ಯಾದಗಿರಿಯಲ್ಲಿ ಶನಿವಾರ ಸಂಜೆ ನಡೆದ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಡಾ.ಸಿದ್ಧರಾಜರೆಡ್ಡಿ ಅವರಿಗೆ ನಿರ್ಗಮಿತ ಅಧ್ಯ ಭೀಮನಗೌಡ ಕ್ಯಾತ್ನಾಳ ಅಧಿಕಾರ ಹಸ್ತಾಂತರಿಸಿದರು. ಎಸ್ಪಿ ಪೃಥ್ವಿಕ್ ಶಂಕರ್, ಹರಿನಾರಾಯಣ ಭಟ್ಟಡ್, ಸುರೇಶ ಜಗ್ನಾನಿ ಇತರರಿದ್ದರು.
- ಎಸ್ಪಿ ಪೃಥ್ವಿಕ್ ಶಂಕರ್ ಅಭಿಮತ
- ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಸಿದ್ಧರಾಜರೆಡ್ಡಿ ಪದಗ್ರಹಣ
ಯಾದಗಿರಿ: ಮಾನವ ಜೀವನದ ನಿಜವಾದ ಸಾರ್ಥಕತೆ ಅಧಿಕಾರ ಅಥವಾ ಸಂಪತ್ತಿನಲ್ಲಿಲ್ಲ. ಬದಲಾಗಿ ನೊಂದವರ ಕಣ್ಣೀರೊರೆಸಿ ದೀನ-ದಲಿತರ ಕೈಹಿಡಿಯುವುದರಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಯಾದಗಿರಿ ಟಕದ ನೂತನ ಅಧ್ಯಕ್ಷ ಡಾ.ಸಿದ್ಧರಾಜರೆಡ್ಡಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿದ ಅವರು, ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಲಯನ್ಸ್ ಕ್ಲಬ್ ಪರಿಸರ ರಕ್ಷಣೆ, ಉಚಿತ ಆರೋಗ್ಯ ಸೇವೆ ಹಾಗೂ ಶೈಕ್ಷಣಿಕ ನೆರವು ಮೂಲಕ ಮಾನವ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಜಾಗತಿಕ ವಿಪತ್ತು ವೇಳೆಯೂ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿರುವುದು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶ್ಲಾಘಸಿದರು.
ಸಂಘ-ಸಂಸ್ಥೆಗಳ ಮೂಲಕ ಅನುಭವ ಹೊಂದಿರುವ ಡಾ.ಸಿದ್ಧರಾಜರೆಡ್ಡಿ ಅವರ ಸಮರ್ಥ ನಾಯಕತ್ವದಲ್ಲಿ ಕ್ಲಬ್ ಇನ್ನಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕ್ಲಬ್ ಹೈದರಾಬಾದ್ ವಲಯ ಮುಖ್ಯಸ್ಥ ಸುರೇಶ ಜಗ್ನಾನಿ, ಇಲ್ಲಿನ ಲಯನ್ಸ್ ಕ್ಲಬ್ನ ಪ್ರತಿಯೊಂದು ಸೇವಾ ಕಾರ್ಯಕ್ಕೂ ಸಂಪೂರ್ಣ ಬೆಂಬಲ ಇರಲಿದೆ. ಸಮಾಜದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂಥ ಅರ್ಥಪೂರ್ಣ ಯೋಜನೆಗಳನ್ನು ಹಮ್ಮಿಕೊಳ್ಳಿ ಎಂದು ನೂತನ ತಂಡಕ್ಕೆ ಸಲಹೆ ನೀಡಿದರು.
ನೂತನ ಅಧ್ಯಕ್ಷ ಡಾ.ಸಿದ್ಧರಾಜರೆಡ್ಡಿ ಮಾತನಾಡಿ, ಮುಂದಿನ ದಿನಗಳಲ್ಲಿ ನೂರಾರು ಜನರ ಉಚಿತ ನೇತ್ರ ಶಸಚಿಕಿತ್ಸೆ, ಸಾವಿರಾರು ಗಿಡ ನೆಡುವಿಕೆ ಹಾಗೂ ಸ್ವಾವಲಂಬಿ ಕೇಂದ್ರ ಸ್ಥಾಪಿಸಿ ಶಾಶ್ವತ ಉದ್ಯೋಗ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಘೋಷಿಸಿದರು.
ನಿರ್ಗಮಿತ ಅಧ್ಯಕ್ಷ ಭೀಮನಗೌಡ ಕ್ಯಾತನಾಳ, ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಗೋಳ, ಖಜಾಂಚಿ ಸಿದ್ರಾಮರೆಡ್ಡಿ ತಿಪ್ಪರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ಧಪ್ಪ ಹೊಟ್ಟಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಇತರರಿದ್ದರು. ಪದಾಧಿಕಾರಿಗಳಿಗೆ ಹರಿನಾರಾಯಣ ಭಟ್ಟಡ್ ಪ್ರಮಾಣವಚನ ಬೋಧಿಸಿದರು.