ಸನಾತನ ಧರ್ಮದ ನಾಲ್ಕು ಕಂಬಗಳೆಂದೇ ಪರಿಗಣಿತವಾದ ವೇದಗಳಲ್ಲಿ ಅಥರ್ವ ವೇದವೂ ಒಂದು. ಅದರಲ್ಲಿ ವಾಸ್ತುಶಾಸ್ತ್ರ ಹಾಗೂ ಶಿಲ್ಪಶಾಸ್ತ್ರ ಎಂಬ ಎರಡು ಭಾಗಗಳ ಉಲ್ಲೇಖ ದೊರೆಯುತ್ತದೆ. ವಾಸ್ ಎಂದರೆ ಸಂಸ್ಕೃತದಲ್ಲಿ ವಾಸ ಅಸ್ತು ಎಂದರೆ ಶಕ್ತಿ ಕೊಡುವುದು. ವಾಸ್ತು ಎಂದರೆ ಸುಖ-ಶಾಂತಿ-ಆರೋಗ್ಯದಿಂದ ಜೀವನ ನಡೆಸುವುದು ಎಂದರ್ಥ.
ವಾಸ್ತು ಶಾಸ್ತ್ರವೂ ಒಂದು ವಿಜ್ಞಾನ. ಪ್ರಕೃತಿದತ್ತ ನೈಜ ವಿಜ್ಞಾನ. ಇದು ನೈಸರ್ಗಿಕವಾಗಿ ಖಗೋಳ, ಭೌತ, ಸಸ್ಯ, ಪ್ರಾಣಿ, ಭೂಗರ್ಭ, ತಾಂತ್ರಿಕ, ರಚನಾಕ್ರಮ ಮತ್ತು ಗಣಿತ ಶಾಸ್ತ್ರಗಳಿಂದ ಕೂಡಿದೆ. ಅನಾದಿ ಕಾಲದಿಂದ ನಮ್ಮ ಪೂರ್ವಿಕರು ಈ ನೈಸರ್ಗಿಕ ಜ್ಞಾನವನ್ನು ಅಭ್ಯಸಿಸಿ, ಅನೇಕ ನಿಯಮಗಳನ್ನು ಪ್ರಕೃತಿದತ್ತವಾಗಿ ತಿಳಿದುಕೊಂಡಿದ್ದರು. ಪ್ರಸ್ತುತ ಆಧುನಿಕ ವಿಜ್ಞಾನಿಗಳು ಇದನ್ನೇ ಗುರುತ್ವಾಕರ್ಷಣ ಶಕ್ತಿ, ವಿದ್ಯುತ್ಕಾಂತೀಯ ಶಕ್ತಿ, ವಿಕಿರಣ ಶಕ್ತಿ, ವಿಕಿರಣಶೀಲ ಶಕ್ತಿ ಎಂದು ವಿಂಗಡಿಸಿದ್ದಾರೆ. ಈ ಶಕ್ತಿಗಳನ್ನೇ ನಮ್ಮ ಪೂರ್ವಜರು ದೇವಾಲಯ ವಾಸ್ತು ಮತ್ತು ಮನುಷ್ಯಾಲಯ ವಾಸ್ತು ನಿಯಮಗಳಲ್ಲಿ ಅಳವಡಿಸಿದ್ದಾರೆ. ಇದರಿಂದಾಗಿ ದೇಶದ ಹಲವಾರು ದೇವಾಲಯಗಳು ಸಾವಿರಾರು ವರ್ಷಗಳಿಂದ ಗಟ್ಟಿಯಾಗಿರುವುದು ನಮ್ಮ ಯುವ ಪೀಳಿಗೆ ಆಶ್ಚರ್ಯಪಡುವಂತೆ ಮಾಡಿದೆ.
ದೇಶದಲ್ಲಿ ಅನೇಕ ದೇವಾಲಯಗಳನ್ನು ವಾಸ್ತು ನಿಯಮ ಅನುಸರಿಸಿ ನಿರ್ವಿುಸಲಾಗಿದೆ. ತಂಜಾವೂರಿನ ಬೃಹದೇಶ್ವರ ದೇವಾಲಯ ನಿರ್ವಿುಸಿ 1000ಕ್ಕೂ ಅಧಿಕ ವರ್ಷವಾಗಿದೆ. ಅದರ ನಿರ್ಮಾಣ ಈಗಿನ ಇಂಜಿನಿಯರ್ಗಳಲ್ಲೇ ಅಚ್ಚರಿ ಮೂಡಿಸುವಂತಿದೆ. ಬೆಂಗಳೂರಿನ ಹಲಸೂರು ಶ್ರೀ ಸೋಮೇಶ್ವರ ದೇವಾಲಯವನ್ನೂ 48 ಕಂಬಗಳುಳ್ಳ ಅಂದರೆ 27 ನಕ್ಷತ್ರ, 12 ರಾಶಿಗಳು, 9 ಗ್ರಹಗಳ ಆಧಾರದ ಮೇಲೆ ನಿರ್ವಿುಸಲಾಗಿದ್ದು, ಕಾಸ್ಮಿಕ್ ಕಿರಣಗಳು, ಅಂದರೆ ಬಾಹ್ಯಾಕಾಶದಲ್ಲಿ ಬೆಳಕಿನ ವೇಗದ ಸಮೀಪದಲ್ಲಿ ಅತ್ಯಂತ ಹೆಚ್ಚಿನ ಶಕ್ತಿಯೊಂದಿಗೆ ಚಲಿಸುವ ಸೂಕ್ಷ್ಮ ಕಣಗಳನ್ನು ಸಕಾರಾತ್ಮವಾಗಿ ಪಡೆದು, ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರೇರಣೆ ನೀಡುತ್ತಿವೆ. ರಾಶಿ ಚಕ್ರದ ಚಿಹ್ನೆಗಳನ್ನು ಇಲ್ಲಿಯ ಕಂಬಗಳಲ್ಲಿ ಕೆತ್ತಿರುವುದೇ ಒಂದು ಸೂಕ್ಷ್ಮ ರಹಸ್ಯ.
ರಾಮಾಯಣ, ಮಹಾಭಾರತದಲ್ಲಿ ವಾಸ್ತು: ದಶರಥ ಮಹಾರಾಜನ ಅಯೋಧ್ಯೆ ನಗರದಲ್ಲಿ ಅರಮನೆ, ನಗರ, ರಸ್ತೆ, ಕೋಟೆ ದೇವಾಲಯಗಳ ನಿರ್ವಣದಲ್ಲಿ ವಾಸ್ತುಶಾಸ್ತ್ರ ಅಳವಡಿಸಿರುವುದರ ಬಗ್ಗೆ ಉಲ್ಲೇಖವಿದೆ. ದ್ವಾಪರ ಯುಗದ ಮಹಾಭಾರತದ ಶಾಂತಿ ಪರ್ವದಲ್ಲಿ ಕೋಟೆಗಳನ್ನು ವಾಸ್ತು ವಿಜ್ಞಾನದನ್ವಯ ನಿರ್ವಿುಸುತ್ತಿದ್ದರೆಂದು, ಸಾವಿರ ಕಂಬ, ನೂರು ದ್ವಾರಗಳ ರಾಜ ಸಭಾಗೃಹಗಳು ಇದ್ದುದರ ಬಗ್ಗೆ ವಿವರವಿದೆ. ರಾಮಾಯಣ, ಮಹಾಭಾರತದ ಕಾಲದಲ್ಲಿ ಮಯ, ವಿಶ್ವಕರ್ಮರ ವಾಸ್ತು ನಿಯಮ ಮತ್ತು ಸೂತ್ರಗಳನ್ನು ಗೃಹ, ಮಂದಿರ, ಅರಮನೆ, ಕೋಟೆಗಳ ನಿರ್ವಣದಲ್ಲಿ ಅಳವಡಿಸಿಕೊಂಡಿದ್ದರು. ಮಯ ಎಂಬುವವನು ರಾಕ್ಷಸ ಶಿಲ್ಪಿ ಮತ್ತು ವಿಶ್ವಕರ್ಮ ದೇವಶಿಲ್ಪಿಯಾಗಿದ್ದರು.
ಸಿಂಧೂ ನಾಗರಿಕತೆ ಕ್ರಿ.ಪೂ. 7000: ಸಿಂಧೂ ನಾಗರಿಕತೆ ಭಾರತ ಉಪಖಂಡದ ಅತ್ಯಂತ ಪ್ರಾಚೀನ ಕಂಚಿನ ಯುಗ. ಪುರಾತತ್ವ ಶಾಸ್ತ್ರಜ್ಞರು ಹರಪ್ಪಾ ಮತ್ತು ಮೊಹೆಂಜೊದಾರೊ ಪ್ರಮುಖ ನಗರಗಳನ್ನು ವಾಸ್ತು ಸೂತ್ರದನ್ವಯ ನಿರ್ವಿುಸಿದ್ದರು ಎಂದು ಉತ್ಖನನ ಮಾಡಿದ ವಿಜ್ಞಾನಿಗಳು ಹೇಳಿದ್ದಾರೆ. ಅಂದರೆ ಸಿಂಧೂ ತಟದ ನಾಗರಿಕತೆ ಬೆಳೆಯಲು ವಾಸ್ತು ವಿಜ್ಞಾನದ ಸೂತ್ರಗಳು ಬಹು ಮುಖ್ಯ ಪಾತ್ರ ವಹಿಸಿವೆ ಎಂಬುದು ಸಾಬೀತಾಗಿದೆ.
ಜ್ಯೋತಿಷ, ವಾಸ್ತು ಮೇಲೆ ಮೊಘಲ್ ರಾಜರ ನಂಬಿಕೆ: ಬಾಗ್ದಾದ್ನ ಅಡಿಗಲ್ಲನ್ನು ಜ್ಯೋತಿಕ್ ರಾಯ್ ಅವರ ಸಲಹೆಯಂತೆ 762ರ ಜುಲೈ 31ರಂದು ಮಧ್ಯಾಹ್ನ 2.40ಕ್ಕೆ ಶಂಕುಸ್ಥಾಪನೆ ಮಾಡಿ ನಗರವನ್ನು ಕಟ್ಟಲು ಪ್ರಾರಂಭಿಸಲಾಯಿತು ಎಂದು ಇತಿಹಾಸಕಾರ ಮತ್ತು ಲೇಖಕ ಬೆನ್ಸನ್ ಬಾಬ್ರಿಕ್ ತಮ್ಮ ‘ದಿ ಖಲೀಫ್ಸ್ ಸ್ಪೆ ್ಲಟರ್’ ಕೃತಿಯಲ್ಲಿ ತಿಳಿಸಿದ್ದಾರೆ. ಜಹಾಂಗೀರ್ ಜ್ಯೋತಿಷ-ವಾಸ್ತು ಶಾಸ್ತ್ರದಲ್ಲಿ ಅಪಾರ ನಂಬಿಕೆ ಇಟ್ಟಿದ್ದ. ಅವನ ರಾಜ್ಯದ ನಾಣ್ಯಗಳ ಮೇಲೆ ನಮ್ಮ ರಾಶಿಗಳ ಚಿಹ್ನೆಗಳನ್ನು ಮುದ್ರಿಸುತ್ತಿದ್ದ ಎಂಬುದು ಅಂದಿನ ಚರಿತ್ರೆಯಿಂದ ತಿಳಿದುಬರುತ್ತದೆ.
ವಾಸ್ತು ಅನ್ವಯ ನಿರ್ವಿುತ ಬೆಂಗಳೂರು: ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂಗಳೂರು ಕೂಡ ವಾಸ್ತು ಸೂತ್ರಗಳನ್ವಯವೇ ಇದೆ. ನಗರದ ಹೃದಯ ಭಾಗವಾದ ಮಾರ್ಕೆಟ್ ಬಳಿ ನಿರ್ವಿುತವಾದ ಕೆಂಪೇಗೌಡರ ಕೋಟೆಯ ಪೂರ್ವ ಮತ್ತು ಉತ್ತರ ಅಂದರೆ ಈಶಾನ್ಯ ದೇವತೆ ಶಿವ-ರುದ್ರ ಅಷ್ಟ ಐಶ್ವರ್ಯಗಳ ನಿಲಯ. ಇದು ದೇವ ಮೂಲೆ. ಕೋಟೆಯ ಪೂರ್ವ-ಈಶಾನ್ಯ ಪೂರ್ವದಲ್ಲಿ ಹಲಸೂರು ಶ್ರೀ ಸೋಮೇಶ್ವರ ದೇವಾಲಯ. ಈಶಾನ್ಯದಲ್ಲಿ ಹಲಸೂರು ಕೆರೆ. ಬೆಂಗಳೂರಿನಿಂದ ಮೂಡಲ ಬಾಗಿಲು ಅಂದರೆ ಮುಳಬಾಗಿಲಿನಿಂದ ಹಾಯ್ದು ಹೋದರೆ ಕುರುಡುಮಲೆ ಗಣಪತಿ ದೇವಾಲಯದ ಮುಖಾಂತರ ಈಶಾನ್ಯಕ್ಕೆ ತಿರುಮಲ ತಿರುಪತಿ ಬೆಂಗಳೂರು ನಗರಕ್ಕೆ ಅಷ್ಟ ಐಶ್ವರ್ಯ ತುಂಬಲು ವಾಸ್ತು ಸೂತ್ರಗಳು ಅದ್ಭುತವಾಗಿ ಕಾರ್ಯನಿರ್ವಹಿಸಿವೆ.
ಆಂಧ್ರದ ರಾಜಧಾನಿ ಅಮರಾವತಿ: ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಸಕ್ತಿಯಂತೆ ಅಮರಾವತಿ ನಗರವನ್ನು ಕೃಷ್ಣಾ ನದಿ ಹತ್ತಿರ ಇರುವ ಜಾಗದಲ್ಲಿ ನಿರ್ವಿುಸಲಾಗುತ್ತಿದೆ. ವಾಸ್ತುವಿನ ಜಲ ಮತ್ತು ಭೂಮಿ ನಿಯಮ ಇದಕ್ಕೆ ಕಾರಣ. ಕಾರ್ಡಿನಲ್ ಆಕ್ಸಿಸ್ ಉತ್ತರ ದಕ್ಷಿಣ, ಪೂರ್ವ-ಪಶ್ಚಿಮ ದಿಕ್ಕಿಗೆ ಅನುಗುಣವಾಗಿ ಮುಖ್ಯ ರಸ್ತೆಗಳು ಮತ್ತು ಆಡಳಿತ ಕೇಂದ್ರದ ಅಲೈನ್ವೆುಂಟ್ ಮಾಡಲಾಗಿದೆ. ಕಾರ್ಡಿನಲ್ ದಿಕ್ಕಿಗೆ ಜೋಡಿಸಿದ ಆಯತಾಕಾರದ ಗ್ರಿಡ್ನಿಂದ ಭವಿಷ್ಯದ ಮನೆಗಳು ಪೂರ್ವಾಭಿಮುಖ ಆಗುತ್ತವೆ. ಸಾರ್ವಜನಿಕ ಪ್ರವೇಶ ಉತ್ತರ ದಿಕ್ಕಿನಿಂದ, ಮಂತ್ರಿಗಳ ಪ್ರವೇಶ ಪೂರ್ವ ದಿಕ್ಕಿನಿಂದ, ಅಸೆಂಬ್ಲಿ ಚೇಂಬರ್, ನೈರುತ್ಯ ಮೂಲೆಯಲ್ಲಿ. ಇದು ಅತ್ಯಂತ ಶುಭಸ್ಥಾನ ಎನ್ನುತ್ತದೆ ವಾಸ್ತು ಶಾಸ್ತ್ರ. ಕೌನ್ಸಿಲ್ ಹಾಲ್ ಈಶಾನ್ಯ ಮೂಲೆಯಲ್ಲಿ, ಆಡಳಿತ ಕಛೇರಿಗಳು ವಾಯುವ್ಯ ದಿಕ್ಕಿನಲ್ಲಿ, ಕೇಂದ್ರ- ಬ್ರಹ್ಮ ಸ್ಥಾನ ಖಾಲಿ ಜಾಗ ಅಂಗಳದಂತೆ ಸಾರ್ವಜನಿಕರ ಸಭೆಗೆ ವಿನ್ಯಾಸ ಮಾಡಲಾಗಿದೆ.
ಡಿ.ಕೆ. ಶಿವಕುಮಾರ್ ಅನುಸರಿಸಿದ ವಾಸ್ತು ಸೂತ್ರಗಳು: 2026ರ ಜೂ. 3ರಂದು ಸಂಜೆ 4.15ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅನುಸರಿಸಿದ ವಾಸ್ತು ವಿಜ್ಞಾನದ ಸೂತ್ರಗಳು ಇಂತಿವೆ. ಲೋಕಭವನದಲ್ಲಿ ಪಶ್ಚಿಮಾಭಿಮುಖವಾಗಿ ಇದ್ದ ಪ್ರಮಾಣ ವಚನದ ವೇದಿಕೆಯ ದಿಕ್ಕನ್ನು ಪೂರ್ವಾಭಿಮುಖವಾಗಿ ಮಾರ್ಪಡಿಸಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ವಾಸ್ತು ಸೂತ್ರಗಳನ್ವಯ ಕುರ್ಚಿ, ಟೇಬಲ್, ಆಸನ ವ್ಯವಸ್ಥೆ, ಅಜ್ಜಯ್ಯನ ಫೋಟೋ ಅಳವಡಿಕೆ, ಉಪಕೋಣೆ, ಶೌಚಗೃಹ ಹಾಗೂ ವಿಶ್ರಾಂತಿ ಕೊಠಡಿ ದಿಕ್ಕು ಮತ್ತು ಸ್ಥಳ ಬದಲಾವಣೆ ಬಗ್ಗೆ ವಾಸ್ತು ತಜ್ಞರ ಅಭಿಪ್ರಾಯ ಪಡೆದು ಮಾರ್ಪಾಟುಗಳನ್ನು ಮಾಡಿಸಿದರು. ರಾಜ್ಯದ ಜನತೆಗೆ ವಾಸ್ತು ವಿಜ್ಞಾನದ ಶುಭ ಸಂದೇಶ ಅವರಿಂದ ರವಾನೆಯಾಗಿದೆ.
ಉತ್ತರದ ನಡಿಗೆ ಎತ್ತರದ ಕಡೆಗೆ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಿಧಾನಸೌಧಕ್ಕೆ ಡಿ.ಕೆ. ಶಿವಕುಮಾರ್ ಉತ್ತರ ದ್ವಾರದ ಮೂಲಕ ಪ್ರವೇಶಿಸಿದ್ದು ಸಹ ವಾಸ್ತುಶಾಸ್ತ್ರದ ನಿಯಮಗಳನ್ವಯವೇ. ಉತ್ತರ ದಿಕ್ಕು ಪ್ರಧಾನವಾಗಿ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ಬುಧನು ಯುವಕರನ್ನು, ವಿದ್ಯೆಯನ್ನು ಪ್ರತಿನಿಧಿಸುವುದರಿಂದ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್, ಯುವಜನರಿಗೆ ಉದ್ಯೋಗ ಗ್ಯಾರಂಟಿ, ಭಾರತ್ ಜೋಡೋ ಯುವ ಸಂಘ ರಚನೆ ಘೊಷಿಸಿದರು. ಇವು ಬುಧ ಗ್ರಹದ ಪ್ರಮುಖ ದಿಕ್ಕಾದ ಉತ್ತರವನ್ನು ಸೂಚಿಸುತ್ತವೆ. ವಾಸ್ತು ವಿಜ್ಞಾನ ಯಾವ ರೀತಿ ಶುಭ ಫಲ ನೀಡುತ್ತದೆೆ ಎಂಬುದಕ್ಕೆ ಇದು ಒಂದು ನಿದರ್ಶನ. ಸುದ್ದಿಗೋಷ್ಠಿಯಲ್ಲೂ ಡಿ.ಕೆ. ಶಿವಕುಮಾರ್ ಉತ್ತರಾಭಿಮುಖವಾಗಿ ಕುಳಿತುಕೊಳ್ಳಲು ಮುಂದಾಗಿರುವುದೂ ವಾಸ್ತು ಶಾಸ್ತ್ರದ ಸೂತ್ರಗಳ ಅನ್ವಯವೇ ಎಂಬುದು ಗಮನಾರ್ಹ.
-(ಲೇಖಕರು ಜ್ಯೋತಿಷರು ಹಾಗೂ ವಾಸ್ತು ತಜ್ಞರು)