ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಜಯಂತಿ ಆಚರಿಸಲಾಯಿತು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಹಿರಿಯ ಸಾಹಿತಿ ಡಾ.ಮೃತ್ಯುಂಜಯ ರುಮಾಲೆ ಇತರರಿದ್ದರು.
- ಶ್ರೀ ಗುರುಬಸವ ಪಟ್ಟದ್ದೇವರು ನುಡಿ
- ಚನ್ನಬಸವೇಶ್ವರ ಗುರುಕುಲದಲ್ಲಿ ಜಯಂತಿ
ಭಾಲ್ಕಿ: ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸುವ ಮೂಲಕ ವಚನ ಸಾಹಿತ್ಯವನ್ನು ಪುನರುತ್ಥಾನ ಮಾಡಿದವರು ಫ.ಗು.ಹಳಕಟ್ಟಿಯವರು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪಿಠ ಟ್ರಸ್ಟ್ನ ವತಿಯಿಂದ ಭಾನುವಾರ ಆಯೋಜಿಸಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ಜಯಂತಿ ಉತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಅಲ್ಲಲ್ಲಿ ಉಳಿದುಕೊಂಡಿದ್ದ ಹಾಗೂ ಕಳೆದು ಹೋಗಿದ್ದ ಎಲ್ಲ ವಚನಗಳನ್ನು ಸಂಗ್ರಹಿಸಲು ನಾಡಿನಾದ್ಯಂತ ಸಂಚರಿಸಿ ಅವುಗಳನ್ನು ಸಂಗ್ರಹಿಸಿದರು. ಆ ಮೂಲಕ ಅಚ್ಚುಕಟ್ಟಾಗಿ ವಚನಗಳನ್ನು ಅಚ್ಚು ಮಾಡಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದರು.
ಫ.ಗು.ಹಳಕಟ್ಟಿಯವರು ತಮ್ಮ ಇಡೀ ಜೀವನವನ್ನೇ ವಚನ ಸಾಹಿತ್ಯದ ಉಳಿವಿಗಾಗಿ ಮುಡಿಪಾಗಿಟ್ಟಿದ್ದ ಮಹಾನ್ ವಿದ್ವಾಂಸರು ಎಂದು ಬಣ್ಣಿಸಿದರು.
ಅನುಭಾವ ನುಡಿದ ಹೊಸಪೇಟೆಯ ಹಿರಿಯ ಸಾಹಿತಿ ಡಾ.ಮೃತ್ಯುಂಜಯ ರುಮಾಲೆ, ಹಳಕಟ್ಟಿಯವರು ತಮ್ಮ ಜೀವನವನ್ನು ವಚನ ಸಾಹಿತ್ಯಕ್ಕಾಗಿ ಮುಡಿಪಾಗಿಟ್ಟವರು. ವಚನ ಸಾಹಿತ್ಯದ ಬೆಳಕನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳು ಹಳಕಟ್ಟಿ ಅವರ ಜೀವನ ಮತ್ತು ಸಾಧನೆಯ ಕುರಿತು ಚನ್ನಾಗಿ ಅಧ್ಯಯನ ಮಾಡಿ ಸಂಸ್ಕಾರ ಭರಿತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಶಾಂತಕುಮಾರ್ ಸಂಗೊಳಗೆ, ಶಾಮರಾವ ಡೊಂಗರಗಿ ಇತರರಿದ್ದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಸ್ವಾಗತಿಸಿದರು. ಮಧುಕರ್ ಗಾಂವಕರ್ ನಿರೂಪಣೆ ಮಾಡಿ ವಂದಿಸಿದರು.