H D Kumaraswami | ಕೇಂದ್ರ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ
ಚಾಮರಾಜನಗರ: ಕಾಂಗ್ರೇಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅಧಿಕಾರಕ್ಕೆ ಬಂದ ದಿನದಿಂದಲೂ ಲೂಟಿ ಹೊಡೆಯುವುದರಲ್ಲಿ ಹಾಗೂ ಅಧಿಕಾರ ಹಂಚಿಕೆಯಲ್ಲಿಯೆ ಕಾಲಾಹರಣ ಮಾಡುತ್ತಿದೆ, ಇದರಿಂದಾಗಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ( H D Kumaraswami) ವಾಗ್ದಾಳಿ ನಡೆಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಡಬೂರು ಗ್ರಾಮದಲ್ಲಿನ ದೇವಾಲಯ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್ಡಿಕೆ, ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಹಣ ನೀಡದಷ್ಟು ದುಸ್ಥಿತಿಗೆ ತಲುಪಿದೆ, ಇದರಿಂದಾಗಿ ಅನೇಕರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಯುವಕರಿಗೆ ಉದ್ಯೋಗ ಸಿಗದೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿ ಸಿಗುತ್ತಿಲ್ಲ, ಅಭಿವೃದ್ದಿ ಎನ್ನುವುದು ಮರೀಚಿಕೆಯಾಗಿದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ, ಪ್ರತಿಭಟಿಸಿ ಪ್ರಚಾರ ತೆಗೆದುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಮೊದಲ ದಿನದಿಂದ ಕಮಿಷನ್ ಪ್ರಮಾಣ ಹೆಚ್ಚಿಸಿಕೊಳ್ಳುವುದರಲ್ಲಿಯೇ ಕಾಲಾಹರಣ ಮಾಡಿದ್ದಾರೆ ಎಂದು ಆರೋಪಿಸಿದರು.
ಚುನಾವಣೆ ಸಮಯದಲ್ಲಿ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ನಾಡಿನ ಅಭಿವೃದ್ಧಿಗೆ ಪೂರಕವಾದ ಯಾವ ಕಾರ್ಯಕ್ರಮಗಳನ್ನು ತಂದಿಲ್ಲ, ಆಡಳಿತ ಬಿಗಿಯಿದ್ರೆ ಗ್ಯಾರಂಟಿ ಕೊಟ್ಟು ಅಭಿವೃದ್ಧಿ ಕೆಲಸ ಮಾಡಬಹುದಿತ್ತು, ಆದರೆ ಈ ಸರ್ಕಾರ ಖಜಾನೆ ತುಂಬಿಸಲು ಮನಬಂದಂತೆ ತೆರಿಗೆ ಹೆಚ್ಚಿಸಿದ್ದಾರೆ ಎಂದು ಹೇಳಿದರು. ಗ್ಯಾರಂಟಿ ಫಲಾನುಭವಿಗಳ ಮೇಲೆ ತೆರಿಗೆ ಹಾಕಿ, ಸರ್ಕಾರ ದೊಡ್ಡ ಮಟ್ಟದ ಹಣ ಸಂಗ್ರಹ ಮಾಡಿದೆ. ಆದರೆ ಜನರಿಂದ ಸಂಗ್ರಹಿಸಿದ ತೆರಿಗೆ ಹಣ ಜನಪರ ಯೋಜನೆಗಳಿಗೆ ಬಳಕೆಯಾಗುತ್ತಿಲ್ಲ, ಅದರ ಪರಿಣಾಮವೇ ಇಂದಿನ ಈ ಸ್ಥಿತಿಗೆ ಜೀವಂತ ಸಾಕ್ಷಿ ಎಂದರು.
ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಉದ್ಯೋಗ ಖಾಲಿಯಿದೆ, ಒಂದೆಡೆ ವಿಧ್ಯಾರ್ಥಿಗಳು ಬೀದಿಗಳಿದು ಉದ್ಯೋಗಕ್ಕಾಗಿ ಅಂಗಲಾಚಿ ಪ್ರತಿಭಟನೆ ಮಾಡುತ್ತಿದ್ದಾರೆ, ಅನೇಕ ಇಲಾಖೆಗಳಲ್ಲಿ ಸುಮಾರು ಎರಡೂವರೆ ಲಕ್ಷ ಹುದ್ದೆ ಖಾಲಿಯಿದೆ. ಈ ಹುದ್ದೆಗಳ ಭರ್ತಿ ಮಾಡದೆ ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.