ಸಿಂದಗಿ ನಗರದ ಎಚ್.ಜಿ. ಕಾಲೇಜು ಆವರಣದಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ವಚನ ಸಾಹಿತ್ಯ ಚಿಂತನ ಗೋಷ್ಠಿಯನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕಿತ್ತೂರ ರಾಣಿ ಚನ್ನಮ್ಮ ಕೃತಿಯನ್ನು ಬಿಡುಗಡೆಗೊಳಿಸಿದರು. ಸುಖದೇವಿ ಅಲಬಾಳಮಠ, ಶಿಲ್ಪಾ ಭಸ್ಮೆ, ಅಶೋಕ ಬಿರಾದಾರ ಇತರರಿದ್ದರು.
- ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಭಿಮತ
- ವಚನ ಸಾಹಿತ್ಯ ಚಿಂತನ ಗೋಷ್ಠಿ ಉದ್ಘಾಟನೆ
ಸಿಂದಗಿ: ಹನ್ನೆರಡನೇ ಶತಮಾನದ ವಚನಗಳು ನಮ್ಮ ನೆಲದ ಅತೀತ ಅಧ್ಯಾತ್ಮ ಶಕ್ತಿಯು ವಿಶ್ವಕ್ಕೆ ಬೆಳಕು ತೋರಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ನಗರದ ಎಚ್.ಜಿ. ಕಾಲೇಜಿನ ಆವರಣದಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿ-2 ವಚನ ಸಾಹಿತ್ಯ ಚಿಂತನ ಗೋಷ್ಠಿ ಉದ್ಘಾಟಿಸಿ, ಕಿತ್ತೂರ ರಾಣಿ ಚನ್ನಮ್ಮ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಜನಿಸಿದ ವಿಶ್ವಗುರು ಬಸವಣ್ಣ ತಮ್ಮ ಹಾಗೂ ಕಾಯಕ ಶರಣರ ವಚನಗಳಿಗೂ ಕಲ್ಯಾಣದಲ್ಲಿ ಸ್ಥಾನ ನೀಡಿದ್ದರು. ನಡೆದಾಡುವ ಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಅಧ್ಯಾತ್ಮದ ಶಕ್ತಿಯನ್ನು ಪ್ರವಚನದ ಮೂಲಕ ಪಸರಿಸಿ, ವಿಶ್ವದ ತುಂಬೆಲ್ಲ ಮನೆ ಮಾತಾಗಿದ್ದಾರೆ. ಇಂತಹ ಜಿಲ್ಲೆಯಲ್ಲಿರುವ ನಾವುಗಳೇ ಭಾಗ್ಯವಂತರು ಎಂದರು.
ವಚನ ಸಾಹಿತ್ಯವನ್ನು ನಮ್ಮವರೇ ಆದ .ಗು. ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸಿ, ಅವುಗಳನ್ನು ಪ್ರಿಂಟ್ ಮಾಡಿ, ಪೀಳಿಗೆಗೆ ಶರಣ ಸಾಹಿತ್ಯವನ್ನು ಉಳಿಸಿದ ಸಂದರ್ಭ ಬಹಳ ಕಠಿಣವಾಗಿತ್ತು. ಆದರೂ ಛಲ ಬಿಡದೇ ಹಳಕಟ್ಟಿ ವಚನಗಳಿಗೆ ಆಸರೆಯಾದರು ಎಂದರು.
ಅನುಭವ ಮಂಟಪದಲ್ಲಿ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯ ಸಂವಾದ ಕುರಿತು ಶಿಕ್ಷಕಿ, ಪ್ರವಚನಕಾರ್ತಿ ಸುಖದೇವಿ ಅಲಬಾಳಮಠ, ವಚನ ಸಾಹಿತ್ಯದಲ್ಲಿ ಶರಣರ ಅನುಭವ ಕುರಿತು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಹಾಗೂ ವಚನ ಸಾಹಿತ್ಯದಲ್ಲಿ ಕಾಯಕ ತತ್ವ ವಿಷಯದ ಕುರಿತು ಸಾಹಿತಿ ಅಶೋಕ ಬಿರಾದಾರ ಉಪನ್ಯಾಸ ನೀಡಿದರು.
ಮಾಜಿ ಶಾಸಕ ರಮೇಶ ಭೂಸನೂರ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯಕ್ಷ ವೈ.ಸಿ. ಮಯೂರ ಮಾತನಾಡಿದರು. ಸರ್ವಾಧ್ಯಕ್ಷ ಹ.ಮ. ಪೂಜಾರ, ಶ್ರೀ ಸಿದ್ಧರಾಮ ಸ್ವಾಮಿಗಳು, ಶ್ರೀ ಶಾಂತಗಂಗಾಧರ ಸ್ವಾಮಿಗಳು, ಶ್ರೀ ಪ್ರಭುಲಿಂಗ ಸ್ವಾಮಿಗಳು, ವಿ.ಸಿ. ನಾಗಠಾಣ, ಡಾ. ಸಂಗಮೇಶ ಮೇತ್ರಿ, ಸಾಹಿತಿಗಳಿದ್ದರು. ಸುಜಾತಾ ಹ್ಯಾಳದ ಸ್ವಾಗತಿಸಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ರೇಖಾ ಕುಂಬಾರ ವಂದಿಸಿದರು.