High court 
ರಾಜ್ಯ

ವಿವಾಹ ಕೇವಲ ಒಪ್ಪಂದವಲ್ಲ, ಪವಿತ್ರ ಸಂಸ್ಕಾರ| ವಿಚ್ಛೇದನ ಕೋರಿದ್ದ ಪತಿಯ ಅರ್ಜಿ ವಜಾ| High court

ಬೆಂಗಳೂರು: ದಾಂಪತ್ಯ ಜೀವನದಲ್ಲಿ ತನಗೆ ಆಸಕ್ತಿ ಉಳಿದಿಲ್ಲ ಎಂಬ ಏಕಪಕ್ಷೀಯ ಕಾರಣ ನೀಡಿ ವಿಚ್ಛೇದನ ಕೋರಲು ಕಾನೂನಿನಲ್ಲಿ ಅವಕಾಶವಿಲ್ಲ. ಹಿಂದೂ ಕಾನೂನಿನ ಪ್ರಕಾರ ವಿವಾಹ ಎಂಬುದು ಒಂದು ಪವಿತ್ರವಾದ ಸಂಸ್ಕಾರವೇ ಹೊರತು, ಅದು ಕೇವಲ ಒಂದು ಒಪ್ಪಂದವಲ್ಲ ಎಂದು ಹೈಕೋರ್ಟ್​ ಹೇಳಿದೆ. 
ವಿಚ್ಛೇದನ ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೈಸೂರು ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್​ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. 
ದಂಪತಿಯು 2003ರಲ್ಲಿ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದರು. ಸದ್ಯ ವಯಸ್ಕಳಾಗುವ ಹಂತದಲ್ಲಿರುವ ಮಗಳಿದ್ದಾಳೆ. ದಾಂಪತ್ಯದಲ್ಲಿ ಬಿರುಕು ಮೂಡಿದ ಕಾರಣ ವಿಚ್ಛೇದನ ನೀಡಬೇಕು ಎಂದು ಕೋರಿ ಪತಿ 2019ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆ, ದಾಂಪತ್ಯ ಹಕ್ಕುಗಳ ಮರುಸ್ಥಾಪನೆ ಕೋರಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಪತಿಯ ಅರ್ಜಿಯನ್ನು ವಜಾಗೊಳಿಸಿದ್ದ ನ್ಯಾಯಾಲಯ, ಪತ್ನಿಯ ಜತೆ ದಾಂಪತ್ಯ ಮುಂದುವರಿಸುವಂತೆ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಪತಿ ಪಾಲಿಸಿರಲಿಲ್ಲ.
ಕೌಟುಂಬಿಕ ನ್ಯಾಯಾಲಯದ ಆದೇಶದ ನಂತರವೂ ಇಬ್ಬರು ಒಟ್ಟಿಗೆ ವಾಸಿಸುತ್ತಿಲ್ಲ ಮತ್ತು ಮದುವೆ ಸಂಪೂರ್ಣ ಮುರಿದುಬಿದ್ದಿದೆ ಎಂದು ವಾದಿಸಿ ಪತಿಯು ಮತ್ತೊಮ್ಮೆ 2024ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೂಡ ಮೈಸೂರಿನ ಕೌಟುಂಬಿಕ ನ್ಯಾಯಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಸಹಬಾಳ್ವೆಗೆ ಪತ್ನಿ ಸಿದ್ಧ:

ಅರ್ಜಿಗೆ ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ, ತಾನು ಪತಿಯೊಂದಿಗೆ ಸಹಬಾಳ್ವೆಗೆ ಸಿದ್ಧಳಿರುವುದಾಗಿ ಪತ್ನಿ ತಿಳಿಸಿದ್ದರು. ತಾನು ಪತಿ ಮತ್ತು ಅವರ ಪಾಲಕರನ್ನು ಸದಾ ಪ್ರೀತಿ ಮತ್ತು ಗೌರವದಿಂದ ನೋಡಿಕೊಂಡಿದ್ದೇನೆ. ತಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರಿಂದ, ಪೂಜೆ ಮತ್ತು ಅಡುಗೆಯ ಸೌಕರ್ಯಕ್ಕಾಗಿ ಮನೆಯ ಮೊದಲ ಮಹಡಿಯಲ್ಲಿ ವಾಸಿಸುವಂತೆ ಪತಿಯ ಪಾಲಕರು ಸೂಚಿಸಿದ್ದರು ಮತ್ತು ಅದಕ್ಕೆ ತಾನು ಒಪ್ಪಿ ನಡೆದುಕೊಂಡಿದ್ದೆ ಎಂದೂ, ತಾನೆಂದೂ ಪ್ರತ್ಯೇಕ ವಾಸಕ್ಕೆ ಹಠ ಹಿಡಿದಿಲ್ಲ ಎಂದು ತಿಳಿಸಿದ್ದರು. 
ಪತಿಯ ಹೇಳಿಕೆಗೆ ಅಸಮಾಧಾನ: 
ಪತ್ನಿಯೊಂದಿಗೆ ಸಂಸಾರ ನಡೆಸಲು ಯಾವುದೇ ಆಸಕ್ತಿ ಇಲ್ಲ ಎಂಬ ಪತಿಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಪ್ರೀತಿಸಿ ಮದುವೆಯಾಗಿ, ಈಗ ವಯಸ್ಕಳಾಗುವ ಹಂತದಲ್ಲಿರುವ ಹೆಣ್ಣುಮಗುವಿಗೆ ತಂದೆಯಾಗಿರುವ ವ್ಯಕ್ತಿಯು ತನಗೆ ಮದುವೆಯ ಮೇಲೆ ಆಸಕ್ತಿ ಉಳಿದಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ಕೇಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಹಿಂದೂ ಕಾನೂನಿನಲ್ಲಿ ಮದುವೆ ಕೇವಲ ಒಪ್ಪಂದವಲ್ಲ, ಬದಲಾಗಿ ಜೀವಿತಾವಧಿಯ ಸಂಸ್ಕಾರವಾಗಿದೆ. ಹಾಗಿರುವಾಗ ದಾಂಪತ್ಯ ಜೀವನದಲ್ಲಿ ಆಸಕ್ತಿ ಇಲ್ಲ ಎಂಬ ಕಾರಣಕ್ಕೆ ಯಾರೂ ಮದುವೆಯ ಬಂಧದಿಂದ ಹೊರನಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.