The Grama Sabha is the foundation for rural development. 
ರಾಜ್ಯ

ಗ್ರಾಮಾಭಿವೃದ್ಧಿಗೆ ಗ್ರಾಮಸಭೆಯೇ ಅಡಿಪಾಯ

ಬೂದಿಕೋಟೆ: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಗ್ರಾಮಸಭೆಯೇ ಪ್ರಮುಖ ವೇದಿಕೆಯಾಗಿದ್ದು, ಗ್ರಾಮಸ್ಥರು ತಮ್ಮ ಗ್ರಾಮದ ಅಗತ್ಯ ಕಾಮಗಾರಿಗಳು ಹಾಗೂ ವೈಯಕ್ತಿಕ ಸೌಲಭ್ಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ನೋಡಲ್​ ಅಧಿಕಾರಿ ಹಾಗೂ ತೋಟಗಾರಿಕಾ ಸಹಾಯಕ ನಿರ್ದೇಶಕಿ ಶಿವಕುಮಾರಿ ತಿಳಿಸಿದರು.
ಗುಲ್ಲಹಳ್ಳಿ ಗ್ರಾಪಂನಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕಪರಿಶೋಧನ ಹಾಗೂ ನರೇಗಾ ಗ್ರಾಮ ಸಭೆಯಲ್ಲಿ ಮಾತನಾಡಿ, ಗ್ರಾಮಸಭೆಗೂ ಮುನ್ನ ವಾರ್ಡ್​ ಸಭೆಗಳನ್ನು ನಡೆಸಿ ಗ್ರಾಮಗಳಲ್ಲಿ ಅಗತ್ಯವಿರುವ ರಸ್ತೆ, ಚರಂಡಿ, ಶಾಲಾ ಕಟ್ಟಡ ದುರಸ್ತಿ, ಶೌಚಗೃಹ ನಿರ್ಮಾಣ, ಅಂಗನವಾಡಿ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ವಿವಿಧ ಸಮುದಾಯ ಕಾಮಗಾರಿಗಳ ಬೇಡಿಕೆ ಸಂಗ್ರಹಿಸಲಾಗುತ್ತದೆ. ಅಲ್ಲದೆ ಮನೆ, ನಿವೇಶನ, ಜಾನುವಾರು ಕೊಟ್ಟಿಗೆ ಸೇರಿ ವೈಯಕ್ತಿಕ ಸೌಲಭ್ಯಕ್ಕೂ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ಹಲವು ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ರೈತರು ಕೃಷಿ ಹೊಂಡ, ಮಳೆನೀರು ಸಂರಣೆಗಾಗಿ ಟ್ರೆಂಚ್​ ಕಮ್​ ಬಂಡ್​, ತೋಟಗಾರಿಕಾ ಬೆಳೆಗಳ ಹೊಸ ನಾಟಿ ಸೇರಿ ವಿವಿಧ ಯೋಜನೆಗಳಿಗೆ ಸಹಾಯಧನ ಪಡೆಯಬಹುದಾಗಿದೆ. ಸಂಬಂಧಿತ ಇಲಾಖೆಗಳ ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ವಾರ್ಡ್​ ಸಭೆಗಳಲ್ಲಿ ಸಂಗ್ರಹಿಸಿರುವ ಎಲ್ಲ ಬೇಡಿಕೆಗಳನ್ನು ಗ್ರಾಮಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಮುಂದಿನ ಸಾಲಿನ ಅಭಿವೃದ್ಧಿ ಯೋಜನೆಗಳಲ್ಲಿ ಸೇರಿಸಲಾಗುತ್ತದೆ ಎಂದರು.
ಪಿಡಿಒ ಚಂದ್ರಕಲಾ ಮಾತನಾಡಿ, ನರೇಗಾ ಯೋಜನೆಯು ಇದೀಗ ವಿಬಿಜಿ ರಾಮ್​ ಜಿ ಯಾಗಿ ಬದಲಾವಣೆಗೊಂಡಿದ್ದು, 100 ದಿನ ಮಾತ್ರ ಕೆಲಸ ಸಿಗುತ್ತಿತ್ತು ಆದರೆ ವಿವಿಜಿ ರಾಮ್​ ಜಿಯಲ್ಲಿ 125 ದಿನ ಕೆಲಸ ಸಿಗುತ್ತದೆ ಇದು ರೈತರಿಗೆ ಅನುಕೂಲವಾಗಲಿದೆ.ಬಹುತೇಕವಾಗಿ ಎಲ್ಲ ನರೇಗಾದಂತೆ ಇದ್ದು ಕೆಲವು ಅಂಶ ಮಾತ್ರ ಬದಲಾಯಿಸಿದ್ದಾರೆ ಎಂದರು.
ಗ್ರಾಪಂ ಮಾಜಿ ಸದಸ್ಯ ಮಂಜುನಾಥ್​, ಗಣೇಶ್​ ರಾವ್​, ಸಿಬ್ಬಂದಿ ವಿಶ್ವನಾಥ್​ ಇದ್ದರು.