ಗುಲ್ಬರ್ಗ ವಿವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ದೇವರ ದಾಸಿಮಯ್ಯ, ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ರಮೇಶ ಲಂಡನಕರ್​, ಜಯಾಂಬಿಕಾ, ಡಾ.ಎನ್​.ಜಿ.ಕಣ್ಣೂರ್​, ಪ್ರೊ.ಎಚ್​.ಟಿ.ಪೋತೆ, ಡಾ.ಶ್ರೀಶೈಲ ನಾಗರಾಳ, ಡಾ.ಅಮೃತಾ ಕಟಕೆ, ರಾವೇಂದ್ರ ಭೈರಪ್ಪ, ಬಿ.ಎಂ.ರುದ್ರವಾಡಿ ಇತರರಿದ್ದರು. 
ರಾಜ್ಯ

ಕಾಯಕ ಶರಣರ ಸಂದೇಶ ಸಮಾಜದ ಕೈಗನ್ನಡಿ

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹೇಳಿಕೆ
  • ದೇವರ ದಾಸಿಮಯ್ಯ, ಕಾಯಕ ಶರಣರ ಜಯಂತಿ ಆಚರಣೆ
ಕಲಬುರಗಿ: ಸಮಾಜದ ಅಬ್ಯುದಯಕ್ಕಾಗಿ ಕೈಗೊಳ್ಳುವ ಕಾಯಕವನ್ನು ಸತ್ಯ ಮತ್ತು ನಿಷ್ಠೆಯಿಂದ ಮಾಡಬೇಕು. ಸಮ&ಸಮಾಜ, ಸಮಾನತೆ ಮತ್ತು ಸಹಬಾಳ್ವೆ ಜೀವನ ಪ್ರತಿಯೊಬ್ಬ ವ್ಯಕ್ತಿಗೂ ಸಿಗಬೇಕು ಎಂಬುದು ಕಾಯಕ ಶರಣರ ಆಶಯವಾಗಿತ್ತು. ಶರಣರ ಜೀವನಾನುಭವ ಮತ್ತು ಪ್ರಖರ ಸಂದೇಶಗಳು ಸಮಾಜದ ಕೈಗನ್ನಡಿಯಾಗಿವೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಮತ್ತು ಕಾಯಕ ಶರಣರ ಜಯಂತ್ಯುತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯ ಮತ್ತು ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.
12ನೇ ಶತಮಾನದ ಬಸವಣ್ಣ ಅವರಿಗಿಂತ ಹಿರಿಯ ಶರಣರಾದ ದೇವರ ದಾಸಿಮಯ್ಯ, ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರು ಸಮಾಜದ ನೈಜ ಸಂಗತಿಗಳನ್ನು ಕಂಡು ವಚನ ರಚಿಸಿದ್ದಾರೆ. ಗಂಡು&ಹೆಣ್ಣು, ಮೇಲು&ಕೀಳು, ಬಡವ&ಬಲ್ಲಿದ ಎಂಬ ತಾರತಮ್ಯ ನಿವಾರಣೆಗಾಗಿ ಶರಣರು ನಡೆಸಿದ ನಿರಂತರ ಚಳುವಳಿ ಜಗತ್ತಿನ ಯಾವ ಭಾಗದಲ್ಲಿಯೂ ನಡೆದಿಲ್ಲ ಎಂದರು.
ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಡಾ.ಶ್ರೀಶೈಲ ನಾಗರಾಳ ಉಪನ್ಯಾಸ ನೀಡಿ, 12ನೇ ಶತಮಾನದ ಪೂರ್ವದಲ್ಲಿ ಜನಿಸಿದ ದೇವರ ದಾಸಿಮಯ್ಯ ಮನುಕುಲದ ಒಳಿತಿಗೆ ಜನಾಂದೋಲನ ಮಾಡಿದರು. ವಚನ ಚಳುವಳಿಯಲ್ಲಿ ಜೀವಧ್ವನಿಯಾಗಿ ಮೇಲ್ವರ್ಗಗಳ ಜನರು ಪೂಜೆ ಮತ್ತು ಧರ್ಮ ಹೆಸರಿನಲ್ಲಿ ಶ್ರಮಿಕ ವರ್ಗವನ್ನು ಶೋಷಿಸಲಾಗುತ್ತಿತ್ತು. ಒಬ್ಬ ಶರಣರ ಧ್ವನಿಗೆ ಎಲ್ಲಾ ಶರಣರ ಧ್ವನಿಗೂಡಿ ಸಮಾಜದ ಎಲ್ಲಾ ವರ್ಗದ ಜನರ ಜೀವನ ಸುಧಾರಣೆಗೆ ಶ್ರಮಿಸಿದರು. ನೇಯ್ಗೆ ಕಾಯಕದ ಮೂಲಕ ಇತರರಿಗೆ ಕಾಯಕ ಪ್ರೆ ಮೂಡಿಸಿದರು. ಹಸಿವು ಮತ್ತು ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ದಾಸಿಮಯ್ಯ ಸ್ವಾವಲಂಬನೆ ಬದುಕಿಗೆ ಮಾರ್ಗ ತೋರಿಸಿ ಬಡತನ ನಿವಾರಿಸಿದರು. ದುರ್ಬಲ ವರ್ಗಗಳನ್ನು ಸಬಲರನ್ನಾಗಿಸಿ ಸಮಾನತೆಯ ಸಮಾಜ ನಿರ್ಮಿಸಿದರು ಎಂದರು.
ವಿಶ್ರಾಂತ ಪ್ರಾಧ್ಯಾಪಕಿ ಡಾ.ಅಮೃತ ಕಟಕೆ ಮಾತನಾಡಿ, ಶರಣ ಸಾಹಿತ್ಯ ಪರಂಪರೆಯಲ್ಲಿ ಕಾಯಕ ಶರಣರು ಶುದ್ಧ ಮತ್ತು ಸತ್ಯ ಕಾಯಕ ಜನಪ್ರಿಯಗೊಳಿಸಿದರು. ಶ್ರೇಷ್ಠ ಕಾಯಕ ಪರಂಪರೆ ಬೆಳೆಸಿದರು. ಆಡಳಿತ ಸೇವೆಯಷ್ಟೇ ಕಸ ಗುಡಿಸುವ ಕೆಲಸಕ್ಕೂ ಶ್ರೇಷ್ಠತೆ ಇದೆ. ಎಲ್ಲಾ ಕುಲ ಕಸುಬುಗಳಿಗೂ ತನ್ನದೇ ಮಹತ್ವವಿದೆ ಎಂಬುದು ಕಾಯಕ ಶರಣರ ಆಶಯವಾಗಿತ್ತು. ಕುಂಬಾರಿಕೆ, ಅಕ್ಕ ಸಾಲಿಗ, ಅಂಬಿಗ, ಬಡಿಗ, ಸಮಗಾರ ಹೀಗೆ ಶರಣರಲ್ಲಿ ಸಮಾನ ಕಾಯಕ ಪ್ರೆಯಿತ್ತು. 17ನೇ ಶತಮಾನದ ಕೈಗಾರಿಕ ಕ್ರಾಂತಿ ನಂತರ ನಡೆದ ಕಲ್ಯಾಣ ಕ್ರಾಂತಿಯಿಂದ ದುಡಿಯುವ ವರ್ಗ ಒಂದುಗೂಡಲು ಸಾಧ್ಯವಾಯಿತು. 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರ ಜಾತಿ ಪದ್ಧತಿ, ಲಿಂಗ ತಾರತಮ್ಯ, ಮೂಢ ನಂಬಿಕೆ, ಕಾಯಕ, ಭಕ್ತಿ ಮತ್ತು ಸಮಾನತೆ ಮತ್ತು ದಾಸೋಹ ತತ್ವ ಮೂಲಕ ಸಮ&ಸಮಾಜ ರೂಪಿಸಿದರು ಎಂದು ವಿವರಿಸಿದರು.
ಜಯಂತ್ಯುತ್ಸವ ಸಮಿತಿ ಸಂಚಾಲಕ ಪ್ರೊ.ಎಚ್​.ಟಿ.ಪೋತೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಜಾಗತಿಕ ನೆಲೆಯಲ್ಲಿ ಬುದ್ಧನ ನಂತರ ಕಲ್ಯಾಣ ಕರ್ನಾಟಕದಲ್ಲಿ ಶರಣ ಚಳುವಳಿ ನಡೆದಿದೆ. ಬಸವಣ್ಣನ ನಾಡಿನಲ್ಲಿ ಜನಪರ ಕಳಕಳಿ, ಮಾನವೀಯ ತತ್ವಗಳನ್ನು ಬಿತ್ತಲು ಕ್ರಾಂತಿ ನಡೆದು ತಮ್ಮ ಕುಲ ವೃತ್ತಿ ಧರ್ಮ ಮತ್ತು ಕಾಯಕಗಳಿಂದ ಸಮಾಜ ಸುಧಾರಣೆ ಸಾಧ್ಯವಾಯಿತು ಎಂದರು.
ಸಿಂಡಿಕೇಟ್​ ಸದಸ್ಯ ರಾವೇಂದ್ರ ಎಂ.ಬೈರಪ್ಪ, ವಿದ್ಯಾವಿಷಯಕ ಪರಿಷತ್​ ಸದಸ್ಯ ಪ್ರೊ.ಟಿ.ಶಂಕರಪ್ಪ, ಕುಲಸಚಿವ ಪ್ರೊ.ರಮೇಶ ಲಂಡನಕರ್​, ಮೌಲ್ಯಮಾಪನ ಕುಲಸಚಿವ ಡಾ.ಎನ್​.ಜಿ.ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕ, ದೇವರ ದಾಸಿಮಯ್ಯ ಜಯಂತ್ಯುತ್ಸವ ಸಮಿತಿ ಸಂಚಾಲಕ ಬಿ.ಎಂ.ರುದ್ರವಾಡಿ ಇದ್ದರು.

ಶರಣರ ಜೀವನ, ವಚನ ಮತ್ತು ಚಳುವಳಿಗೆ ಅದರದೇ ಆದ ಚಾರಿತ್ರಿಕ ಮತ್ತು ಸಾಂಸತಿಕ ಮಹತ್ವವಿದೆ. ವಿದ್ಯಾರ್ಥಿಗಳು ಶರಣರ ವಚನ ಪರಂಪರೆ, ಅವರ ಕೊಡುಗೆ ಕುರಿತು ಅಧ್ಯಯನ ಮಾಡುವುದು ಅಗತ್ಯ.