ಗುಳೇದಗುಡ್ಡದಲ್ಲಿ ಶ್ರೀಮತಿ ಆರ್.ಡಿ. ಸೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರ 1981-87ನೇ ಸಾಲಿನ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಡಾ. ನೀಲಕಂಠ ಸ್ವಾಮೀಜಿ, ಎಸ್.ಜಿ. ಮಸಿಬಿನಾಳ, ಎಚ್.ಎಸ್. ನರಕಿ, ಎ.ಆರ್.ಬಾರಾಟಕ್ಕಿ, ವಸಂತಕುಮಾರ ಕುರಿ, ಜಗದೀಶ ಬುಳ್ಳಾ ಇತರರಿದ್ದರು.
- ಅಮರೇಶ್ವರ ಮಠದ ಡಾ. ನೀಲಕಂಠ ಸ್ವಾಮೀಜಿ ಅಭಿಮತ
- ಗುರುವಂದನಾ ಕಾರ್ಯಕ್ರಮ
- ಗೌರವ ಪೂರ್ವಕ ಸನ್ಮಾನ
ಗುಳೇದಗುಡ್ಡ: ಶಿಕ್ಷಣ ಪೂರೈಸಿದ ಬಳಿಕ ವೃತ್ತಿಯನ್ನು ಅರಸಿಕೊಂಡು ಎಲ್ಲೆಲ್ಲೋ ಚದುರಿಹೋದ ಗೆಳೆಯರು ತಮಗೆ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು, ಎಲ್ಲರೂ ಒಟ್ಟಾಗಿ ಗುರುಗಳಿಗೆ ಗುರುವಂದನೆ ಸಲ್ಲಿಸುವುದು ಶ್ಲಾಘನೀಯ ಎಂದು ಅಮರೇಶ್ವರ ಮಠದ ಡಾ. ನೀಲಕಂಠ ಸ್ವಾಮಿಗಳು ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಶ್ರೀಮತಿ ಆರ್.ಡಿ. ಸೋನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 3ರ 1981-87ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ. ಶಿಕ್ಷಕ ತಾನು ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಿ ಅವರನ್ನು ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಗಳನ್ನಾಗಿ ನಿರ್ಮಿಸುತ್ತಾನೆ. ಜಗತ್ತಿನಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಗಳೆಂಬ ಅಸಡ್ಡೆಯಿಂದ ವಿದ್ಯಾರ್ಥಿಗಳಿಲ್ಲದೇ ಇಂದು ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಪಾಲಕರು ಹೆಚ್ಚು ಹಣ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸದೇ ಸರ್ಕಾರಿ ಶಾಲೆಗಳಲ್ಲಿ ಓದಿಸುವ ಮೂಲಕ ಸರ್ಕಾರ ಶಾಲೆಗಳನ್ನು ಉಳಿಸಬೇಕು ಎಂದರು.
ನಿವೃತ್ತ ಶಿಕ್ಷಕಿ ಜಯಶ್ರೀ ರಂಗರೇಜ ಮಾತನಾಡಿ, ನಾನು ಕಲಿಸಿದ ವಿದ್ಯಾರ್ಥಿಗಳು ಇಷ್ಟು ವರ್ಷದ ಬಳಿಕ ನನ್ನನ್ನು ನೆನಪಿಸಿಕೊಂಡು ನನ್ನನ್ನು ಗೌರವಿಸಿದ್ದು ನನ್ನ ಜೀವನ ಸಾರ್ಥಕವಾಯಿತು. ಗುರುವಂದನೆಯ ಮೂಲಕ ಗುರು-ಶಿಷ್ಯರ ಸಂಬಂಧ ಗಟ್ಟಿಯಾಯಿತು. ಅಂದಿನ ವಿದ್ಯಾರ್ಥಿಗಳು ಇಂದು ನೀವು ಪಾಲಕರಾಗಿದ್ದೀರಿ ನಿಮ್ಮ ಮಕ್ಕಳು ಮೊಬೈಲ್‌ಗೆ ಅಂಟಿಕೊಳ್ಳದಂತೆ ಎಚ್ಚರವಹಿಸಿ. ನಿಮ್ಮ ಮಕ್ಕಳಿಗೆ ಆಟಪಾಟ, ಯೋಗ, ಧ್ಯಾನದಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ. ಹಿರಿಯರಿಗೆ ಗೌರವ ಕೊಡುವುದನ್ನು ಮಕ್ಕಳಿಗೆ ಕಲಿಸಿ ಎಂದರು.
ಪತ್ರಕರ್ತ ರಂಗನಾಥ ಕಮತರ, ಶಾಲೆಯ ಮುಖ್ಯಗುರು ಜಿ.ಎಸ್.ಸೂಳಿಕೇರಿ ಮಾತನಾಡಿದರು.
ನಿವೃತ್ತ ಶಿಕ್ಷಕರಾದ ಅನ್ನಪೂರ್ಣ ಯರಗುಂಟಿ, ವಾದೀಂದ್ರ ಕಟ್ಟಿ, ಸಂಗನಬಸವ್ವ ಹುಳಿಪಲ್ಲೇದ, ಜಯಶ್ರೀ ರಂಗರೇಜ, ಚನ್ನಪ್ಪ ದಾಡಮೋಡೆ ಅವರನ್ನು ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು. ಶಿಕ್ಷಕರಾದ ಎಸ್.ಜಿ. ಮಸಿಬಿನಾಳ, ಎಚ್.ಎಸ್. ನರಕಿ, ಎ.ಆರ್. ಬಾರಾಟಕ್ಕಿ, ವಸಂತಕುಮಾರ ಕುರಿ, ಸಿಆರ್‌ಪಿ ಜಗದೀಶ ಬುಳ್ಳಾ, ಹಳೆ ವಿದ್ಯಾರ್ಥಿಗಳಾದ ಶರಣಬಸಪ್ಪ ಜಮಖಂಡಿ, ಗೋಪಾಲ ಹಳ್ಳೂರ, ಶ್ರೀಕಾಂತ ದಂಡಾವತಿ, ರಾಜಶೇಖರ ಕಟಗೇರಿ, ಮಲ್ಲಿಕಾರ್ಜುನ ಕಟಗೇರಿ, ರಾಜಮಹ್ಮದ ಕುದರಿ, ಮೈನೂದ್ದೀನ ಸಿರಂಗಿ, ಲಕ್ಷ್ಮೀಬಾಯಿ ಶಿರೂರ, ಯಶೋಧಾ ಗದಗಿನ, ಪ್ರಭಾವತಿ ಕೊಳ್ಳಿ, ಭಾರತಿ ಬುಳ್ಳಾ, ರಾಜೇಶ್ವರಿ ಹುಲ್ಲೂರ ಸೇರಿ 1981-87ನೇ ಸಾಲಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.