ಅಯೋಧ್ಯೆ : ಶ್ರೀವಿವೇಕಾನಂದ ಸೇವಾ ಸಮಿತಿ ವತಿಯಿಂದ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಧನ್ವಂತರಿ ಹೋಮ, ಮತ್ತಿತರ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಂತರ ಕಾಶೀ ಜಗದ್ಗುರುಗಳು ರಾಮಜನ್ಮಭೂಮಿ ಮಂದಿರ ಪರಿಸರವನ್ನು ಸಂಪೂರ್ಣ ವೀಕ್ಷಿಸಿದರು. ಈ ವೇಳೆ ಮಾತನಾಡಿದ ಕಾಶೀ ಜಗದ್ಗುರುಗಳು, ಶ್ರೀರಾಮ ಜನ್ಮಭೂಮಿ ಮಂದಿರದ ಪರಿಸರದಲ್ಲಿ ಭಾರತೀಯ ಧಾರ್ಮಿಕ ಪರಂಪರೆಯ ಚಿತ್ರಣವನ್ನು ಅನಾವರಣಗೊಳಿಸಲಾಗಿದೆ. ಸನಾತನ ಸಂಸ್ಕೃತಿಯನ್ನು ಬಿಂಬಿಸುವ ದೇಶದ ಸಂತ ಪರಂಪರೆ, ಆಚಾರ್ಯ ಪರಂಪರೆಯ ನೋಟ ಉತ್ತಮವಾಗಿ ಮೂಡಿ ಬಂದಿವೆ. ವಿಶೇಷವಾಗಿ ಅಗಸ್ತ್ಯ, ದಧೀಚಿ, ವ್ಯಾಸ, ಸಾನಂದ ಮತ್ತು ದುರ್ವಾಸ ಮಹರ್ಷಿಗಳಿಗೆ ದಾರ್ಶನಿಕ ವಿಚಾರಗಳನ್ನು ಉಪದೇಶ ಮಾಡಿದ ಆದಿ ಜಗದ್ಗುರು ಪಂಚಾಚಾರ್ಯರ ಪಂಚಸೂತ್ರ ಪ್ರಸಂಗವನ್ನು ನಿರ್ಮಿಸುವುದರಿಂದ ಆಚಾರ್ಯ ಪರಂಪರೆಯ ನೋಟ ಪರಿಪೂರ್ಣಗೊಳ್ಳಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ದೇವಾಲಯದ ಮುಖ್ಯಸ್ಥರಲ್ಲಿ ಓರ್ವರಾದ ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್‌ಜಿ, ಅವಶ್ಯವಾಗಿ ಪಂಚಸೂತ್ರ ಬೋದನೆಯ ಪ್ರಕರಣವನ್ನು ಪಂಚಲೋಹದ ಬೃಹತ್ ಉಬ್ಬುಶಿಲ್ಪ ರೂಪದಲ್ಲಿ ನಿರ್ಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಕ್ಷೇತ್ರೀಯ ಕಾರ್ಯವಾಹಕ ಎನ್. ತಿಪ್ಪೇಸ್ವಾಮಿ, ವಿಹಿಂಪ ಮುಖಂಡ ಲಿಂಗರಾಜ ಅಪ್ಪ, ಕಾಶೀ ಪೀಠದ ವ್ಯವಸ್ಥಾಪಕರಾದ ಆರ್.ಕೆ.ಸ್ವಾಮಿ. ಶಿವಾನಂದ ಹಿರೇಮಠ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.