ಶಹಾಪುರ ತಾಲೂಕು ಮಹಲ್ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ ರದ್ದು ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ಕಾರ್ಯಕರ್ತರು ಕಲಬುರಗಿ ಜಗತ್ ವೃತ್ತದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ಲಚ್ಚಪ್ಪ ಜಮಾದಾರ್, ಪಿಂಟು ಜಮಾದಾರ್, ರಾಮಲಿಂಗ ನಾಟೀಕಾರ, ಮಲ್ಲಿಕಾರ್ಜುನ, ಭೀಮಶಾ ಖನ್ನಾ, ಅರುಣಕುಮಾರ, ರಾಮು, ರಾಜಶೇಖರ ಗುರೂಜಿ ಇತರರಿದ್ದರು.
- ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಪಡಿಸಲು ಆಗ್ರಹ
ಕಲಬುರಗಿ: ಶಹಾಪುರ ತಾಲೂಕು ಮಹಲ್ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಪಡಿಸಬೇಕು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರಾಥಮಿಕ ತನಿಖೆ ಕೈಗೊಳ್ಳದೆ ಪೋಕ್ಸೋ ಕೇಸ್ ದಾಖಲಿಸಲು ಸೂಚಿಸಿರುವ ಯಾದಗಿರಿ ಡಿಸಿ, ಎಸ್ಪಿ ಮತ್ತು ಜಿಪಂ ಸಿಇಒ ಅವರನ್ನು ಅಮಾನತುಗೊಳಿಸಬೇಕು. ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ಆಧರಿಸಿ ಮಗು ಮತ್ತು ಪಾಲಕರ ಹೇಳಿಕೆ ಪಡೆಯದೆ ಸೋಮೋಟೊ ಪ್ರಕರಣ ದಾಖಲಿಸಿರುವ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷರನ್ನು ವಜಾಗೊಳಿಸಬೇಕು. ಸುಳ್ಳು ಸುದ್ದಿ ಹರಿಬಿಟ್ಟವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆ ಮಾಹಿತಿ ಬಹಿರಂಗಪಡಿಸಬಾರದು ಎಂಬ ನಿಯಮವಿದ್ದರೂ ಮುತ್ಯಾ ಪ್ರಕರಣ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಮುತ್ಯಾ ತಂದೆ ದಿ.ಹಣಮಂತರಾಯ ಅವರನ್ನು ಈ ಭಾಗದ ದೇವರು ಎಂದು ಭಕ್ತರು ಪೂಜಿಸುತ್ತಿದ್ದು, ಅವರ ನಿಧನದ ನಂತರ ದ್ವೀತಿಯ ಪುತ್ರ ಮಲ್ಲಿಕಾರ್ಜುನ ಅವರನ್ನು ಅಸಂಖ್ಯ ಭಕ್ತರು ನಂಬಿದ್ದಾರೆ. ಮಹಲ್ರೋಜಾ ಮಠದಲ್ಲಿ ಮೊಹರಂ ವಿಜೃಂಭಣೆಯಿಂದ ನಡೆಯುತ್ತದೆ. ಆಂಧ್ರ, ತೆಲಂಗಾಣ ಸೇರಿ ಅನೇಕ ಭಾಗಗಳಿಂದ ಲಕ್ಷಾಂತರ ಭಕ್ತರು ಮಠಕ್ಕೆ ಆಗಮಿಸುತ್ತಾರೆ. ಇಂಥ ಮಠದ ಮುತ್ಯಾ ಮುತ್ಯಾ ಏಳಿಗೆ ಸಹಿಸದ, ಅವರ ಹೆಸರು ಕೆಡಿಸಿ ತೇಜೋವಧೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿ ರಾಜ್ಯ ಅಧ್ಯಕ್ಷ ಲಚ್ಚಪ್ಪ ಜಮಾದಾರ್, ಪಿಂಟು ಜಮಾದಾರ್, ರಾಮಲಿಂಗ ನಾಟೀಕಾರ, ಮಲ್ಲಿಕಾರ್ಜುನ ಜಿ., ಬ್ರಹ್ಮಶ್ರೀ ರಾಜಗುರು ಸ್ವಾಮಿ, ಕೋಟುರೇಶ್ವರ ಮಹಾಸ್ವಾಮೀಜಿ, ಚಿದಾನಂದ ಮಹಾರಾಜ, ಭೈರತ ಆನಂದ ಗುರುಗಳು, ರತ್ನಾಕಾಂತ ಶಿವಯೋಗಿಗಳು, ಸಿದ್ಧ ಶಿವಯೋಗಿಗಳು, ರಾಜಶೇಖರ ಗುರೂಜಿ, ಭೀಮಶಾ ಖನ್ನಾ, ಅರುಣಕುಮಾರ ಇನಾಮದಾರ್, ರಾಮು ಉಮ್ಮರಗಿ ಇತರರಿದ್ದರು.
ವಿಶೇಷ ಸಂಪುಟ ಸಭೆ ಕರೆದು ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಪಡಿಸಬೇಕು. ಅಮಾಯಕ ಸ್ವಾಮಿಗೆ ಅನ್ಯಾಯವಾಗಲು ಬಿಡಬಾರದು. ಈ ಪ್ರಕರಣದ ಹಿಂದೆ ಹುನ್ನಾರವಿದ್ದು, ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
> ಲಚ್ಚಪ್ಪ ಜಮಾದಾರ್ಅಧ್ಯಕ್ಷ,
ರಾಜ್ಯ ಕೋಲಿ, ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ