ವಿಜಯಪುರದ ಗಾಂಧಿಚೌಕದಲ್ಲಿ ಶ್ರೀನಗರೇಶ್ವರಸ್ವಾಮಿ ಮತ್ತು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ವಿಜಯಪುರ : ಪಟ್ಟಣದ ಗಾಂಧಿಚೌಕದಲ್ಲಿ ಶ್ರೀ ನಗರೇಶ್ವರಸ್ವಾಮಿ ಮತ್ತು ಆದಿನಾರಾಯಣಸ್ವಾಮಿ 11ನೇ ಕಲ್ಲುಗಾಲಿ ಬ್ರಹ್ಮರಥೋತ್ಸವ ಹಾಗೂ ಬಲಮುರಿ ಗಣಪತಿ, ಶ್ರೀ ಭದ್ರಕಾಳೀ ಸಮೇತ ಶ್ರೀ ರುದ್ರದೇವರ ಬ್ರಹ್ಮರಥೋತ್ಸವವು ಸಾವಿರಾರು ಜನರ ಮಧ್ಯೆ ವಿಜೃಂಭಣೆಯಿಂದ ನೆರವೇರಿಸಲಾಯಿತು.
ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯ ನೆರವೇರಿತು. ಭಕ್ತರು ದವನ ಬಾಳೆಹಣ್ಣನ್ನು ರಥಕ್ಕೆ ಎಸೆಯುವ ಮೂಲಕ ಸಂಕಲ್ಪ ಈಡೇರಿಕೆಗೆ ಪ್ರಾರ್ಥಿಸಿದರು. ಗೋವಿಂದ, ಹರಹರ ಮಹದೇವ ಎಂಬ ನಾಮಸ್ಮರಣೆಯೊಂದಿಗೆ ರಥೋತ್ಸವವನ್ನು ಗಂಗಾತಾಯಿ ದೇವಾಲಯದ ವೃತ್ತದವರೆಗೆ ಎಳೆದು ರಾತ್ರಿ ಮತ್ತೆ ಗಾಂಧಿಚೌಕಕ್ಕೆ ತಂದು ನಿಲ್ಲಿಸಲಾಯಿತು.
ಶ್ರೀ ನಗರೇಶ್ವರಸ್ವಾಮಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಎಂ.ಸತೀಶ್ಕುಮಾರ್ ಮಾತನಾಡಿ, ವೈಜ್ಞಾನಿಕತೆ ಎಷ್ಟೇ ಪ್ರಗತಿ ಹೊಂದಿದ್ದರೂ, ಸಾಂಸತಿಕ ಹಾಗೂ ಆಧ್ಯಾತ್ಮಿಕ ವಿಚಾರಗಳು ಪ್ರತಿಯೊಬ್ಬರ ಮನಸ್ಸಿನ ನೆಮ್ಮದಿ ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ರಥೋತ್ಸವ, ಜಾತ್ರೆಗಳು ಎಲ್ಲರಿಗೂ ಸಹಕಾರಿಯಾಗಿವೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಮಾತನಾಡಿ, ಪುರಾತನ ಕಾಲದಿಂದಲೂ ಜಾತ್ರೆ ನಡೆಯುತ್ತಿದ್ದು, ಪ್ರಸ್ತುತ ನಗರ್ತ ಯುವಕ ಸಂಘ, ಮಹಿಳಾ ಸಂಘ, ಮಹಂತಿನ ಮಠ ಹಾಗೂ ಭಕ್ತರ ಸಹಕಾರದೊಂದಿಗೆ ಸಾಂಸತಿಕತೆ ಅಧಿಕವಾಗುತ್ತಿದೆ ಎಂದರು.
ಮಹಂತಿನ ಮಠದ ಅಧ್ಯಕ್ಷ ಪುನೀತ್ ಕುಮಾರ್, ಪುರಸಭೆ ಸದಸ್ಯೆ ಶಿಲ್ಪಾ ಅಜಿತ್, ಶ್ರೀ ನಗರೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದಿನೇಶ್, ನಗರೇಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷ ಮುರಳೀಧರ್, ಗೌರವಾಧ್ಯಕ್ಷ ಎನ್.ರುದ್ರಮೂರ್ತಿ, ಯುವಕ ಸಂಘದ ಅಧ್ಯಕ್ಷ ವಿ.ಬಸವರಾಜು, ಮಹಿಳಾ ಸಂಘದ ಅಧ್ಯೆ ದೀಪಾ ಮುರಳೀಧರ್, ರಥೋತ್ಸವ ಸಮಿತಿ ಬಿ.ಸಿ. ಸಿದ್ದರಾಜು, ದಾಸೋಹ ಸಮಿತಿ ಬಿ.ಅವಿನಾಶ್, ಯುವಕ ಸಂಘದ ಪ್ರವಿಣ್ ಇದ್ದರು.