The greatest joke is to make fun of ourselves! 
ರಾಜ್ಯ

ನಮ್ಮನ್ನು ನಾವು ಅಣಕಿಸಿಕೊಳ್ಳುವುದೇ ಶ್ರೇಷ್ಠ ಹಾಸ್ಯ!

ತುರುವೇಕೆರೆ: ಹಾಸ್ಯವೆಂದರೆ ಕೇವಲ ಅಗ್ಗದ ಮನೋರಂಜನೆಯ ಸರಕಲ್ಲ. ಮನಸ್ಸು, ಹೃದಯಗಳನ್ನು ಹಗರುಗೊಳಿಸುವುದರ ಜತೆಗೆ ಒಂದು ಅಂತರ್ಗತ ಸಂದೇಶದ ಮೂಲಕ ನಮ್ಮ ಬುದ್ದಿಯನ್ನು ಪ್ರಚೋದನೆಗೊಳಿಸುವುದೇ ರಾಜ ಹಾಸ್ಯದ ಲಕ್ಷಣ ಎಂದು ಅಣಕುವಾಡು ಖ್ಯಾತಿಯ ಎನ್​. ರಾಮನಾಥ್​ ಹೇಳಿದರು.
ಪಟ್ಟಣದ ಲಯನ್ಸ್​ ಭವನದಲ್ಲಿ ಲಯನ್ಸ್​ ಚಾರಿಟಬಲ್​ ಟ್ರಸ್ಟ್​, ಲಯನ್ಸ್​ ಕ್ಲಬ್​, ರೋಟರಿಕ್ಲಬ್​, ಇನ್ನರ್​ ವೀಲ್​ಕ್ಲಬ್​ಆಫ್​ ಸಂಕಲ್ಪ, ಕನ್ನಡ ಸಾಹಿತ್ಯ ಪರಿಷತು, ಚಿದಂಬರೇಶ್ವರ ಗ್ರಂಥಾಲಯ ಹಾಗೂ ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮನ್ನು ನಾವು ಅಣಕಿಸಿಕೊಳ್ಳುವುದೇ ಶ್ರೇಷ್ಠ ಹಾಸ್ಯ! ಈ ಹಿನ್ನಲೆಯಲ್ಲಿ ಅಣಕುವಾಡುಗಳೂ ಸಹ ಹಾಸ್ಯ ಸಾಹಿತ್ಯದ ಅವಿಭಾಜ್ಯ ಅಂಗಗಳೆನಿಸಿವೆ. ಅಣಕಎಂದರೆ ಕೇವಲ ಅಣಕಿಸುವುದೇ ಅಲ್ಲ, ಅನುಕರಿಸುವುದು ಎಂಬ ಅರ್ಥವೂ ಇದೆ. ಜನಪ್ರಿಯ ಹಾಡು, ಭಾವಗೀತೆ, ಜನಪದ ಗೀತೆಗಳ ಅಣಕವಾಡುಗಳ ಮೂಲಕ ಸಮಾಜ, ವ್ಯವಸ್ಥೆ, ವ್ಯಕ್ತಿಗಳ ವಿಡಂಬನೆಯು ಹಾಸ್ಯದ ನೇರ, ಸರಳ ಅಭಿವ್ಯಕ್ತಿ ಎನಿಸಿದ್ದು, ಅದುಜನರನ್ನು ಸುಲಭವಾಗಿ ತಲುಪುತ್ತದೆ ಎಂದರು.
ಕವಿ ಡಾ.ಎ.ಭಾನು ಮಾತನಾಡಿ, ಕೇಳುವರ ಸ್ವಾರಸ್ಯಕರ ಪ್ರಶ್ನೆಗಳನ್ನು ಸವಾಲಾಗಿ ಸ್ವೀಕರಿಸಿ ಪದಗಳೊಂದಿಗೆ ತಮಷೆ ಮಾಡುತ್ತಾ, ಹಾಸ್ಯರಸೋಸ್ಪತ್ತಿ ಮಾಡುತ್ತಾ ನಗೆ ಸರಣಿಯನ್ನೇ ಸೃಷ್ಟಿಸುತ್ತಾ ಹೋಗುವುದು ರಾಮನಾಥ್​ ಅವರ ವೈಶಿಷ್ಟ$ ಎಂದರು.
ಕಾರ್ಯಕ್ರಮದಲ್ಲಿ ಅಣಕು ರಾಮನಾಥ್​ ಹಾಗೂ ಡಾ.ಭಾನು ಅವರನ್ನು ಸನ್ಮಾನಿಸಲಾಯಿತು. ಕು.ವಿಶೃಂಖ ವಿಶಿಷ್ಟ ರೀತಿಯಲ್ಲಿ ಅತಿಥಿಗಳ ಪರಿಚಯ ಮಾಡಿದ್ದು ಸಭಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಡಾ. ನಾಗರಾಜ್​, ಬರಹಗಾರ ತುರುವೇಕೆರೆ ಪ್ರಸಾದ್​, ಸಿ.ಪಿ.ಪ್ರಕಾಶ್​, ಸುನಿಲ್​ ಬಾಬು, ಉಷಾ ಶ್ರೀನಿವಾಸ್​ ಮೊದಲಾದವರು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡರು. ವಾಸವಿ ಸತೀಶ್​, ವಿರೂಪಾಕ್ಷ ಹಲವು ಅಣಕುವಾಡುಗಳನ್ನು ಹಾಡಿ ರಂಜಿಸಿದರು.
ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕ ಟಿ.ರಾಮಚಂದ್ರ, ಲಯನ್ಸ್​ ಕ್ಲಬ್​ ಅಧ್ಯಕ್ಷ ಪರಮೇಶ್​, ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವೆಂಕಟೇಶ್​, ಇನ್ನರ್​ವೀಲ್​ ಕ್ಲಬ್​ ಆಫ್​ ಸಂಕಲ್ಪದ ಅಧ್ಯಕ್ಷೆ ಇಂದಿರಾ ಪ್ರಭಾಕರ್​, ಗಂಗಾಧರದೇವರ, ಧನಪಾಲ್​ ಇದ್ದರು.