ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ನಿವಾಸದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಿದ ಸಲೀಂ ಅಹ್ಮದ್
ಬೆಂಗಳೂರು : ಶ್ರೀ ಕೃಷ್ಣನ ಸಂದೇಶಗಳು ಧರ್ಮ, ನ್ಯಾಯ, ಸತ್ಯ ಮತ್ತು ಮಾನವೀಯತೆಯ ಪ್ರತೀಕ ಎಂದು ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ನಿವಾಸದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಿದ ಸಲೀಂ ಅಹ್ಮದ್ ಅವರು, ಶ್ರೀ ಕೃಷ್ಣನ ಸಂದೇಶಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಧರ್ಮ,ನ್ಯಾಯ, ಕರ್ತವ್ಯ, ಸತ್ಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀ ಕೃಷ್ಣ ನೀಡಿರುವ ಸತ್ಯ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪ. ನಮ್ಮ ಬದುಕಿನಲ್ಲಿ ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಈ ಪವಿತ್ರ ಹಬ್ಬದ ನಿಜವಾದ ಆಶಯವಾಗಿದೆ. ಶ್ರೀ ಕೃಷ್ಣ ಜಯಂತಿಯು ದೇಶದ ಜನರಲ್ಲಿ ಪ್ರೀತಿ, ವಿಶ್ವಾಸ, ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಭಾವನೆಯನ್ನು ಮತ್ತಷ್ಟು ಬಲಪಡಿಸಲಿ. ಸಮಾಜದಲ್ಲಿ ಯಾವುದೇ ಭೇದಭಾವ ಇಲ್ಲದೆ ಎಲ್ಲ ಧರ್ಮ, ಜಾತಿ ಮತ್ತು ಸಮುದಾಯದ ಜನರು ಪರಸ್ಪರ ಗೌರವ ಹಾಗೂ ಸಹಬಾಳ್ವೆಯಿಂದ ಬದುಕುವುದು ನಮ್ಮ ಪ್ರಜಾಪ್ರಭುತ್ವದ ಶಕ್ತಿಯಾಗಿದೆ ಎಂದರು.
ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು, ಜನರ ನಡುವೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯ ಸೇತುವೆ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶ್ರೀ ಕೃಷ್ಣನ ಆದರ್ಶಗಳು ನಮ್ಮೆಲ್ಲರ ಜೀವನಕ್ಕೆ ಪ್ರೇರಣೆಯಾಗಲಿ. ಕೃಷ್ಣ ಜನ್ಮಾಷ್ಟಮಿಯು ನಾಡಿನ ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿ ಹಾಗೂ ಉತ್ತಮ ಭವಿಷ್ಯವನ್ನು ರೂಪಗೊಳ್ಳಲಿ ಎಂದು ಸಲೀಂ ಅಹ್ಮದ್ ಹಾರೈಸಿದರು.
ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್, ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಮಾಜಿ ಮೇಯರ್ ರಾಮಚಂದ್ರಪ್ಪ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಆತ್ಮೀಯರು ಉಪಸ್ಥಿತರಿದ್ದರು.