ಮಾಗಡಿ ಜ್ಯೋತಿಪಾಳ್ಯ ದತ್ತಾತ್ರೇಯ ಮಂದಿರದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ವಿಶೇಷ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ವಾಯು ಮಾಲಿನ್ಯ ನಿಗಮದ ಮಾಜಿ ಅಧ್ಯಕ್ಷ ಶಾಂತ ತಿಮ್ಮಯ್ಯ, ಮಾಜಿ ಎಂಎಲ್ಸಿ ಆ.ದೇವೇಗೌಡ, ನಟಿ ಅಭಿನಯ ಇತರರು ಇದ್ದರು.
ಮಾಗಡಿ:ಗುರುಪೂರ್ಣಿಮೆಯ ಪವಿತ್ರ ದಿನದಂದು ಮಾಗಡಿ ತಾಲೂಕಿನ ಜ್ಯೋತಿಪಾಳ್ಯದಲ್ಲಿರುವ ಶ್ರೀ ಗುರು ದತ್ತಾತ್ರೇಯ ಮಂದಿರಕ್ಕೆ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಮತ್ತು ಶ್ರೇಷ್ಠ ಸ್ಥಾನವಿದೆ. ಅಜ್ಞಾನವೆಂಬ ಕತ್ತಲೆ ದೂರಮಾಡಿ ಜ್ಞಾನದ ಬೆಳಕಿನತ್ತ ನಮ್ಮನ್ನು ಒಯ್ಯುವ ಗುರುವಿನ ಮಾರ್ಗದರ್ಶನ ಪ್ರತಿಯೊಬ್ಬರ ಜೀವನಕ್ಕೂ ಅತ್ಯಗತ್ಯ ಎಂದರು.
ಜ್ಯೋತಿಪಾಳ್ಯದಲ್ಲಿರುವ ಗುರು ದತ್ತಾತ್ರೇಯ ದೇವಾಲಯ ಸಾಕಷ್ಟು ಅಭಿವೃದ್ಧಿಗೊಳ್ಳುತ್ತಿದ್ದು, ಅದರಂತೆ ಭಕ್ತರು ದೇವಾಲಯಕ್ಕೆ ಬರಲು ಗ್ರಾಮದ ಬಳಿ ಕಿರಿದಾದ ರಸ್ತೆಯಿಂದಾಗಿ ಸಮಸ್ಯೆ ಉಂಟಾಗಿದೆ. ಇದರಿಂದ ಭಕ್ತರ ಅನುಕೂಲಕ್ಕಾಗಿ ಮಾಗಡಿ-ಬೆಂಗಳೂರು ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ರಸ್ತೆ ನಿರ್ಮಿಸಲಾಗುವುದು. ದೇವಾಲಯ ಬಳಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ ಮಾತನಾಡಿ, ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿರುವ ಸಂದರ್ಭದಲ್ಲಿ ಗುರುವಿನ ಬೋಧನೆ ಪ್ರತಿಯೊಬ್ಬರಿಗೂ ದಾರಿದೀಪವಾಗಬೇಕು ಎಂದರು.
ದತ್ತಾತ್ರೇಯ ದೇವಾಲಯದ ಅರ್ಚಕ ಚಂದ್ರಶೇಖರ್ ಭಟ್ ಮಾತನಾಡಿದರು.ಗುರುಪೂರ್ಣಿಮೆ ಅಂಗವಾಗಿ ದೇವಾಲಯದಲ್ಲಿ ದೀಪೋತ್ಸವ ಹಾಗೂ ನಿರಂತರ ದಾಸೋಹ ನಡೆಸಿದರು.ಪುರಸಭಾ ಮಾಜಿ ಅಧ್ಯಕ್ಷ ಎಚ್.ಜೆ.ಪುರುಷೋತ್ತಮ, ಕೆಡಿಪಿ ಸದಸ್ಯೆ ಗೀತಾ ಡೋಲಾ ರಂಗನಾಥ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಗ್ರೋ ಪುರುಷೋತ್ತಮ್, ಮಹಂತೇಶ್, ಡಾ.ನಾಗನಾಥ್, ಡಾಬಾ ರಮೇಶ್ ಇದ್ದರು.