ಮುಧೋಳ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಶಾಸಕ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಶಾಸಕ ಹಣಮಂತ ನಿರಾಣಿ ಡಾ. ಚಿಕ್ಕಪ್ಪ ನಾಯಿಕ, ಎಸ್.ಎಂ. ಮುಲ್ಲಾ, ರಾಘವೇಂದ್ರ ಕಳ್ಳಿಮನಿ ಇದ್ದರು. 
ರಾಜ್ಯ

ಗುರುವಿನ ಸನ್ಮಾರ್ಗವೇ ಶಿಷ್ಯನ ಉನ್ನತಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರ್.ಬಿ. ತಿಮ್ಮಾಪೂರ ಆಭಿಮತ
  • ಶಿಕ್ಷಕರ ಜಯಂತ್ಯೋತ್ಸವ
ಮುಧೋಳ: ರಾಜಕೀಯ ಕ್ಷೇತ್ರದಲ್ಲಿದ್ದು, ಶಾಸಕನಾಗಿ ಈ ಮಟ್ಟಕ್ಕೆ ಬೆಳೆಯಲು ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಗುರುಗಳ ಆಶೀರ್ವಾದವೇ ಮುಖ್ಯ ಕಾರಣ ಎಂದು ಮಾಜಿ ಸಚಿವ, ಶಾಸಕ ಆರ್.ಬಿ. ತಿಮ್ಮಾಪೂರ ಸ್ಮರಿಸಿದರು.
ನಗರದ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಶಿಕ್ಷಕರ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಶಿಕ್ಷಕರಿಗೆ ಸನ್ಮಾನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ, ಅಂದು ಶಿಕ್ಷಕರು ಹೇಳಿದ ಪಾಠ ಹಾಗೂ ಧಾರೆ ಎರೆದ ಸಂಸ್ಕಾರವೇ ತಮ್ಮ ಇಂದಿನ ಬದುಕಿನ ಯಶಸ್ಸಿಗೆ ಬಲವಾದ ಅಡಿಪಾಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಎಷ್ಟೇ ಕಷ್ಟ-ಸಮಸ್ಯೆಗಳಿದ್ದರೂ, ಗುರುಗಳು ತೋರಿಸಿದ ಸನ್ಮಾರ್ಗದಲ್ಲಿ ಮುನ್ನಡೆದರೆ ಅತ್ಯುತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟ-ನಷ್ಟಗಳ ನಡುವೆಯೂ ಮಾರ್ಗದರ್ಶನ ನೀಡಿದರು.
ಎಂಎಲ್‌ಸಿ ಹಣಮಂತ ನಿರಾಣಿ ಮಾತನಾಡಿ, ಶಿಕ್ಷಕ ವೃತ್ತಿಯೇ ಸಮಾಜದ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ವೃತ್ತಿಯಾಗಿದೆ. ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿ ಹಿರಿದಾದದ್ದು ಎಂದು ತಿಳಿಸಿದರು.
ಸಾಹಿತಿ ಡಾ. ಶಿವನಾಂದ ಕುಬಸದ ಉಪನ್ಯಾಸ ನೀಡಿದರು. ಲೋಕಾಪುರ ಹಿರೇಮಠದ ಡಾ. ಚಂದ್ರ ಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಪಿಎಂಸಿ ಉಪಾಧ್ಯಕ್ಷ ಭೀಮಪ್ಪ ಮೆಟಗುಡ್ಡ , ತಹಸೀಲ್ದಾರ ಡಾ. ಚಿಕ್ಕಪ್ಪ ನಾಯಕ ಮಾತನಾಡಿದರು. ಬಿಇಒ ಎಸ್.ಎಂ. ಮುಲ್ಲಾ, ತಾಲೂಕು ಪಂಚಾಯಿತಿ ಇಒ ರಾಘವೇಂದ್ರ ಕಳ್ಳಿಮನಿ, ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ಹೊಸಮನಿ, ಬಾಲರಾಜ ದೊಡಮನಿ ಪ್ರಕಾಶ್ ಬೆಳಗಲಿ ಇದ್ದರು.