ಯಲ್ಲಮ್ಮನಗುಡ್ಡದಲ್ಲಿ ಯಲ್ಲಮ್ಮದೇವಿ ದರ್ಶನಕ್ಕೆ ಹರಿದು ಬಂದ ಭಕ್ತ ಸಮೂಹ.
ಉಗರಗೋಳ: ಸಮೀಪದ ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಬನದ ಹುಣ್ಣಿಮೆ ಅಂಗವಾಗಿ ಶನಿವಾರ ವಿವಿಧೆಡೆಯಿಂದ ಲಾಂತರ ಭಕ್ತರು ಆಗಮಿಸಿ ಶ್ರೀ ರೇಣುಕಾ ಯಲ್ಲಮ್ಮದೇವಿ ದರ್ಶನ ಆಶೀರ್ವಾದ ಪಡೆದು ತಾಯಿ ಕೃಪೆಗೆ ಪಾತ್ರರಾದರು. ಜೋಗುಳಬಾವಿ ಹಾಗೂ ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದರು. ಬಳಿಕ ರಸ್ತೆಬದಿ ಮತ್ತು ಗುಡ್ಡದ ವಿಶಾಲ ಪರಿಸರದಲ್ಲಿ ನೈವೇದ್ಯ ಸಿದ್ಧಪಡಿಸಿ, ಪರಡಿ ತುಂಬಿ ಭಕ್ತಿ ಸಮರ್ಪಿಸಿದರು. "ಯಲ್ಲಮ್ಮ ನಿನ್ನ ಪಾದಕೆ ಉಧೋ ಉಧೋ' ಎಂಬ ಹಷೋರ್ದ್ಗಾರದೊಂದಿಗೆ ನಸುಕಿನಿಂದಲೇ ಸರದಿಯಲ್ಲಿ ನಿಂತು ಕುಂಕುಮಾರ್ಚನೆ, ಪುಷ್ಪಾರ್ಚನೆ, ಪಡ್ಡಲಗಿ ಸೇವೆ ಸೇರಿ ವಿಶೇಷ ಪೂಜೆ ಸಲ್ಲಿಸಿದರು. ಬದುಕಿನ ಸಂಕಷ್ಟ ಕಳೆದು ಸುಖ, ಶಾಂತಿ ಹಾಗೂ ಸಮೃದ್ಧಿ ಪ್ರಾಪ್ತಿಯಾಗಲಿ ಎಂದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಜೋಗತಿಯರ ನೃತ್ಯ, ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ಯಲ್ಲಮ್ಮನ ಶಕ್ತಿ ಸಾರುವ ಭಕ್ತೀಗಿತೆಗಳಿಗೆ ಯುವಕರು ಹೆಜ್ಜೆಹಾಕಿ ಸಂಭ್ರಮಿಸಿದರು. ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ ದೇವಸ್ಥಾನದ ಮೇಲೂ ಭಂಡಾರ ಹಾರಿಸಿದರು.
ಸಂಚಾರ ಸಮಸ್ಯೆ: ಈ ವರ್ಷವೂ ಜಾತ್ರೆಯಲ್ಲಿ ಸಂಚಾರ ಸಿಕ್ಕುವಿನಿಂದ ವಾಹನ ಸವಾರರು ಪರತಪಿಸುವಂತಾಯಿತು. 3&4 ಕಿಮೀ ದೂರದ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.