ಚಿತ್ತಾಪುರ  
ರಾಜ್ಯ

ಸರ್ಕಾರ ಜನರ ನಡುವೆ ವಾರ್ತಾ ಇಲಾಖೆ ಸೇತುವೆ ಇದ್ದಂತೆ: ಡಿಸಿ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ
  • ಚಿತ್ತಾಪುರದಲ್ಲಿ ಸರ್ಕಾರದ ಯೋಜನೆಗಳ ಮಾಹಿತಿ ಪ್ರದರ್ಶನ ಮಳಿಗೆ ಉದ್ಘಾಟನೆ
ಕಲಬುರಗಿ :  ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಸರ್ಕಾರದ ಯೋಜನೆಗಳ ಪ್ರಚಾರ ಹಾಗೂ ಸಾಧನೆಗಳನ್ನು ಸಾರುವ ಉದ್ದೇಶದಿಂದ ಇಂದಿನಿಂದ ಮೂರು ದಿನಗಳ ಕಾಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮಾಹಿತಿ ಪ್ರದರ್ಶನ ಮಳಿಗೆಯನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಚಿತ್ತಾಪುರ ಬಸ್ ನಿಲ್ದಾಣದಲ್ಲಿಂದು ನಿರ್ಮಿಸಲಾಗಿರುವ ಮಾಹಿತಿ ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರನ್ನು ನೇರವಾಗಿ ಸಂಪರ್ಕಿಸುವ ಈ ವಿನೂತನ ಪ್ರಚಾರ ಕಾರ್ಯ ಜನಮಾನಸದಲ್ಲಿ ಸರ್ಕಾರದ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಒದಗಿಸುತ್ತದೆ ಎಂದರು.
ರಾಜ್ಯ ಸರ್ಕಾರದ ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ಕ್ರಿಯಾಯೋಜನೆಯಡಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತಂತೆ ಜಿಲ್ಲೆಯ ಚಿತ್ತಾಪುರ ಸೇರಿದಂತೆ ರಾಜ್ಯದ ಇತರೆ ಆಯ್ದ ಮೀಸಲು ಕ್ಷೇತ್ರಗಳಲ್ಲಿ ಮಾಹಿತಿ ಪ್ರದರ್ಶನ ಮಳಿಗೆಯನ್ನು ತೆರೆಯಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಚಿತ್ತಾಪುರ ತಾಲ್ಲೂಕಿನ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ಸೇಡಂ ವಿಭಾಗದ ಸಹಾಯಕ ಆಯುಕ್ತ ಪ್ರಭುರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ, ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಕೆಕೆಆರ್ ಟಿಸಿ ಚಿತ್ತಾಪುರ ಡಿಪೊ ಮ್ಯಾನೆಜರ್ ಗೊಲ್ಲಾಳಪ್ಪ ಬಿರಾದರ್ ಸೇರಿದಂತೆ ಚಿತ್ತಾಪುರ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.