ಜಗತ್ತಿನ ಪ್ರತಿ ಜೀವಿಗೂ ಆತ್ಮಾನುಸಂಧಾನದ ಸತ್ಯ ದರ್ಶನದ ಪಥವನ್ನು ತೋರುವುದೇ ದಾರ್ಶನಿಕ ಶಾಸ್ತ್ರ. ಅಂತಹ ದಾರ್ಶನಿಕ ತತ್ವಗಳನ್ನು ಒಳಗೊಂಡ ಸಾಹಿತ್ಯ ಕೃತಿಗಳ ಸಾಲಿಗೆ ನೂತನ ಸೇರ್ಪಡೆ ‘ವೀರಶೈವ ಪಂಚಸೂತ್ರೀಯ ಪ್ರವಚನ’. ಇದೊಂದು ಮಹಾಕಾವ್ಯ. ಕಾವ್ಯರಚನೆಗೆ ಇತಿಹಾಸ, ಪುರಾಣ, ತತ್ವಶಾಸ್ತ್ರ, ನಾಯಕ ಇತ್ಯಾದಿ ಲಕ್ಷಣಗಳಿವೆ. ಅಂತೆಯೇ ಮಹಾನ್ ವಿದ್ವಾಂಸರೂ, ಪಂಡಿತರೂ, ತತ್ವಚಿಂತಕರೂ ಆಗಿರುವ ಕಾಶೀ ಜ್ಞಾನಸಿಂಹಾಸನ ಮಹಾಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸುಮಾರು ಎರಡೂವರೆ ಸಾವಿರ ಶ್ಲೋಕಗಳಲ್ಲಿ ಈ ಕಾವ್ಯವನ್ನು ರಚಿಸಿದ್ದಾರೆ. ಇದರಲ್ಲಿ ಆದಿ ಜಗದ್ಗುರು ಸದಾಶಿವನೇ ಮಹಾನಾಯಕನಾಗಿದ್ದು, ಆತನಿಂದಲೇ ಉಪದೇಶ ಪಡೆದ ಜಗದ್ಗುರು ಪಂಚಾಚಾರ್ಯರು ನಾಯಕರಾಗಿದ್ದಾರೆ.
ಪ್ರಾಚೀನ ಕಾಲದಿಂದ ಪಂಚಸೂತ್ರಗಳಿದ್ದರೂ ಅವುಗಳ ವಿಸõತ ವಿಶ್ಲೇಷಣೆ ಮಾಡುವ ಸಾಹಿತ್ಯ ಇರಲಿಲ್ಲ. ಈ ಕೊರತೆ ನೀಗಿಸಿದ ಮಹಾಕಾವ್ಯ ವೀರಶೈವ ಪಂಚಸೂತ್ರಾಣಿ ಗ್ರಂಥ. ವೀರಶೈವ ಎಂಬುದು ಜಾತಿ, ವರ್ಗ, ಪಂಗಡವನ್ನು ಸೂಚಿಸುವ ಪದವಲ್ಲ. ಬದಲಾಗಿ ಶಿವ-ಜೀವರ ಅಧ್ಯಾತ್ಮ ಅನುಸಂಧಾನದ ಮಾರ್ಗ. ಈ ಮಾರ್ಗದಲ್ಲಿ ಹೋಗಬಯಸುವ ವ್ಯಕ್ತಿ ತನ್ನ ಉತ್ಕಟ ಭಕ್ತಿ ಮತ್ತು ಯೋಗ್ಯತೆಯ ಮೂಲಕ ಗುರುವಿನಿಂದ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿ ಜೀವಾತ್ಮ ಪರಮಾತ್ಮನಾಗಿ ಬದಲಾಗುವ ಮಹಾ ಮಾರ್ಗದೊಳಗಿನ ಅಗಾಧ ದಾರ್ಶನಿಕ ವಿಚಾರಗಳೇ ಆದಿಜಗದ್ಗುರು ಪಂಚಾಚಾರ್ಯರು ಪಂಚಮುನಿಗಳಿಗೆ ಬೋಧಿಸಿದ ಪಂಚಸೂತ್ರಗಳು.
ಸರಳ ಶೈಲಿ ಪ್ರವಚನ: ದಾರ್ಶನಿಕ ವಿಚಾರಗಳು ಸಾಮಾನ್ಯವಾಗಿ ಗೂಢಾರ್ಥ, ವಿಶೇಷಾರ್ಥ ಗಳಿಂದ ಕೂಡಿರುತ್ತವೆ. ಅದರಲ್ಲೂ ಪಂಚಸೂತ್ರಗಳು 1, 2, 3 ಅಕ್ಷರಗಳಲ್ಲಿ ಸಕಲ ಸೃಷ್ಟಿಯ ರಹಸ್ಯವನ್ನೇ ಬೋಧಿಸಿವೆ. ಅಂತಹ ಪಂಚಸೂತ್ರಗಳ ವ್ಯಾಖ್ಯಾನವು ಪುಸ್ತಕಗಳಿಗೆ ಸೀಮಿತವಾಗಿ ಉಳಿಯದೆ ಮುಮುಕ್ಷುಗಳ ಮಸ್ತಕಕ್ಕೆ ತಲುಪಬೇಕೆಂಬ ಸದಿಚ್ಛೆಯೊಂದಿಗೆ ಡಾ. ಚಂದ್ರಶೇಖರ ಭಗವತ್ಪಾದರು ಈ ಪ್ರವಚನವನ್ನು ಬರೆದಿದ್ದಾರೆ. ಈ ಹಿಂದೆ ಶ್ರೀ ಸಿದ್ಧಾಂತ ಶಿಖಾಮಣಿಯನ್ನು ‘ಪ್ರವಚನ ಪ್ರಭೆ’ ಎಂಬ ಹೆಸರಿನಲ್ಲಿ 2 ಸಂಪುಟ ಹೊರತಂದು ದೇಶದ ಮೂಲೆ ಮೂಲೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಇಂದು ದೇಶ-ವಿದೇಶದ 22 ಭಾಷೆಗಳಿಗೆ ಭಾಷಾಂತರಗೊಂಡು ಜನಪ್ರಿಯವಾಗಿದೆ. ಅದೇ ಮಾದರಿಯಲ್ಲಿ ವೀರಶೈವ ಪಂಚಸೂತ್ರೀಯ ಕಾವ್ಯವನ್ನು ಪ್ರವಚನ ಶೈಲಿಯಲ್ಲಿ ಪ್ರಕಟಿಸುವ ಮೂಲಕ ಕೇವಲ ಗೋತ್ರ-ಸೂತ್ರ ಪಟಕ್ಕೆ ಸೀಮಿತವಾಗಿದ್ದ ಪಂಚಸೂತ್ರಗಳನ್ನು ಓದುಗರ ಸ್ಮೃತಿ ಪಟಲಕ್ಕೆ ತರುತ್ತಿದ್ದಾರೆ.
ಪಂಚಸೂತ್ರಗಳ ವಿಸ್ತಾರ ರೂಪ: ಕಾಶೀ ಜಗದ್ಗುರುಗಳು ರಚಿಸಿದ್ದ ಸಂಸ್ಕೃತ ಗ್ರಂಥ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಶ್ಲೋಕಗಳ ಭಾವಾರ್ಥ (ಕಾರಿಕೆ, ಭಾಷ್ಯೆ) ಸಹಿತ ಪ್ರಕಟಗೊಂಡಿವೆ. ಆದರೆ ಪ್ರವಚನದ ಮೂಲಕ ಪಂಚ ಸೂತ್ರಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಇದರಲ್ಲಿ ವಿವರಿಸಲಾಗಿದೆ. ವೀರಶೈವ ಸಿದ್ಧಾಂತಕ್ಕೆ ಪ್ರಮಾಣ ಗ್ರಂಥಗಳಾಗಿರುವ ಸ್ಮೃತಿ, ಆಗಮ, ಸಿದ್ಧಾಂತ ಶಿಖಾಮಣಿ ಇತ್ಯಾದಿಗಳ ಆಧಾರದಲ್ಲಿ ಪಂಚಸೂತ್ರಗಳನ್ನು ವಿಸõತವಾಗಿ ವ್ಯಾಖ್ಯಾನಿಸಲಾಗಿದೆ. ಸ್ವಾಮೀಜಿಗಳು, ಪುರಾಣಿಕರು, ಪ್ರವಚನಕಾರರಿಗೆ ಸಹಕಾರಿಯಾಗಲಿದೆ.
ಏತಾನಿ ಪಂಚ ಸೂತ್ರಾಣೀ ಪಂಚಾಚಾರ್ಯಕೃತಾನಿ ಚ
ಆದ್ಯಾನಿತಿ ಪ್ರಸಿದ್ಧಾನಿ ಸೂತ್ರಾಣೀ ಖಲು ಭಾರತೇ
ಜಗತ್ತಿನ ಎಲ್ಲ ವಿದ್ಯೆಗಳೂ ಸೂತ್ರ ರೂಪದಲ್ಲಿಯೇ ಪ್ರತಿಪಾದಿಸಲ್ಪಟ್ಟಿದ್ದು, ಪಂಚಾಚಾರ್ಯರು ಪ್ರತಿಪಾದಿಸಿದ ಶಿವಾದ್ವೈತ ಸಿದ್ಧಾಂತವು ಪಂಚಸೂತ್ರಗಳ ವಿಸõತ ಭಾಗವಾಗಿದೆ. ಕ್ರಮವಾಗಿ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಅಗಸ್ಱ, ದದೀಚಿ, ವ್ಯಾಸ, ಸಾನಂದ ಮತ್ತು ದೂರ್ವಾಸ ಮುನಿಗಳಿಗೆ ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ, ಪಂಚವರ್ಣ ಹೀಗೆ ಪಂಚಸೂತ್ರಗಳ ಮೂಲಕ ಜೀವಾತ್ಮ, ಪರಮಾತ್ಮ, ಜಗತ್ತು, ಬಂಧ ಮತ್ತು ಮೋಕ್ಷ ಎಂಬ ದಾರ್ಶನಿಕ ವಿಷಯಗಳ ರಹಸ್ಯವನ್ನು ವಿವರಿಸಿದ್ದಾರೆ. ಈ ಗ್ರಂಥದಲ್ಲಿ 13 ಅಧ್ಯಾಯಗಳಿದ್ದು, ನಾಲ್ಕು ಯುಗಗಳ ಸಂಪೂರ್ಣ ವೃತ್ತಾಂತವನ್ನು ವಿವರಿಸಲಾಗಿದೆ. ಕಾಶೀ ಜಗದ್ಗುರುಗಳು ಸಂಸ್ಕೃತದ ಅನುಷ್ಟುಪ್ ಛಂದಸ್ಸಿನಲ್ಲಿ ಬರೆದಿರುವ ಮಹಾಕಾವ್ಯದ ಮೂಲ ಗ್ರಂಥ ಈಗಾಗಲೇ ಕಾಶೀ ಹಿಂದೂ ವಿಶ್ವವಿದ್ಯಾಲಯ, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯಗಳ ಶಾಸ್ತ್ರಿ ಪರೀಕ್ಷೆಗೆ ಪಠ್ಯ ಗ್ರಂಥವಾಗಿದೆ.
ಶ್ರೀ ಜಗದ್ಗುರು ಪಂಚಾಚಾರ್ಯರು ಬೋಧಿಸಿದ ದಾರ್ಶನಿಕ ಆದ್ಯಸೂತ್ರಗಳನ್ನು ಕುರಿತು ಈ ಕಾವ್ಯವು ರಚಿತವಾಗಿರುವುದರಿಂದ ಇದೊಂದು ದಾರ್ಶನಿಕ ಮಹಾಕಾವ್ಯ. ಇದರ ತುಂಬೆಲ್ಲ ಗುರು ಹಾಗೂ ಇಷ್ಟದೇವರ ವಿಷಯಕವಾದ ರತಿಭಾವವು ಅಭಿವ್ಯಕ್ತವಾಗಿದೆ. ಸರಸವೂ ಸರಳವೂ ಆಗಿದ್ದು ಪ್ರಸಾದಗುಣದಿಂದ ಓತಪ್ರೋತವಾಗಿದೆ.
| ಡಾ. ಕಮಲೇಶ ಝಾ ಕಾಶಿ ಹಿಂದೂ ವಿವಿ ವಿಶ್ರಾಂತ ಪ್ರಾಧ್ಯಾಪಕ