ಹಣ ಕದ್ದು ಸಿಕ್ಕಿ ಬಿದ್ದ ಖದೀಮರು! money
- ಕಳ್ಳರನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಸ್ಥಳಿಯರು
- ದುಡ್ಡಿನ ಸಮೇತ ಇಬ್ಬರು ಪರಾರಿ
ಚಿಕ್ಕಬಳ್ಳಾಪುರ: ತಾಲೂಕಿನ ಚೊಕ್ಕಹಳ್ಳಿ ಸಮೀಪದ ಎಪಿಎಂಸಿಯಲ್ಲಿ 6.50 ಲಕ್ಷ ರೂ. ಕಳವು ಮಾಡಿದ್ದ ನಾಲ್ವರ ಪೈಕಿ ಇಬ್ಬರನ್ನು ಸ್ಥಳಿಯರೇ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಹಣದ ಸಮೇತ ಇನ್ನಿಬ್ಬರು ಪರಾರಿಯಾಗಿದ್ದಾರೆ.money
ಆಂಧ್ರದ ತಿರುಪತಿಯ ಉಷಾ ರಮೇಶ್ ಹಣ ಕಳೆದುಕೊಂಡವರು.
ಒಡವೆ ಅಡಮಾನ ಇಟ್ಟ ಹಣ ಮತ್ತು ಎಲ್ಐಸಿ ವಿಮೆಯಿಂದ ಸಿಕ್ಕ 6.50 ಲಕ್ಷ ರೂ.ಗಳನ್ನು ಅಕ್ಕನ ಮಗಳ ಮದುವೆಗೆ ಹಣ ಕೊಡಲು ಉಷಾ ರಮೇಶ್ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಊಟ ಮಾಡಲು ಚೊಕ್ಕಹಳ್ಳಿ ಸಮೀಪದ ಡಾಬಾ ಬಳಿ ಬಿಲ್ ಕೊಡಲು ಹಣದ ಕಟ್ಟಿನಲ್ಲಿ ನೋಟನ್ನು ತೆಗೆದಿದ್ದು, ಇದನ್ನು ಗಮನಿಸಿದ ಕಳ್ಳರು ಹತ್ತಿರಕ್ಕೆ ಬಂದು ಅವರನ್ನು ಥಳಿಸಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಉಷಾ ರಮೇಶ್ ನೆರವಿಗಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ರೈತರು, ವರ್ತಕರು ಇಬ್ಬರು ಕಳ್ಳರನ್ನು ಹಿಡಿದುಕೊಂಡಿದ್ದಾರೆ.
ಬಳಿಕ ಕಳ್ಳರಿಬ್ಬರನ್ನು ಎಳೆದುತಂದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ನಂದಿ ಗಿರಿಧಾಮ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಗದ ಹಣ: ನಾಲ್ವರು ಕಳ್ಳರ ಪೈಕಿ ಇಬ್ಬರು ಹಣ ಕಿತ್ತುಕೊಂಡರೆ, ಇನ್ನಿಬ್ಬರು ಅವರಿಂದ ಹಣ ಪಡೆದುಕೊಂಡು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾರೆ. ಆರೋಪಿಗಳು ಚೇಳೂರು ತಾಲೂಕಿನವರು ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.