The leading DVD in the literary world
ತಿಪಟೂರು: ಮೆಟ್ರಿಕ್ ಪರೀಕ್ಷೆಯಲ್ಲಿ ಕನ್ನಡ ಫೇಲ್ ಆದರೂ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಪತ್ರಿಕೋದ್ಯಮ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಮೆರಗು ತಂದ ಡಿ.ವಿ.ಗುಂಡಪ್ಪ ಅವರ ಸ್ಮರಣೆ ಅತ್ಯಂತ ಪ್ರಸ್ತುತ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಸವರಾಜಪ್ಪ ಬಣ್ಣಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಪತ್ರಕರ್ತರ ಸಂಘ ಮತ್ತು ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಡಿ.ವಿ.ಗುಂಡಪ್ಪ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಮೆಟ್ರಿಕ್ ಕನ್ನಡ ವಿಷಯದಲ್ಲಿ ಫೇಲ್ ಆದರೂ, ಕನ್ನಡ ಸಾಹಿತ್ಯ ಲೋಕದಲ್ಲಿ ಅಗ್ರಗಣ್ಯರೆಂದು ಗುರುತಿಸಿಕೊಂಡು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅಷ್ಟೇ ಅಲ್ಲದೇ ಪ್ರತಿಷ್ಠಿತ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ವಿ.ಗುಂಡಪ್ಪ ಓರ್ವ ಮೇರು ಪ್ರತಿಭೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಪ್ರತಿಭೆ ಹೊಂದಿದ್ದರೂ, ಅವರು ಗುರುತಿಸಿಕೊಂಡಿದ್ದು ಪತ್ರಕರ್ತರಾಗಿ. ಈ ಮೂಲಕ ಅವರು ರಾಜ್ಯದ ಪತ್ರಿಕಾ ಸಂಘಗಳನ್ನು ಒಟ್ಟುಗೂಡಿಸಿ ಕಾರ್ಯನಿರತ ಪತ್ರಕರ್ತರ ಸಂಘ ಸ್ಥಾಪಿಸಿದ್ದರು ಎಂದರು.
ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಟಿ.ಎಸ್.ದಯಾನಂದ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೇಗವಾಗಿ ಸುದ್ದಿ ಮುಟ್ಟಿಸುವ ಧಾವಂತದಲ್ಲಿ ಪೂರ್ವಾಪರ ವಿಶ್ಲೇಷಿಸದೇ ಸುಳ್ಳು ಸುದ್ದಿಗಳನ್ನು ಜನತೆಗೆ ಮುಟ್ಟಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದರು.
ಕಾಲೇಜಿನ ಉಪನ್ಯಾಸಕ ಮಂಜುನಾಥಸ್ವಾಮಿ ಮಾತನಾಡಿ, ಸಮಾಜ ಮತ್ತು ಜನತೆಯಲ್ಲಿ ನೈತಿಕ ಮೌಲ್ಯಗಳನ್ನು ಬಿಂಬಿಸುವಲ್ಲಿ ಕಾರ್ಯನಿರತರಾಗಿರುವ ಪತ್ರಕರ್ತರ ಹೆಸರಿನಲ್ಲಿ ಸಂಘ ಸಂಸ್ಥಾಪಿಸಿ ರಾಷ್ಟ್ರವನ್ನು ಒಂದುಗೂಡಿಸಿ ಜಾಗೃತಿ ಮೂಡಿಸುವ ಮಹತ್ಕಾರ್ಯವನ್ನು ಮಾಡಿದ ಡಿ.ವಿ.ಗುಂಡಪ್ಪ ಅವರ ಜನ್ಮ ಜಯಂತಿ ಆಚರಣೆ ಕೇವಲ ಸಾಂಕೇತಿಕವಾಗಿರಬಾರದು, ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಹನುಮಂತಪ್ಪ ತಂಗೊಳ್ಳಿ ಮಾತನಾಡಿ, ಪತ್ರಿಕಾರಂಗದ ಭೀಷ್ಮ ಡಿವಿಜಿ. ಅವರು ಪತ್ರಿಕೋದ್ಯಮ ಜತೆಗೆ ಕನ್ನಡ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಎಂದಿಗೂ ಕಾಯಕನಿಷ್ಠೆ ಮತ್ತು ಸತ್ಯ ಬಿಟ್ಟುಕೊಡದ ಅವರ ಬರವಣಿಗೆಗೆ ಸಾಟಿಯಿಲ್ಲ ಎಂದರು.