The government should release the funds for ragi.
ಮಾಸ್ತಿ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ರಾಗಿಯ ಬಾಕಿ ಹಣ ತಕ್ಷಣ ಬಿಡುಗಡೆ ಮಾಡಬೇಕು. ಜತೆಗೆ ಜಿಲ್ಲೆಯಲ್ಲಿನ ಮುಂಗಾರು ಬರ ಪರಿಸ್ಥಿತಿ ಅಧ್ಯಯನ ಮಾಡಲು ವಿಶೇಷ ತಂಡ ರಚಿಸಿ ಪರಿಶೀಲನೆ ನಡೆಸಬೇಕು ಎಂದು ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಮಾಸ್ತಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಂತೆ, ರೈತರು 3 ತಿಂಗಳು ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ರಾಗಿ, ಮಧ್ಯವರ್ತಿಗಳ ಶೋಷಣೆಯಿಂದ ರಕ್ಷಿಸಲು ಸರ್ಕಾರವೇ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದೆ. ಆದರೆ ಜಿಲ್ಲೆಯ ವಿವಿಧ ಖರೀದಿ ಕೇಂದ್ರಗಳಲ್ಲಿ ಸಾವಿರಾರು ಟನ್ ರಾಗಿಯನ್ನು ಸರ್ಕಾರಕ್ಕೆ ನೀಡಿರುವ ರೈತರಿಗೆ 5 ತಿಂಗಳು ಕಳೆದರೂ ಹಣ ಪಾವತಿಯಾಗಿಲ್ಲ. ಬರದಿಂದ ಸಂಕಷ್ಟದಲ್ಲಿರುವ ಅನ್ನದಾತರ ಜೀವನದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಬರ ಪರಿಸ್ಥಿತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮಕ್ಕಳ ಶಿಕ್ಷಣ, ಆರೋಗ್ಯ ಸೇರಿ ಕುಟುಂಬದ ಅಗತ್ಯತೆ ಪೂರೈಸಲು ಸಾಧ್ಯವಾಗದ ಸ್ಥಿತಿ ನಿಮಾರ್ಣವಾಗಿದೆ. ಸರ್ಕಾರ ಕೂಡಲೇ ರಾಗಿಯ ಬಾಕಿ ಹಣ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಮಾತನಾಡಿ, ರಾಜ್ಯದಲ್ಲಿ ಸಮರ್ಪಕ ಮುಂಗಾರು ಮಳೆಯ ಕೊರತೆಯಿಂದ ರೈತರು ರಾಗಿ ಬಿತ್ತನೆಗಾಗಿ ಭೂಮಿ ಹದಗೊಳಿಸಿ ಮಳೆಯ ನಿರೀಕ್ಷೆಯಲ್ಲಿ ಕಾಯುವಂತಾಗಿದೆ. ಕೆರೆ-&ಕಟ್ಟೆಗಳು ಬರಿದಾಗಿದ್ದು, ಕೊಳವೆಬಾವಿಗಳು ಕೈ ಕೊಟ್ಟಿದ್ದರಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆದ ಬೆಳೆಗಳು ನೀರಿನ ಕೊರತೆಯಿಂದ ಒಣಗಿ ನಾಶವಾಗುತ್ತಿವೆ. ಸರ್ಕಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪ್ರತಿ ಎಕರೆಗೆ <5 ಲಕ್ಷ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದರು.