ಪ್ರಮುಖ ಮುಖ್ಯಾಂಶಗಳು
ಮೂಲಸೌಕರ್ಯ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಎದುರಾಗುವ ಸಾರ್ವಜನಿಕ ಪ್ರತಿಭಟನೆ, ಕಾನೂನು ಸಂಘರ್ಷ ಮತ್ತು ಬೃಹತ್ ಮೊತ್ತದ ಪರಿಹಾರದ ಆರ್ಥಿಕ ಹೊರೆ ನೀಗಿಸಲು ಸರ್ಕಾರ ದೂರದೃಷ್ಟಿಯ ಹೊಸ ನೀತಿ ರೂಪಿಸುವ ಗಂಭೀರ ಆಲೋಚನೆಯಲ್ಲಿದೆ.
ಭೂಮಿ ನೀಡುವ ರೈತರನ್ನು ಸಂತ್ರಸ್ತರು ಎಂದು ಪರಿಗಣಿಸುವ ಬದಲು, ಆಯಾ ಯೋಜನೆಯ ಲಾಭ ಪಡೆಯುವ ಪಾಲುದಾರರ ರೂಪದಲ್ಲಿ ಪರಿಗಣಿಸುವ ಚಿಂತನೆ ಮೊಳಕೆಯೊಡದಿದ್ದು, ಪ್ರಾಥಮಿಕ ಹಂತದಲ್ಲಿ ಚಿಂತನ ಮಂಥನ ನಡೆದಿದೆ. ಸಾಂಪ್ರದಾಯಿಕ ಭೂಸ್ವಾಧೀನ ಪದ್ಧತಿಯಲ್ಲಿ ರೈತರಿಗೆ ಒಂದೇ ಬಾರಿ ನಗದು ಪರಿಹಾರ ನೀಡಿ ಕೈತೊಳೆದುಕೊಳ್ಳಲಾಗುತ್ತದೆ. ಕೈಗಾರಿಕೆ, ವಸತಿ ನಿವೇಶನ ಯೋಜನೆಯಲ್ಲಾದರೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರದ ಮೊತ್ತಕ್ಕೆ ಸಮಾನವಾಗಿ ನೀಡುವ ವ್ಯವಸ್ಥೆ ಇದೆ. ಆದರೆ, ಈ ಹೊಸ ಮಾದರಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಯೋಜನೆಯಿಂದ ಬರುವ ವಾರ್ಷಿಕ ಆದಾಯದಲ್ಲಿ ನಿರ್ದಿಷ್ಟ ಶೇಕಡವಾರು ಪಾಲನ್ನು ನಿಯಮಿತವಾಗಿ ಹಂಚಿಕೆ ಮಾಡುವ ಚೌಕಟ್ಟನ್ನು ರೂಪಿಸುವ ಬಗ್ಗೆ ಚಿಂತನೆ ನಡೆದಿದೆ.
ಇದು ರೈತರ ಕುಟುಂಬಗಳಿಗೆ ಒಂದು ಬಾರಿಯ ಹಣದ ಬದಲು, ತಲೆಮಾರುಗಳವರೆಗೆ ಸಾಗಬಲ್ಲ ಸುಸ್ಥಿರ ಮತ್ತು ಸ್ಥಿರವಾದ ಮಾಸಿಕ ಅಥವಾ ವಾರ್ಷಿಕ ಆದಾಯದ ಮೂಲವನ್ನು ಸೃಷ್ಟಿಸಲಿದೆ. ಈ ಮಹತ್ವಾಕಾಂಕ್ಷಿ ಮಾದರಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಟೋಲ್ ರಸ್ತೆಗಳು, ವಿಮಾನ ನಿಲ್ದಾಣ ಹಾಗೂ ಎಕ್ಸ್ಪ್ರೆಸ್ವೇ ಯೋಜನೆಗಳು ಸೂಕ್ತ ವೇದಿಕೆಯಾಗಿವೆ. ಹೆದ್ದಾರಿಗಳಲ್ಲಿ ಪ್ರತಿದಿನ ವಾಹನ ಸಂಚಾರದಿಂದ ನಿರಂತರವಾಗಿ ನಗದು ಹರಿವು ಇರುತ್ತದೆ. ಹೀಗೆ ಸಂಗ್ರಹವಾಗುವ ಟೋಲ್ ಆದಾಯದ ಒಂದು ಭಾಗವನ್ನು, ಭೂಮಿ ನೀಡಿದ ವಿಸ್ತೀರ್ಣಕ್ಕೆ ಅನುಗುಣವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ವ್ಯವಸ್ಥೆ ಬಂದರೆ, ಅಭಿವೃದ್ಧಿಯ ಯಶಸ್ಸಿನಲ್ಲಿ ರೈತರ ನೇರ ಭಾಗವಹಿಸುವಿಕೆಯನ್ನು ಖಾತರಿಪಡಿಸಬಹುದು ಎಂಬುದು ಅಧಿಕಾರಿಗಳ ವಿವರಣೆಯಾಗಿದೆ.
ಕಾನೂನು ಮತ್ತು ಆಡಳಿತಾತ್ಮಕ ದೃಷ್ಟಿಯಿಂದಲೂ ಇದು ಮೈಲಿಗಲ್ಲಾಗಬಲ್ಲದು. ಭೂಸ್ವಾಧೀನ ಕಾಯ್ದೆಗಳ ಅಡಿಯಲ್ಲಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು ಸುದೀರ್ಘ ನ್ಯಾಯಾಲಯದ ತಡೆಯಾಜ್ಞೆಗಳು ಮತ್ತು ಅಧಿಕಾರಿಗಳ ಸಮಯ ವ್ಯರ್ಥಕ್ಕೆ ಕಾರಣವಾಗುತ್ತದೆ. ಯೋಜನೆಯಲ್ಲಿ ದೀರ್ಘಕಾಲೀನ ಲಾಭಾಂಶ ಸಿಗುತ್ತದೆ ಎಂಬ ಭರವಸೆ ಮೂಡಿದಾಗ, ರೈತರು ತಾವಾಗಿಯೇ ಭೂಮಿ ನೀಡಲು ಮುಂದೆ ಬರುತ್ತಾರೆ. ತಮ್ಮ ಭೂಮಿಯಲ್ಲಿ ನಿರ್ಮಾಣವಾದ ಹೆದ್ದಾರಿಯಲ್ಲಿ ವಾಹನಗಳು ಚಲಿಸಿದಷ್ಟೂ ತಮಗೆ ಆದಾಯ ಬರಲಿದೆ ಎಂಬ ತೃಪ್ತಿ ಮತ್ತು ಹೆಮ್ಮೆ ರೈತರಲ್ಲಿ ಮೂಡುತ್ತದೆ ಎಂಬ ಅಭಿಪ್ರಾಯ ಅಧಿಕಾರಿಗಳಲ್ಲಿದೆ.
ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಪಾರದರ್ಶಕತೆಯ ಅಗತ್ಯವಿದೆ. ಖಾಸಗಿ ಕಂಪನಿಗಳು ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳು ಆದಾಯದ ಲೆಕ್ಕಾಚಾರದಲ್ಲಿ ರೈತರಿಗೆ ವಂಚಿಸದಂತೆ ತಡೆಯಲು ಡಿಜಿಟಲ್ ಆಡಿಟಿಂಗ್ ವ್ಯವಸ್ಥೆ ತರಬೇಕಾಗುತ್ತದೆ. ಭವಿಷ್ಯದಲ್ಲಿ ಯೋಜನೆ ನಷ್ಟಕ್ಕೀಡಾದರೂ ರೈತರಿಗೆ ಕನಿಷ್ಠ ಗ್ಯಾರಂಟಿ ಆದಾಯ ಸಿಗುವಂತಹ ಸುರಕ್ಷತಾ ಕವಚವನ್ನು ಸರ್ಕಾರ ನೀತಿಯಲ್ಲಿ ಅಳವಡಿಸಬೇಕಾಗುತ್ತದೆ.
ಸರ್ಕಾರದ ಈ ಆಲೋಚನೆ ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಯ ಹೊಸ ಮಾದರಿಯಾಗಬಹುದೆಂಬ ವಿಶ್ಲೇಷಣೆ ಇದೆ. ಕೈಗಾರಿಕೀಕರಣ ಮತ್ತು ಮೂಲಸೌಕರ್ಯದ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಹಳೆಯ ಪದ್ಧತಿಗೆ ಇದು ಪರ್ಯಾಯವಾಗಬಲ್ಲದು. ಈ ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದರೆ, ರಾಜ್ಯದ ಆರ್ಥಿಕ ಪ್ರಗತಿ, ಅನ್ನದಾತನ ಕಲ್ಯಾಣ ಎರಡನ್ನೂ ಒಟ್ಟಿಗೆ ಸಾಧಿಸಲು ಸಾಧ್ಯವಿದೆ ಎಂಬ ಅಭಿಪ್ರಾಯವಿದೆ.