ಸಾಹಿತಿ ಜಗನ್ನಾಥ್ ರಾವ್ ಬಹುಳೆ ಅವರು ಕನ್ನಡ ಬಾವುಟವನ್ನು ಪ್ರದರ್ಶನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಸಾಹಿತಿ ತಾನಂ ಕುಮಾರಸ್ವಾಮಿ ಸೇರಿ ಗಣ್ಯರು ಇದ್ದಾರೆ.
ಆನೇಕಲ್ : ಪ್ರಸ್ತುತ ಆಧುನಿಕತೆ ಬೆಳೆದಂತೆ ಪರಿಸರದ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಯುವ ಪೀಳಿಗೆಯಲ್ಲಿ ಪರಿಸರ ಪ್ರೇಮ ಕಡಿಮೆಯಾಗುತ್ತಿದೆ. ಅಲ್ಲದೇ ಕೈಗಾರೀಕರಣದಿಂದ ಕಾರ್ಖಾನೆಗಳು ಹೆಚ್ಚಾಗುವ ಜತೆಗೆ ಪರಿಸರ ಮಾಲಿನ್ಯವು ಅಧಿಕವಾಗುತ್ತಿದೆ ಎಂದು ಸಮ್ಮೇಳನಾಧ್ಯಕ್ಷ ಜಗನ್ನಾಥರಾವ್ ಬಹುಳೆ ಕಳವಳವ್ಯಕ್ತಪಡಿಸಿದರು.
ತಾಲೂಕಿನ ಹೆಬ್ಬಗೋಡಿಯಲ್ಲಿ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದಿಂದ ಭಾನುವಾರ ಆಯೋಜಿಸಿದ್ದ ಗಡಿನಾಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇಲ್ಲಿನ ಹವಾಗುಣವೂ ರಾಗಿ ಬೆಳೆಗೆ ಪೂರಕವಾಗಿದ್ದು, ಆನೇಕಲ್ ರಾಗಿ ಕಣಜ ಎಂದೇ ಪ್ರಸಿದ್ಧಿ ಪಡೆದಿದೆ. ಇಂತಹ ನೆಲವನ್ನು ಕೈಗಾರಿಕೆಗಳಿಗೆ ನೀಡಲು ಮುಂದಾಗುತ್ತಿರುವುದು ಖಂಡನೀಯ. ಕೈಗಾರಿಕೆಗಳ ಸ್ಥಾಪನೆಯಿಂದ ಆದಾಯ ಬರಬಹುದು, ಆದರೆ ಅಕ್ಕಿ, ರಾಗಿ ಸೃಷ್ಟಿಸುವ ಯಾವುದೇ ಕೈಗಾರಿಕೆಯನ್ನು ಇನ್ನೂ ಕಂಡು ಹಿಡಿದಿಲ್ಲ. ಅಲ್ಲದೇ ಕೈಗಾರಿಕೆಗಳಿಂದ ತಾಲೂಕಿನ ಹಲವು ಕೆರೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಹೆನ್ನಾಗರ ಕೆರೆಗೆ ಕೈಗಾರಿಕೆ ತ್ಯಾಜ್ಯ ನೀರು ಹರಿಯುತ್ತದೆ. ಜಿಗಣಿ ಕೆರೆ ನೀರಿನ ಬಣ್ಣವೆ ಬದಲಾಗಿದೆ. ಚಂದಾಪುರ ಕೆರೆ ಅವಸಾನದತ್ತ ಮುಖ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ಪ್ರೇಮಕ್ಕೆ ಕೊರತೆ ಇಲ್ಲ : ಆನೇಕಲ್ ಗಡಿಭಾಗದಲ್ಲಿದ್ದರೂ ಕನ್ನಡ ಸಾಹಿತ್ಯ, ಸಾಂಸತಿಕ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತದೆ. ತಮಿಳುನಾಡಿನಲ್ಲಿಯೂ ಕನ್ನಡದ ಪ್ರೇಮ ಸಾರಿದ ಕೀರ್ತಿ ತಾಲೂಕಿನ ಜನರಿಗೆ ಸಲ್ಲುತ್ತದೆ. ಪೂರ್ವದಲ್ಲಿ ಹೊಸೂರು, ಹೊಸಕೋಟೆ, ಪಶ್ಚಿಮಕ್ಕೆ ಕನಕಪುರ, ದಕ್ಷಿಣಕ್ಕೆ ತಮಿಳುನಾಡಿನ ಡೆಂಕಣಿಕೋಟೆ, ಹೊಸೂರಿನೊಂದಿಗೆ ಆನೇಕಲ್ ಗಡಿ ಹಂಚಿಕೊಂಡಿದೆ. ಗಡಿಯಲ್ಲಿದ್ದರೂ ಕನ್ನಡ ಪ್ರೇಮಕ್ಕೆ ಕೊರತೆ ಇಲ್ಲ ಎಂದು ಜಗನ್ನಾಥರಾವ್ ಬಹುಳೆ ಹೇಳಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಇಂಚರ ನಾರಾಯಣಸ್ವಾಮಿ ಮಾತನಾಡಿ, ಭಾಷಾ ಬಹುತ್ವ ಇಂದಿನ ಸಾಮಾಜಿಕ ಬದುಕಿನ ವಾಸ್ತವ. ವಿವಿಧಭಾಷೆಗಳ ನಡುವೆ ಪರಸ್ಪರ ಗೌರವ ಮತ್ತು ಸಹಬಾಳ್ವೆ ಮನೋಭಾವ ಬೆಳೆಸುವುದು ಅಗತ್ಯ. ಆದರೆ, ಆ ನೆಲೆಯಲ್ಲಿ ಕನ್ನಡವನ್ನು ಪ್ರಧಾನವಾಗಿ ನೋಡುವಂತಾಗಬೇಕು ಎಂದರು.
ಹೆಬ್ಬಗೋಡಿ ನಗರಸಭೆ ಅಧ್ಯಕ್ಷೆ ಸುಜಾತಾ ಕೆ.ಪಿ.ರಾಜು, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ರಮೇಶ್ ಕಮತಗಿ, ಹೆಬ್ಬಗೋಡಿ ಸರ್ಕಾರಿ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪಾಜಿ, ಲೇಖಕ ಶೈಲೇಶ್ ಪಟವರ್ಧನ್, ಲೇಖಕ ತಾ.ನಂ.ಕುಮಾರಸ್ವಾಮಿ, ಭಾರ್ಗವಿ ಶೆಟ್ಟಿ, ವಿಭಾ ಪುರೋಹಿತ್, ಶಿವಲಿಂಗಪ್ಪ, ಶಿಕ್ಷಣ ಸಂಯೋಜಕ ಶಿವಣ್ಣ, ಮುಖಂಡರಾದ ಕಬಡ್ಡಿ ಬಾಬು, ಮಂಜುಳಾ, ನವೀನ್ ಇದ್ದರು.
ಜಲಮೂಲ ಸಂರಸಿ : ಕೆರೆಗಳಿಗೆ ಕಲುಷಿತ ನೀರು ಹರಿಸುವ ಕಾರ್ಖಾನೆಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಲಯ ಹಲವು ಭಾರಿ ದಂಡ ವಿಧಿಸಿದರೂ ಪ್ರಯೋಜನ ಆಗಿಲ್ಲ. ಕೆರೆಗೆ ನಿರಂತರವಾಗಿ ಕೈಗಾರಿಕೆಗಳ ತ್ಯಾಜ್ಯ ಹರಿಯುತ್ತಿದೆ. ಶ್ರೀ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಯಾವುದೇ ಜಲಮೂಲ ಇಲ್ಲ. ಕೊಳವೆ ಬಾವಿ ಆಶ್ರಯಿಸಿ ಜೀವನ ನಡೆಸಲಾಗುತ್ತಿದೆ. ದಕ್ಷಿಣ ಪಿನಾಕಿನಿ ಮತ್ತು ಸುವರ್ಣಮುಖಿ ನದಿಗಳು ಕಲುಷಿತಗೊಂಡಿವೆ. ಇದರಿಂದ ಯಾರಿಗೂ ಉಪಯೋಗ ಇಲ್ಲದಂತಾಗಿದೆ ಎಂದು ಜಗನ್ನಾಥರಾವ್ ಬಹುಳೆ ಬೇಸರ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ : ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಶಿಕ್ಷಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಿಕ್ಷಕರಾದ ವೆಂಕಟೇಶ್ ಕುಲಕರ್ಣಿ, ಎಚ್.ಮಂಜುನಾಥ್ ಗಂಗಾಧರ, ವಿನೋದ, ಸರೋಜಮ್ಮ, ಅನಸೂಯಾ, ಯಶೋಧಾ, ಪವಿತ್ರಾ, ಪುಷ್ಪಾರಾಣಿ, ಉಮಾದೇವಿ, ರೂಪಾ, ಸರಳಾ, ಶಾಂತಮ್ಮ, ಧನಂಜಯ ನಾಯ್ಕ, ಶ್ರೀಶೈಲ ಲೋಣಿ ಪ್ರಶಸ್ತಿಗೆ ಭಾಜನರಾದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 30ಕ್ಕೂ ಹೆಚ್ಚು ಸಾಧಕರಿಗೆ ಹೆಮ್ಮೆಯ ಕನ್ನಡಿಗ, ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. "ಜಗಪದ', ವಿಶಾಲ ಆರಾಧ್ಯ ಅವರ "ದಿಟ್ಟಿಗೆ ದಿಟ್ಟಿ', ಮಹಾಂತೇಶ ರಾಜಗುರು ಅವರ "ವ್ಯಾಕರಣ ಕಮಲ' ಪುಸ್ತಕಗಳನ್ನು ಲೋಕಾಪರ್ಣೆಗೊಳಿಸಲಾಯಿತು. ಗಡಿನಾಡು ಪ್ರದೇಶಗಳಲ್ಲಿ ಕನ್ನಡಿಗರು ಭಾಷೆ, ಸಾಹಿತ್ಯ ಮತ್ತು ಸಾಂಸತಿಕ ಪರಂಪರೆ ಉಳಿಸಿಕೊಳ್ಳಲು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲಾಯಿತು.