೀಸೆಲ್​ ಖರ್ಚು ಎಂದು ವಸೂಲಿ ಮಾಡಲಾಗುತ್ತಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಕಚೇರಿ ನೀಡಿದ ಬಳಿಕ ಬೆಂಗಳೂರಿನಿಂದ ಬಂದು ಹೋಗಲು ಇಷ್ಟೊಂದು ದುಂದು ವೆಚ್ಚ ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಸೆಕ್ಯೂರಿಟಿ ನೇಮಕ : ಯಾವುದೇ ಅಧಿಕಾರಿಗಳು ಇಲ್ಲಿನ ಕಚೇರಿಗೆ ಬರುತ್ತಿಲ್ಲ, ಬದಲಾಗಿ ಕಟ್ಟಡದ ಸುತ್ತಮುತ್ತ ಇರುವ ಎಲ್ಲ ಗೇಟ್​ಗಳಿಗೂ ಬೀಗ ಹಾಕಲಾಗಿದ್ದು, ಒಂದು ಬೀಗವನ್ನು ವಾಚ್​ಮ್ಯಾನ್​ ಒಬ್ಬರಿಗೆ ನೀಡಿದ್ದಾರೆ. ಪ್ರತಿದಿನ ಬೆಳಗ್ಗೆ ಬಂದು ಕಚೇರಿ ಒಳಗೆ ಹೋಗುವ ವಾಚ್​ಮ್ಯಾನ್​ ಸಂಜೆ ಬೀಗ ಹಾಕಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಹಾಗೂ ಕಟ್ಟಡವನ್ನು ಕಾಪಾಡಿಕೊಳ್ಳಲು ಸರ್ಕಾರದ ಹಣವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ವ್ಯಯ ಮಾಡುತ್ತಿದ್ದಾರೆ. ಕಟ್ಟಡದ ಸುತ್ತಮುತ್ತ ಓಡಾಡಲು ಭಯಪಡುವ ರೀತಿಯಲ್ಲಿ ಕುರುಚಲು ಗಿಡ ಹಾಗೂ ಕಸ ಕಡ್ಡಿಗಳು ರಾಶಿ ಆಗಿವೆ.
ಕೇಂದ್ರ ಸ್ಥಾನದಲ್ಲಿ ಇದ್ದು ಮಾಲಿನ್ಯ ಕಾಪಾಡಿ : ಆರು ಕೈಗಾರಿಕಾ ಪ್ರದೇಶಗಳು ಇರುವ ಆನೇಕಲ್​ ಸೂರ್ಯ ನಗರ ಎರಡನೇ ಹಂತದಲ್ಲಿ ಕಚೇರಿಯಲ್ಲಿ ಅಧಿಕಾರಿಗಳು ಇದ್ದು, ಅನಾಹುತಗಳು ಆಗದಂತೆ ಹಾಗೂ ಮಾಲಿನ್ಯ ಮಾಡದಂತೆ ಕಾಪಾಡಬೇಕು. ಕೈಗಾರಿಕೆಗಳಿಂದ ಕೆರೆಗಳಿಗೆ ಕಲುಷಿತ ನೀರನ್ನು ಬಿಡುತ್ತಿದ್ದು ಇದನ್ನು ಕಂಟ್ರೋಲ್​ ಮಾಡಲು ಅಧಿಕಾರಿಗಳು ಕಚೇರಿಯಲ್ಲೆ ಇರಬೇಕಿದೆ.
ಕೈಗಾರಿಕಾ ಪ್ರದೇಶಗಳಿಂದ ಕೆರೆಗಳಿಗೆ ಕಲುಷಿತ ನೀರನ್ನು ಬಿಡುತ್ತಿದ್ದಾರೆ, ಆನೇಕಲ್​ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರು ಎಲ್ಲಿಯೂ ಸಿಗುತ್ತಿಲ್ಲ, ಆದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ರ್ನಿಲಕ್ಷ$್ಯ ನಿಂತಿಲ್ಲ, ಕಾರ್ಖಾನೆಗಳ ಮಾಲೀಕರ ಕೈಗೊಂಬೆಯಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
> ದಿಲೀಪ್​ಗೌಡ ಕರುನಾಡ ರೈತ ಗೋಪಾಲಕರ ಸಂದ ತಾಲೂಕು ಅಧ್ಯಕ್ಷ
ಕೈಗಾರಿಕೆಗಳ ಹಾಗೂ ಮಲಿನ ನೀರು ಕೆರೆಗಳಿಗೆ ಸೇರಿ ನೀರು ಸಂಪೂರ್ಣ ಕೆಮಿಕಲ್​ನಿಂದ ತುಂಬಿಹೋಗಿವೆ. ಯಾವುದೇ ಕೆರೆ ನೋಡಿದರೂ ಕೆಮಿಕಲ್​ ನೀರು ತುಂಬಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಸಂಬಂಧ ಇಲ್ಲ ಎನ್ನುವಂತೆ ಇದೆ. ಆನೇಕಲ್​ನಲ್ಲಿ ಇದ್ದ ಕಚೇರಿಯಲ್ಲೂ ಕೂಡ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ.
> ಕೆ.ಎನ್​.ಮಂಜುನಾಥ್​ ಭಾರತೀಯ ಕಿಸಾನ್​ ಸಂದ ತಾಲೂಕು ಕಾರ್ಯದರ್ಶಿ