ಜೇವರ್ಗಿಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಿ ಪರ್ವ ನಿಮತ್ತ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. 
ರಾಜ್ಯ

ಶ್ರೀ ಮಹಾಲಕ್ಷ್ಮೀ ದೇವಿ ಪರ್ವ ವೈಭವ

ಪ್ರಮುಖ ಮುಖ್ಯಾಂಶಗಳು

  • ಜೇವರ್ಗಿ ಹೊರವಲಯದ ಆಯಿತಳದಲ್ಲಿ ಭಕ್ತರ ಸಂದಣಿ
  • ಜಮೀನುಗಳಲ್ಲಿ ಊಟ ಸವಿದ ಜನ
ಜೇವರ್ಗಿ: ಪಟ್ಟಣದ ಹೊರವಲಯದ ಆಯಿತಳದಲ್ಲಿ ಅಸಂಖ್ಯ ಭಕ್ತರ ಮಧ್ಯೆ ಸಂಭ್ರಮದಿಂದ ಶ್ರೀ ಮಹಾಲಕ್ಷ್ಮೀ ದೇವಿ ಪರ್ವ ಶುಕ್ರವಾರ ನಡೆಯಿತು.
ಬೆಳಗ್ಗೆ ಏಳು ಗ್ರಾಮಗಳ ಸೀಮೆಯಲ್ಲಿ ನೆಲೆಸಿರುವ ಶ್ರೀ ಮಹಾಲಕ್ಷೀ ಮಂದಿರ (ಆಯಿತಳ)ದಲ್ಲಿ ವಿಶೇಷ ಪೂಜೆ, ಅಲಂಕಾರ, ಕುಂಕುಮಾರ್ಚನೆ, ಅಭಿಷೇಕ, ನೈವೇದ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಅಪಾರ ಭಕ್ತರು ಸರದಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದರು. ಕೆಲವರು ದೇವಿಗೆ ಸೀರೆ ಅರ್ಪಿಸಿದರು, ಇನ್ನು ಕೆಲವರು ಹರಕೆ ತೀರಿಸಲು ಸಿಡಿಗಾಯಿ ಒಡೆದರು. ಬಳಿಕ ದೇವಿಗೆ ನೈವೇದ್ಯ ಸಮರ್ಪಿಸಿದರು.
ಭಕ್ತರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಿಂದ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಹೀಗಾಗಿ ಜನರು ಸುಮಾರು 1.5 ಕಿಮೀ ದೂರ ನಡೆದುಕೊಂಡು ಹೋಗಿ ದರ್ಶನ ಪಡೆದರು. ಬಳಿಕ ದೇವಸ್ಥಾನ ಸುತ್ತಲಿನ ಜಮೀನುಗಳಲ್ಲು ಕುಳಿತು ಕುಟುಂಬಸ್ಥರೊಂದಿಗೆ ಭೋಜನ ಸವಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್​, ಟ್ರಸ್ಟ್​ ಕಮಿಟಿ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ, ಕಾರ್ಯದರ್ಶಿ ರಮೇಶಬಾಬು ವಕೀಲ್​, ಮಲ್ಲಶೆಟ್ಟೆಪ್ಪಗೌಡ ಹಿರೆಗೌಡ ಸೇರಿ ಹಲವರು ಪರ್ವದಲ್ಲಿ ಭಾಗಿಯಾಗಿದ್ದರು.