ಮದ್ದೂರು ನಗರದ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಉಗ್ರ ನರಸಿಂಹಸ್ವಾಮಿಯವರ ಭವ್ಯ ಬ್ರಹ್ಮೋತ್ಸವವು ಸಡಗರ ಸಂಭ್ರಮದಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. 
ರಾಜ್ಯ

ಶ್ರೀ ಉಗ್ರನರಸಿಂಹಸ್ವಾಮಿಯ ಬ್ರಹ್ಮೋತ್ಸವ ಅದ್ದೂರಿ

ಮದ್ದೂರು: ನಗರದ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಉಗ್ರನರಸಿಂಹಸ್ವಾಮಿಯ ಬ್ರಹ್ಮೋತ್ಸವವು ಗುರುವಾರ ಸಡಗರ ಸಂಭ್ರಮದಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಪರಭವ ನಾಮ ಸಂವತ್ಸರದ ವೈಶಾಖ ಮಾಸ ಬಹುಳ ಪಂಚಮಿ ಪೂರ್ವಾಷಾಢ ನಕ್ಷತ್ರದಲ್ಲಿ ನಡೆದ ರಥೋತ್ಸವಕ್ಕೆ ಸಾಕ್ಷಿಯಾಗಲು ನಾಡಿನ ವಿವಿಧೆಡೆಯಿಂದ ಹಾಗೂ ನೆರೆರಾಜ್ಯಗಳಿಂದ ಸಾವಿರಾರು ಭಕ್ತ ಸಾಗರವೇ ಹರಿದು ಬಂದಿತ್ತು.
ಸಹಸ್ರಾರು ಭಕ್ತರ ಗೋವಿಂದ... ಗೋವಿಂದ... ಎಂಬ ನಾಮಸ್ಮರಣೆಯ ನಡುವೆ ರಥವು ಕೋಟೆ ಬೀದಿಯ ಪ್ರಮುಖ ಬೀದಿಗಳಲ್ಲಿ ಎಳೆದು ಭಕ್ತರು ರಥಕ್ಕೆ ಹಣ್ಣು, ದವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ರಥೋತ್ಸವದಲ್ಲಿ ಅಂಗವಾಗಿ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರಗಳನ್ನು ನೆರವೇರಿಸಲಾಯಿತು. ನಂತರ ಸಕಲ ಮಂಗಳ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಅಲಂಕೃತ ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ರಥೋತ್ಸವದ ಅಂಗವಾಗಿ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಾಗೂ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಶಾಸಕ ಕೆ.ಎಂ.ಉದಯ್ ಹಾಗೂ ಪತ್ನಿ ವಿನುತಾ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಪ್ರಧಾನ ಅರ್ಚಕ ನಾರಾಯಣ್, ಪಾರುಪತ್ತೇಗಾರ್ ಕೆ.ಆರ್.ಮಂಜುನಾಥ್ ಸೇರಿದಂತೆ ಇತರರಿದ್ದರು.