ವಿಜಯಪುರ ತಾಲೂಕಿನ ಹೊನಗನಹಳ್ಳಿ-ಸವನಹಳ್ಳಿಯ ಆತ್ಮಾನಂದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಸ್ವಾಮಿಗಳ 5ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸುನೀಲಗೌಡ ಪಾಟೀಲ, ಡಾ. ಚನ್ನಮಲ್ಲಿಕಾರ್ಜುನ ಪಂಡಿತಾರಾಜ್ಯ ಶಿವಾಚಾರ್ಯರು, ಮುರುಗೇಂದ್ರ ಸ್ವಾಮೀಜಿ ಮತ್ತಿತರರಿದ್ದಾರೆ. 
ರಾಜ್ಯ

ಸಮಾಜ ಸುಧಾರಕರ ತತ್ವಾದರ್ಶ ಅನುಕರಣೀಯ

ಪ್ರಮುಖ ಮುಖ್ಯಾಂಶಗಳು

  • ವಿ.ಪ. ಸದಸ್ಯ ಸುನೀಲಗೌಡ ಪಾಟೀಲ ಅಭಿಮತ
  • ಅಡ್ಡಪಲ್ಲಕ್ಕಿ ಉತ್ಸವ
ವಿಜಯಪುರ: ಮಲ್ಲಿಕಾರ್ಜುನ ಸ್ವಾಮೀಜಿ ಜಾತ್ಯತೀತ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಹಸಿದು ಬಂದವರಿಗೆ ಅನ್ನ ಹಾಕಿದ್ದಾರೆ. ಅಲ್ಲದೇ, ಬಡವರಿಗೆ ನೆರವಾಗಿ, ಸಮಾಜಮುಖಿ ಕಾರ್ಯಗಳ ಮೂಲಕ ಭಕ್ತಾದಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇವರ ಕಾರ್ಯ ಶ್ಲಾಘನೀಯ ಎಂದು ವಿ.ಪ. ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ತಾಲೂಕಿನ ಹೊನಗನಹಳ್ಳಿ-ಸವನಹಳ್ಳಿಯ ಶ್ರೀ ಆತ್ಮಾನಂದ ಆಶ್ರಮದಲ್ಲಿ ಇತ್ತೀಚೆಗೆ ನಡೆದ ಪ. ಪೂ. ಶ್ರೀ ಮಲ್ಲಿಕಾರ್ಜುನ ಸ್ವಾಮಿಯ 5ನೇ ಪುಣ್ಯಸ್ಮರಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಹೊನಗನಹಳ್ಳಿ-ಸವನಹಳ್ಳಿ ಗ್ರಾಮಗಳು ತಮ್ಮ ಎರಡು ಕಣ್ಣುಗಳಿದ್ದಂತೆ ಎಂದು ಹೇಳುತ್ತಿದ್ದ ಶ್ರೀಗಳು, ನಾಟಕಗಳಲ್ಲಿ ಬಸವಾದಿ ಶರಣರು, ಬೀರದೇವರ ಪಾತ್ರಗಳಲ್ಲಿ ನಟಿಸಿ ಭಾರತೀಯ ಸಂಸ್ಕೃತಿ, ಪರಂಪರೆ, ಸಮಾಜ ಸುಧಾರಕರ ತತ್ವಾದರ್ಶಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದಿರುವ ಸಾವಿರಾರು ಭಕ್ತರು ಅವರ ಮೇಲಿರುವ ಭಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಶ್ರೀಶೈಲ ಜಗದ್ಗುರುಗಳು ಸುನೀಲಗೌಡ ಪಾಟೀಲ ಅವರನ್ನು ಆಶೀರ್ವದಿಸಿದರು. ಶ್ರೀಶೈಲ ಜಗದ್ಗುರು ಡಾ. ಚನ್ನಮಲ್ಲಿಕಾರ್ಜುನ ಪಂಡಿತಾರಾಜ್ಯ ಶಿವಾಚಾರ್ಯರು ಮಹಾ ಭಗವತ್ಪಾದಂಗಳವರು, ಮಮದಾಪುರ ವಿರಕ್ತಮಠದ ಮುರುಗೇಂದ್ರ ಸ್ವಾಮೀಜಿ, ನಾಗಠಾಣ ಉದಯಲಿಂಗೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ಮನಗೂಳಿ ವಿಭೂತಿಪುರಮಠ ಶಾಖಾ ಮಠದ ಮಹಾಂತಲಿಂಗ ಶಿವಾಚಾರ್ಯರು, ಆತ್ಮಾನಂದ ಆಶ್ರಮದ ದಯಾನಂದ ಸ್ವಾಮೀಜಿ, ಮುಖಂಡರಾದ ಸೋಮನಾಥ ಕಳ್ಳಿಮನಿ, ಬಸವರಾಜ ರಡ್ಡಿ, ನಚಿಕೇತ ಬಿದರಿ, ಮಲ್ಲಿಕಾರ್ಜುನ ಹಳ್ಳಿ ಮತ್ತಿತರರಿದ್ದರು.