ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್  
ರಾಜ್ಯ

ಸರ್ಕಾರದ ಬಳಿ ಪಿಂಚಣಿ ನೀಡುವುದಕ್ಕೂ ದುಡ್ಡಿಲ್ಲ

ಬೆಂಗಳೂರು: ವೃದ್ಧರು, ಲಿಂಗತ್ವ ಅಲ್ಪಸಂಖ್ಯಾತರು, ವಿಧವೆಯರು, ಅನಾಥರಿಗೆ ಪಿಂಚಣಿ ಮತ್ತು ಸಹಾಯಧನ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ. ಈ ಪರಿಸ್ಥಿತಿಯಲ್ಲಿ ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.\
ವಿಧಾನಸೌಧದ ಕಚೇರಿಯಲ್ಲಿ ಮಾತನಾಡಿ, ಕಳೆದ ಮೂರು ತಿಂಗಳಿಂದ ಕಂದಾಯ ಇಲಾಖೆಯ 12 ಬಗೆಯ ಪಿಂಚಣಿ ಹಣ ಬಿಡುಗಡೆಯಾಗಿಲ್ಲ. ಮೇ 19ಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್, ಮಾಡಿದ ಪಾಪಗಳಿಗಾಗಿ ಸಮಾವೇಶ ನಡೆಸಿ ಸಂಭ್ರಮಾಚರಣೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಪಿಂಚಣಿ ಯೋಜನೆಗಳಡಿ 81.88 ಲಕ್ಷ ಫಲಾನುಭವಿಗಳಿದ್ದು, ತಿಂಗಳಿಗೆ 894 ಕೋಟಿ ರೂ. ನೀಡಬೇಕಿದೆ. ಪ್ರತಿ ವರ್ಷ ಬಜೆಟ್‌ನಲ್ಲಿ 10,736 ಕೋಟಿ ರೂ. ಮೀಸಲಿಟ್ಟರೂ ಫಲಾನುಭವಿಗಳಿಗೆ ತಲುಪಿಲ್ಲ. ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ, ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುವ ಸಹಾಯಧನ ಮೊದಲಾದವು ಬಾಕಿ ಇವೆ. ಅನಾಥ ಮಕ್ಕಳ 73 ಕೋಟಿ ರೂ. ಅನುದಾನವೂ ಬಿಡುಗಡೆಯಾಗಿಲ್ಲ. ಪರಿಶಿಷ್ಟ ಜಾತಿಗಳ 45 ಸಾವಿರ ಕೋಟಿ ರೂ. ಲೂಟಿಯಾಗಿದೆ. ಸಮೀಕ್ಷೆಯ ಹೆಸರಲ್ಲಿ ರೈತರಿಗೆ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು.
ಕಂದಾಯ ಸಚಿವನಾಗಿದ್ದಾಗ, ಆ್ಯಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳ ನೆರವಿಗೆ ತಿಂಗಳಿಗೆ 10 ಸಾವಿರ ರೂ. ನೀಡಲು ಕ್ರಮ ವಹಿಸಿದ್ದೆ. ದೇವದಾಸಿಯರಿಗೆ 2 ಸಾವಿರ ರೂ., ಸ್ವಾತಂತ್ರ್ಯ ಹೋರಾಟಗಾರರಿಗೆ 10 ಸಾವಿರ ರೂ. ನಿಗದಿ ಮಾಡಿದ್ದೆ. ಈ ಸರ್ಕಾರ ನಿಯಮಿತವಾಗಿ ನೀಡುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. ಗೌರವಧನ ನೀಡುವುದಾಗಿ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಮಾತಿಗೆ ತಪ್ಪಿದ್ದಾರೆ. ನುಡಿದಂತೆ ನಡೆಯುತ್ತೇನೆ ಎಂದು ಹೇಳಿ ಕೊಟ್ಟ ಭರವಸೆ ಮರೆತಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸದೆ ಪದೇಪದೆ ಮುಷ್ಕರ ಮಾಡುವ ಸನ್ನಿವೇಶ ನಿರ್ಮಿಸಿದ್ದಾರೆ ಎಂದು ದೂರಿದರು.