ಕಲಬುರಗಿಯಲ್ಲಿ ಜಿಲ್ಲಾಡಳಿತ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಚಂದಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ರಾವೇಂದ್ರ ಭಜಂತ್ರಿ, ಶಿವರಂಜನ್ ಸತ್ಯಂಪೇಟೆ, ಜಗದೀಶ್ವರಿ ನಾಶಿ, ಶ್ರೀಮಂತ ಜಾಧವ್, ಹಣಮಂತ ಕರ್ಜಗಿ ಇತರರಿದ್ದರು.
- ಶಾಸಕ ಅಲ್ಲಮಪ್ರಭು ಪಾಟೀಲ್ ಅಭಿಮತ
- ಕಲಬುರಗಿಯಲ್ಲಿ ನುಲಿಯ ಚಂದಯ್ಯ ಜಯಂತ್ಯುತ್ಸವ
ಕಲಬುರಗಿ: ಕಾಯಕವೇ ಕೈಲಾಸ ತತ್ವದಡಿ ಬಾಳಿದ ಶರಣ ನುಲಿಯ ಚಂದಯ್ಯ ಹುಲ್ಲು ಕೊಯ್ಯುವ ಕಾಯಕದಲ್ಲಿ ತೊಡಗಿದ್ದಾಗ ಕೊರಳಿನ ಲಿಂಗ ಕೆಳಗೆ ಬಿದ್ದರೂ ಕಾಯಕ ಮಾಡುತ್ತಿದ್ದೇನೆ. ನಿನಗೆ ಬೇಕಿದ್ದರೆ ಅಲ್ಲೆ ಇರು ಎಂದು ಕಾಯಕಕ್ಕೇ ಮೊದಲ ಆದ್ಯತೆ ನೀಡಿದ ಮಹಾನ್ ಶರಣರಾಗಿದ್ದರು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಡಿ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಮಡಿವಾಳ ಮಾಚಿದೇವರ ಜತೆ ಬಸವಕಲ್ಯಾಣದ ಅನುಭವ ಮಂಟಪಕ್ಕೆ ತೆರಳಿ ವಚನ ಕ್ರಾಂತಿಯಲ್ಲಿ ಭಾಗಿಯಾಗಿದ್ದ ನುಲಿಯ ಚಂದಯ್ಯನವರು 12ನೇ ಶತಮಾನದಲ್ಲಿ ಮೂಢನಂಬಿಕೆ, ಜಾತೀಯತೆ ಹಾಗೂ ಅಸ್ಪಶ್ಯತೆ ವಿರುದ್ಧ ವಚನ ಸಾಹಿತ್ಯದ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ಅವರ ತತ್ವ-ಸಂದೇಶ ಹಾಗೂ ಕಾಯಕ ನಿಷ್ಠೆ ಮುಂದಿನ ಪೀಳಿಗೆಗೆ ಮಾದರಿ ಎಂದರು.
ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ಹಿಂದೂ ಧರ್ಮದಲ್ಲಿದ್ದ ಜಡತ್ವ, ಅಸ್ಪಶ್ಯತೆ ಹಾಗೂ ಕೀಳು-ಮೇಲೆಂಬ ಅಸಮಾನತೆ ತೊಡೆದುಹಾಕಲು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ಮೂಲಕ ಶರಣರು ಬೃಹತ್ ಸಾಮಾಜಿಕ ಕ್ರಾಂತಿ ಹುಟ್ಟು ಹಾಕಿದರು ಎಂದು ಹೇಳಿದರು.
ನುಲಿಯ ಚಂದಯ್ಯನವರ ಬದುಕು ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ಸಾಹಿತಿ ಡಾ.ಶಿವರಂಜನ್ ಸತ್ಯಂಪೇಟೆ ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಸ್ವಾಗತಿಸಿದರು. ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ ಶ್ರೀಮಂತ ಜಾಧವ್, ಹಣಮಂತ ಕರ್ಜಗಿ, ಸಿಪಿಐ ರಾವೇಂದ್ರ ಭಜಂತ್ರಿ, ಎಇಇ ಶಾಂತಪ್ಪ ಜಾಧವ್, ಜಗನ್ನಾಥ ಭಜಂತ್ರಿ, ಮಹಾದೇವಿ ಭಜಂತ್ರಿ ಇತರರಿದ್ದರು. 2025&26ರ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರನ್ನು ಸತ್ಕರಿಸಲಾಯಿತು.
ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಅನೇಕ ಶರಣರ ತ್ಯಾಗ ಮತ್ತು ಬಲಿದಾನ ಅಪಾರ. ಆ ಕ್ರಾಂತಿ ವೇಳೆ ಎಷ್ಟೋ ವಚನಗಳು ನಾಶವಾದರೂ ಹಿರಿಯರು ಪ್ರಾಣಾಪಾಯದ ನಡುವೆ ರಸಿದ ಸಾಹಿತ್ಯವೇ ಇಂದು ಸಮಾಜಕ್ಕೆ ಪ್ರಗತಿಯ ಬೆಳಕಾಗಿದೆ.