ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಮುಂಭಾಗ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಹೋರಾಟಗಾರರು ಹಿಂಪಡೆದರು. ತಹಸೀಲ್ದಾರ್ ಮಲ್ಲಪ್ಪ, ಹೋರಾಟ ಸಮಿತಿ ವಸಂತ್, ರಮೇಶ್, ಕಾಳೆಗೌಡ, ಸುರೇಶ್, ಶಿವಕುಮಾರ್, ಚಂದ್ರಹಾಸನ್, ಆದಿತ್ಯನಾಗೇಶ, ಮಂಜುನಾಥ ಇತರರು ಇದ್ದರು.
ದೊಡ್ಡಬಳ್ಳಾಪುರ : ಮೂರನೇ ಹಂತದ ಶುದ್ಧೀಕರಣ ಘಟಕ ಸ್ಥಾಪನೆಗೆ ಒತ್ತಾಯಿಸಿ ಮೂರು ದಿನಗಳಿಂದ ನಡೆಯುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹಿನ್ನೆಲೆಯಲ್ಲಿ ಹೋರಾಟಗಾರರು ಶನಿವಾರ ಕೈಬಿಟ್ಟಿದ್ದಾರೆ.
ಸಿಎಂ ನೇತೃತ್ವದಲ್ಲಿ ಸಭೆ : ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವೆಂಕಟರಮಣಯ್ಯ ಹಾಗೂ ಪ್ರತಿಭಟನಾ ನಿರತ ಹೋರಾಟಗಾರರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಗೃಹಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು. ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಪಂ ವ್ಯಾಪ್ತಿಯಲ್ಲಿನ ಕೆರೆಗಳು ಕಲುಷಿತಗೊಂಡಿರುವ ರೀತಿ, ಪ್ರಮಾಣ, ಈ ಭಾಗದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಶೀಘ್ರವಾಗಿ ಆಗಬೇಕಾಗಿರುವ ಕೆಲಸಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಿಎಂಗೆ ವಿವರಿಸಿದರು.
ಹೋರಾಟ ಹಿಂಪಡೆಯುವಂತೆ ತಹಸೀಲ್ದಾರ್ ಮನವಿ : ಮುಖ್ಯಮಂತ್ರಿಗಳ ಸಭೆಯಲ್ಲಿ ನಡೆದ ವಿಷಯವನ್ನು ಹೋರಾಟಗಾರರಿಗೆ ತಿಳಿಸಿದ ತಹಸೀಲ್ದಾರ್ ಮಲ್ಲಪ್ಪ ಹೋರಾಟ ಹಿಂಪಡೆಯುವಂತೆ ಮನವಿ ಮಾಡಿದರು. ಬಳಿಕ ಉಪವಾಸ ಸತ್ಯಾಗ್ರಹ ನಿರತರಿಗೆ ಎಳನೀರು ಕುಡಿಸಿ ಸುಖಾಂತ್ಯಗೊಳಿಸಿದರು.