ಯಡ್ರಾಮಿ ವಿರಕ್ತಮಠದಲ್ಲಿ ಶ್ರೀ ಸಿದ್ಧರಾಮ ಸ್ವಾಮೀಜಿ ಪುಣ್ಯಾರಾಧನೆ ನಿಮಿತ್ತ ಜೋಡೆತ್ತು ಕೃಷಿಕರಿಗೆ ಸನ್ಮಾನ ಮಾಡಲಾಯಿತು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಗುರುಬಸವ ಸ್ವಾಮೀಜಿ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಸವರಾಜ ಬಿರಾದಾರ ಇತರರಿದ್ದರು.
- ಬಸವರಾಜ ಬಿರಾದಾರ ಬಣ್ಣನೆ
- ಯಡ್ರಾಮಿಯಲ್ಲಿ ಜೋಡೆತ್ತು ರೈತರಿಗೆ ಸನ್ಮಾನ
ಯಡ್ರಾಮಿ: ನಂದಿ ಕೃಷಿ ಸಂಸತಿ ಅರಿಯದ ವಿದೇಶಿಗರು ಭಾರತದ ಮೇಲೆ ದಾಳಿ ಮಾಡಿದರು. ಆ ಸಮಯದಲ್ಲಿ ರೈತರಿಗೆ ದಾರಿ ತೋರಿ ನಂದಿ ಕೃಷಿ ಸಂಸತಿ ಉಳಿಸಿ ಬೆಳೆಸಿದ ಶ್ರೇಯಸ್ಸು ಗುರು-&ವಿರಕ್ತ ಮಠಗಳಿಗೆ ಸಲ್ಲುತ್ತದೆ ಎಂದು ನಂದಿ ಕೂಗು ಅಭಿಯಾನದ ರೂವಾರಿ ಬಸವರಾಜ ಎನ್.ಬಿರಾದಾರ ಹೇಳಿದರು.
ಶ್ರೀ ಸಿದ್ಧರಾಮ ಸ್ವಾಮೀಜಿ ಐದನೇ ವರ್ಷದ ಪುಣ್ಯಾರಾಧನೆ ನಿಮಿತ್ತ ವಿರಕ್ತಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಗೋಲಗೇರಿ ಗೊಲ್ಲಾಳೇಶ್ವರ ಪುರಾಣ ಪ್ರವಚನ ಹಾಗೂ ಜೋಡೆತ್ತು ಕೃಷಿಕರಿಗೆ ಶ್ರೀರಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಮಣ್ಣಿನ ಸಾವಯವ ಇಂಗಾಲ ಸರಾಸರಿ ಶೇ.0.75 ಇತ್ತು. ಆದರೀಗ ಶೇ.0.33ಕ್ಕೆ ಇಳಿಕೆಯಾಗಿ ಸೃಷ್ಟಿಯ ಸಮತೋಲನ ತಪ್ಪುತ್ತಿದೆ. ಇದಕ್ಕೆ ಮೂಲ ಕಾರಣ ಯಂತ್ರಾಧಾರಿತ ಕೃಷಿ. ನಂದಿ ಕೃಷಿ ಸಂಸತಿ ರ್ನಿಲಕ್ಷಿಸಿದ್ದರಿಂದ ದೈಹಿಕ ಹಾಗೂ ಮಾನಸಿಕ ರೋಗಕ್ಕೆ ತುತ್ತಾಗುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನೆಲೋಗಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸುರಪುರದ ಶ್ರೀ ನಿಷ್ಠಿ ಕಡ್ಲೆಪ್ಪ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಬಲಶೆಟ್ಟಿಹಾಳ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಅಂಕಲಗಿ ಶ್ರೀ ಗುರುಬಸವ ಸ್ವಾಮೀಜಿ, ಯಡ್ರಾಮಿ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಇತರರಿದ್ದರು. 80ಕ್ಕೂ ಹೆಚ್ಚು ಜೋಡೆತ್ತು ಕೃಷಿಕರಿಗೆ ಸನ್ಮಾನ ಮಾಡಲಾಯಿತು.
ನಂದಿ ಕೃಷಿಗೆ ಸಿಗಲಿ ಶೇ.10 ಬಜೆಟ್
ವಿಜಯಪುರದ ಸಿದ್ಧೇಶ್ವರ ಶ್ರೀಗಳ ಪ್ರೇರಣೆಯಿಂದ ಜನರಲ್ಲಿ ನಂದಿ ಕೃಷಿ ಅರಿವು ಮೂಡಿಸಲು ನಂದಿ ಕೂಗು ಅಭಿಯಾನ ಬಿಜ್ಜರಗಿ ಗ್ರಾಮದಿಂದ ಮೂರು ವರ್ಷದ ಹಿಂದೆ ಪ್ರಾರಂಭಿಸಿದ್ದು, ಅಪಾರ ಬೆಂಬಲ ದೊರಕಿದೆ. ಬಸವ ನಾಡಿನ ಪೂಜ್ಯರು ಒಂದುಗೂಡಿ ನಂದಿ ಕೃಷಿ ಸಂಸತಿ ಪುನಶ್ಚೇತನಕ್ಕಾಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರಿನಲ್ಲಿ ರಾಜ್ಯದ ಶೇ.10 ಬಜೆಟ್ ಮೀಸಲಿಡಲು ಹಾಗೂ ಜೋಡೆತ್ತು ಕೃಷಿಕರಿಗೆ ಮಾಸಿಕ 11 ಸಾವಿರ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತರಲು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಬೇಕು ಎಂದು ಬಸವರಾಜ ಬಿರಾದಾರ ಮನವಿ ಮಾಡಿದರು.