Guliga Guliga Song | ಕೊರಗಜ್ಜ ಚಿತ್ರದ ಪೋಸ್ಟರ್
ಬೆಂಗಳೂರು: ಇತ್ತೀಚೆಗೆ ದೇಶ್ಯಾದ್ಯಂತ ಸದ್ದು ಮಾಡಿದ್ದ ಕಾಂತಾರ ಚಿತ್ರವನ್ನು ನೋಡಿದ ಬಹುತೇಕರು ಗುಳಿಗ ದೈವದ ಹೆಸರನ್ನು ಕೇಳಿರುತ್ತಾರೆ, ಈಗ ತುಳುನಾಡಿನ ಆರಾಧ್ಯ ದೈವವಾಗಿ ನೋಡುವ ಕೊರಗಜ್ಜ ದೇವರ ಕುರಿತಾದ ಸಿನಿಮಾದ ಗುಳಿಗ ಗುಳಿಗ ಘೋರ ಗುಳಿಗ ಎಂಬ ಹಾಡು ಇಂದು ( ಗುರುವಾರ ನ.20) ಬಿಡುಗಡೆಯಾಗಿದ್ದು, ಕೇಳುಗರಿಂದ ಭಾರೀ ಮೆಚ್ಚುಗೆ ಗಳಿಸಿದೆ.
ತ್ರಿವಿಕ್ರಮ ಸಪಲ್ಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಬ್ಯಾನರ್ ಅಡಿಯ ಕೊರಗಜ್ಜ ಚಿತ್ರದ ಈ ಹಾಡಿಗೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ರಾಗ ಸಂಯೋಜನೆ ಮಾಡಿದ್ದರೆ, ಗಾಯಕ ಜಾವೆದ್ ಅಲಿ, ಸುಧೀರ್ ಅತ್ತಾವರ್ ಧ್ವನಿ ನೀಡಿದ್ದಾರೆ. ಹಾಡಿನ ಕೆಲ ಭಾಗಗಳಲ್ಲಿ ಗೋಪಿ ಸುಂದರ್ ಕೂಡ ಕಂಠದಾನ ಮಾಡಿದ್ದಾರೆ.
ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಮೂಡಿಬರಲಿರುವ ಕೊರಗಜ್ಜ ಚಿತ್ರ ಈಗಾಗಲೇ ಪ್ರೇಕ್ಷಕರ ನಿರೀಕ್ಷೆಗಳನ್ನು ಹೆಚ್ಚು ಮಾಡಿದ್ದು, ತುಳುನಾಡು ಮಾತ್ರವಲ್ಲದೇ ರಾಜ್ಯದ ಜನರು ಈ ಚಿತ್ರವನ್ನು ಎದುರು ನೋಡುತಿದ್ದಾರೆ. ಸುಮಾರು 15 ವರ್ಷಗಳಿಂದ ಹತ್ತಾರು ನಿರ್ಮಾಪಕರು, ನಿರ್ದೇಶಕರು ಕೊರಗಜ್ಜನ ಬಗ್ಗೆ ಚಿತ್ರ ನಿರ್ಮಿಸಲು ಯತ್ನಿಸಿದ್ದರು. ಆದರೆ ಸುಧೀರ್ ಅತ್ತಾವರ್ ಪ್ರಾಜೆಕ್ಟ್ ಕೈಗೆತ್ತಿಕೊಂಡ ಮೇಲೆ ಹೊಸ ಹೊಸ ಘಟನೆಗಳಿಗೆ, ನವೀನ ವಿಚಾರಗಳಿಗೆ ಚಿತ್ರ ಸಾಕ್ಷಿಯಾಗುತ್ತಿದೆ.