ನೆಲಮಂಗಲದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ತಬ್ರೇಜ್ ಮೃತಪಟ್ಟ ಹಿನ್ನೆಲೆ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಸ್ಥಳಕ್ಕೆ ಭೇಟಿ ನೀಡಿದರು.
ನೆಲಮಂಗಲ : ಪೈಪ್ಲೈನ್ ಅಳವಡಿಸಲು ಅಗೆದ ರಸ್ತೆ ಗುಂಡಿಯಿಂದಾಗಿ ಬೈಕ್ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ತಾಲೂಕಿನ ಇಸ್ಲಾಂಪುರ ನಿವಾಸಿ ತಬ್ರೇಜ್ (32) ಮೃತ. ಡಿ.17ರಂದು ನಿಯಂತ್ರಣ ತಪ್ಪಿ ಬಿದ್ದಿದ್ದ ತಬ್ರೇಜ್ ಅವರನ್ನು ನಿಮ್ಹಾನ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿ.19ರಂದು ರಾತ್ರಿ 9ರಲ್ಲಿ ಮೃತಪಟ್ಟಿದ್ದಾರೆ. ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮೃತನ ಕುಟುಂಬಸ್ಥರಿಗೆ 2.5ಲಕ್ಷ ರೂ.ಪರಿಹಾರ ನೀಡುವುದಾಗಿ ತಿಳಿಸಿದರು. ಡಿವೈಎಸ್ಪಿ ಜಗದೀಶ್, ಆರಕ್ಷಕ ನಿರೀಕ್ಷಕ ಭರತ್ಗೌಡ, ನರೇಂದ್ರಬಾಬು, ರವಿ, ಮುರಳೀಧರ್ ಇತರರು ಇದ್ದರು.
ಕುಟುಂಬಸ್ಥರ ಆಕ್ರೋಶ : ತಬ್ರೇಜ್ ಮೃತಪಟ್ಟ ಹಿನ್ನೆಲೆಯಲ್ಲಿ ಮೃತದೇಹವನ್ನು ಮನೆ ಬಳಿ ಇಟ್ಟುಕೊಂಡು ಕುಟುಂಬಸ್ಥರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಡಿಸಿ ಸ್ಥಳಕ್ಕೆ ಬರುವವರೆಗೂ ಮರಣೋತ್ತರ ಪರೀಕ್ಷೆಗೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ, ತಹಸೀಲ್ದಾರ್ ಮಧ್ಯಪ್ರವೇಶದಿಂದ ಕುಟುಂಬಸ್ಥರು ಮೃತದೇಹವನ್ನು ಮರಣೋತ್ತರ ಪರೀೆ ನಡೆಸಲು ಸಮ್ಮತಿ ಸೂಚಿಸಿದರು. ಈ ನಡುವೆ ತಬ್ರೇಜ್ ಕುಟುಂಬಸ್ಥರು ನೆಲಮಂಗಲ ಠಾಣೆಯಲ್ಲಿ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.
ಪೊಲೀಸರ ಕಸರತ್ತು : ಶುಕ್ರವಾರ ತಡರಾತ್ರಿಯಿಂದಲೂ ಮರಣೋತ್ತರ ಪರೀಕ್ಷೆಗೆ ಮೃತದೇಹ ನೀಡುವಂತೆ ಕುಟುಂಬಸ್ಥರನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟರು. ಬೆಳಗ್ಗೆಯಿಂದ ಮನೆಯ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೆಲಮಂಗಲ ನಗರ ಪೊಲೀಸರು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಭೇಟಿ ನೀಡಿದ್ದರು.