ಕಲಬುರಗಿ: ಸಮಾನತೆ ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮಾಜದ ಸರ್ವತೋಮುಖ ಏಳಿಗೆಗೆ ಮಾದರಿ, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಲಬರುಗಿ ಗ್ರಾಮೀಣ ವಿಧಾನ ಸಭಾ ಶಾಸಕರಾದ ಬಸವರಾಜ ಮತ್ತಿಮಡು ಹೇಳಿದರು.
ಭಾನುವಾರ ನಗರದ ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡಿ ಮಾತನಾಡಿದರು.
ಬಂಜಾರ ಸಮಾಜವು ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನುಡಿದಂತೆ ನಡೆಯುವ ಮತ್ತು ಕೈಹಿಡಿದವರನ್ನು ಎಂದಿಗೂ ಕೈಬಿಡದ ವಿಶ್ವಾಸಾರ್ಹ ಸಮಾಜವಿದು ಎಂದು ಶ್ಲಾಘಿಸಿದರು. ಬಂಜಾರ ಸಮಾಜದ ಅಭಿವೃದ್ಧಿಗೆ ರಾಜಕೀಯ ಮರೆತು ಒಂದಾಗಲು ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಚಿಂಚೋಳಿ ವಿಧಾನ ಸಭಾ ಶಾಸಕರಾದ ಡಾ. ಅವಿನಾಶ ಜಾಧವ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ಕಾರದಲ್ಲಿದ್ದಾಗ ಬಂಜಾರಾ ಸಮಾಜದ ನಿಗಮ ಸ್ಥಾಪನೆ ಮಾಡಿದರು. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಮ್ಮ ಸಮುದಾಯದ ಅಭಿವೃದ್ಧಿಗೆ ಅನುದಾನ ನೀಡಿದರು. ಪಕ್ಷಾತೀತವಾಗಿ ನಡೆದ ಅಭಿವೃದ್ಧಿ ಕೆಲಸಗಳು ಸಮಾಜದ ಏಳಿಗೆಗಾಗಿ ಈ ಹಿಂದೆ ಅಧಿಕಾರದಲ್ಲಿದ್ದ ಎಲ್ಲ ಪಕ್ಷಗಳ ನಾಯಕರು ಶ್ರಮಿಸಿರುವುದನ್ನು ಅವರು ಸ್ಮರಿಸಿದರು.
ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಬೇಕಿದ್ದರೆ ಯಾವುದೇ ರಾಜಕೀಯ ಪಕ್ಷಪಾತ ಹಾಗೂ ಭಿನ್ನಾಭಿಪ್ರಾಯಗಳನ್ನು ಮರೆತು ನಾವೆಲ್ಲರೂ ಮೊದಲು ಒಂದಾಗಬೇಕು. ಸಮಾಜದ ಹಿರಿಯರು ಮತ್ತು ಕಿರಿಯರು ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ಸಮಾಜಕ್ಕೆ ಒಳ್ಳೆಯದು ಮಾಡಲು ಸಾಧ್ಯ ಎಂದು ತಿಳಿಸಿದರು.
ಶ್ರೀ ಸಂತ ಸೇವಾಲಾಲ್ ಮಹಾರಾಜ ಜಿಲ್ಲಾ ಗೌರವಾಧ್ಯಕ್ಷರು ಹಾಗೂ ಮಾಜಿ ಸಚಿವರು ಶ್ರೀ ರೇವೂ ನಾಯಕ ಬೆಳಮಗಿ ಅವರು ಮಾತನಾಡಿ, ಅನೇಕ ಪವಾಡ್‌ಗಳು ಮಾಡಿದ ಅವರು ತಮ್ಮ ಪಾವಿತ್ರö್ಯತೆಯನ್ನು ಕಾಪಾಡಿಕೊಂಡು ಬಂಜಾರ ಸಮುದಾಯಕ್ಕೆ ನೀಡಿದ ತತ್ವಗಳು ಮತ್ತು ಆದರ್ಶ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆಯಬೇಕೆಂದು ತಿಳಿಸಿದರು. ಹಾಗೂ ಬಂಜಾರ ಸಮುದಾಯದ ಸೇವಾಲಾಲ ಮಹಾರಾಜ ಜಯಂತಿ ವಿಜೃಂಭಣಿಯಿಂದ ಆಚರಿಸುವ ಮೂಲಕ ಈ ಸಮಾಜದ ಯುವಕರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಮಾಜಕ್ಕಿಂತ ರಾಜಕೀಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂಬ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅವರು, ನಮ್ಮ ನಡುವೆ ಸಣ್ಣಪುಟ್ಟ ಗೊಂದಲಗಳಿರಬಹುದು ಆದರೆ ಸಮಾಜದ ಹಿತಕ್ಕಾಗಿ ಅದೆಲ್ಲವನ್ನೂ ಮರೆತು ಒಂದಾಗಬೇಕು. ರಾಜಕೀಯವನ್ನು ಎರಡನೇ ಆದ್ಯತೆಯನ್ನಾಗಿ ಇಟ್ಟುಕೊಂಡು, ಸಮಾಜದ ಏಳಿಗೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಡಾ.ಬಿ.ಜಿ. ಪಾಟೀಲ ಮಾತನಾಡಿದರು.
ಸಮಾಜದ ಮುಖಂಡರಾದ ಡಾ. ಗಣಪತಿ ರಾಠೋಡ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸೇವಾಲಾಲ ಜಯಂತಿ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಅ ನಾಸಿ ಅವರು ಸ್ವಾಗತಿಸಿದರು.
ಇದಕ್ಕೂ ಮುನ್ನ ನಗರೇಶ್ವರ ಸ್ಕೂಲ್‌ನಿಂದ ಭವ್ಯವಾದ ಮೆರವಣೆಗೆ ಮೂಲಕ ರಂಗಮಂದಿರಕ್ಕೆ ಆಗಮಿಸಿತು. ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ ನಮೋಶಿ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶಿವಪ್ರಭು ಹೀರೆಮಠ, ಸುಕ್ಷೇತ್ರ ಕೆಸರಟಗಿಯ ಮಾತಾ ಲತಾ ದೇವಿ, ಓಂಕಾರ ಮಹಾರಾಜ, ಶಂಕರ ಮಹಾರಾಜ ದಿವ್ಯ ಸಾನಿಧ್ಯವಹಿಸಿದರು. ಎಸ್.ಸಿ/ಎಸ್.ಟಿ ರಾಜ್ಯ ನೌರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಹುಬಳ್ಳಿ, ಜಯಂತಿ ಅಧ್ಯಕ್ಷರಾದ ಸಾಗರ ರಾಠೋಡ ಸೇರಿದಂತೆ ಸಮಾಜದ ಮುಖಂಡರಾದ ವಿಠಲ ಜಾಧವ, ಪ್ರೇಮಸಿಂಗ ಚವ್ಹಾಣ, ಶ್ಯಾಮನೂರ ಪವರ, ಕೃಷ್ಣೇ ನಾಯಕ, ಬಾಬು ಜಾಧವ, ಉಮೇಶ ರಾಠೋಡ, ರಾಕೇಶ ಚವ್ಹಾಣ ಸೇರಿದಂತೆ ಸಮಾಜದ ಮುಖಂಡರು ಇದ್ದರು.