ಕಲಬುರಗಿ ಸಿಯುಕೆನಲ್ಲಿ ಕೇಂದ್ರ ಬಜೆಟ್​ ಕುರಿತು ಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಆರ್​.ಆರ್​.ಬಿರಾದಾರ್​, ಡಾ.ಪಾಂಡುರಂಗ ಪತ್ತಿ ಇತರರಿದ್ದರು. 
ರಾಜ್ಯ

ವಿಕಸಿತ ಭಾರತ ಸಾಧಿಸುವ ಗುರಿ

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅನಿಸಿಕೆ
  • ಸಿಯುಕೆನಲ್ಲಿ ಕೇಂದ್ರ ಬಜೆಟ್​ ವಿಚಾರ ಸಂಕಿರಣ
ಕಲಬುರಗಿ: ಕೇಂದ್ರ ಬಜೆಟ್​ ಭವಿಷ್ಯಕ್ಕೆ ಪೂರಕವಾಗಿದ್ದು, ವಿಕಸಿತ ಭಾರತದ ಗುರಿ ಹೊಂದಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿವಿಯಲ್ಲಿ ವ್ಯವಹಾರ ಅಧ್ಯಯನ ನಿಕಾಯ ಸೋಮವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವ್ಯವಹಾರ ಅಧ್ಯಯನ ವಿದ್ಯಾರ್ಥಿಗಳಿಗೆ ಬಜೆಟ್​ ಚರ್ಚೆ ತುಂಬ ಪ್ರಮುಖ ವಿಷಯ. ಬಜೆಟ್​, ಭಾರತೀಯ ಆರ್ಥಿಕತೆ ಮತ್ತು ವ್ಯವಹಾರದ ಮೇಲೆ ಅದರ ಪ್ರಭಾವ ವಿಶ್ಲೇಷಿಸಬೇಕು. ಈಗ ಭಾರತ ವಿಶ್ವದಲ್ಲಿ ಅತ್ಯಂತ ಬಲಿಷ್ಠ ಆರ್ಥಿಕತೆಯಾಗಿದೆ. ಈ ಸಂದರ್ಭದಲ್ಲಿ ನೀವಿರುವುದರಿಂದ ತುಂಬ ಅದೃಷ್ಟಶಾಲಿಗಳು. ನಮ್ಮ ಪೀಳಿಗೆಗಿಂತ ನಿಮಗೆ ಹೆಚ್ಚಿನ ಅವಕಾಶಗಳಿವೆ. ದೇಶದ ಪ್ರತಿಯೊಬ್ಬ ನಾಗರಿಕ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಕೆಲಸ ಮಾಡುವ ಜವಾಬ್ದಾರಿ ಹೊಂದಿದ್ದಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಆರ್​.ಆರ್​. ಬಿರಾದಾರ್​ ಮಾತನಾಡಿ, 2026ರ ಕೇಂದ್ರ ಬಜೆಟ್​ ಮೂರು ಕರ್ತವ್ಯಗಳ ಮೇಲೆ ಕೇಂದ್ರೀಕರಿಸಿದೆ. ಇದು ಯುವಜನರು, ಮಹಿಳೆಯರು, ಅಂಚಿನಲ್ಲಿರುವ ಗುಂಪು ಮತ್ತು ರೈತರ ಆರ್ಥಿಕ ಬೆಳವಣಿಗೆ ವೇಗಗೊಳಿಸಲು ನೆರವಾಗಲಿದೆ ಎಂದು ತಿಳಿಸಿದರು.
ಬಜೆಟ್​ ಹೆಚ್ಚಿನ ಮೌಲ್ಯದ ನಗದು ಬೆಳೆ ಬೆಳೆಸಲು ಕೃಷಿ ವೈವಿಧ್ಯೀಕರಣ, ತಂತ್ರಜ್ಞಾನ ಬಳಕೆ ಮತ್ತು ರೈತರ ಆದಾಯ ಹೆಚ್ಚಿಸಲು ಪಶುಸಂಗೋಪನೆ ಮತ್ತು ಮೀನುಗಾರಿಕೆ ಅಭಿವೃದ್ಧಿ ಮೇಲೆ ಕೇಂದ್ರೀಕರಿಸಿದೆ. ಏಳು ಹೈಸ್ಪೀಡ್​ ರೈಲ್ವೆ ಕಾರಿಡಾರ್​, ಶಿಕ್ಷಣ ಮತ್ತು ಕೌಶಲ, ಆರೋಗ್ಯ ಮತ್ತು ವೈದ್ಯಕಿಯ ಪ್ರವಾಸೋದ್ಯಮ ಮೂಲಕ ಮೂಲಸೌಕರ್ಯ ಅಭಿವೃದ್ಧಿ ಮೂಲಕ ವಿಕಸಿತ ಭಾರತ ಗುರಿ ಸಾಧಿಸಲು ಬಲವಾದ ಅಡಿಪಾಯ ಹಾಕಿದೆ ಎಂದರು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮಾತನಾಡಿ, ಬಜೆಟ್​ ದೇಶ ಮತ್ತು ಅದರ ಭವಿಷ್ಯಕ್ಕೆ ಒಳ್ಳೆಯದಾಗಿದ್ದರೂ ಈ ಪ್ರದೇಶ ಕಡೆಗಣಿಸಲಾಗಿದೆ. ಕಲ್ಯಾಣ ಕರ್ನಾಟಕಕ್ಕಾಗಿ ನಾವು ವಿಶೇಷ ಪ್ಯಾಕೇಜ್​ ಮತ್ತು ಯೋಜನೆಳನ್ನು ನಿರೀಕ್ಷಿಸಿದ್ದೆವು ಎಂದು ಹೇಳಿದರು.
ಡೀನ್​ ಸ್ಕೂಲ್​ ಆಫ್​ ಬಿಜಿನೆಸ್​ ಸ್ಟಡಿಸ್​ ಪ್ರೊ.ಪಾಂಡುರಂಗ ಪತ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ದೇವರಾಜಪ್ಪ ಆದಾಯ ಮತ್ತು ಸಾರ್ವಜನಿಕ ವೆಚ್ಚ, ಡಾ.ಸುಷ್ಮಾ ಕೃಷಿಯ ಮೇಲಿನ ಪರಿಣಾಮ, ಡಾ.ಸಫಿಯಾ ಪರ್ವೀನ್​ ಆರೋಗ್ಯ ಮತ್ತು ಶಿಕ್ಷಣದ ಉತ್ತೇಜನ, ಡಾ.ಗಣಪತಿ ಸಿನ್ನೂರ್​ ಉತ್ಪಾದನಾ ವಲಯಕ್ಕೆ ಪ್ರೋತ್ಸಾಹ, ಡಾ.ಶೈಲಜಾ ಕೊನೆಕ್​ ಸೇವಾ ವಲಯಕ್ಕೆ ಪ್ರೋತ್ಸಾಹದ ಬಗ್ಗೆ ಮಾತನಾಡಿದರು, ಡಾ.ಮಹೇಂದ್ರ ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯದ ಬೆಳವಣಿಗೆಯ ಅವಕಾಶಗಳ ಬಗ್ಗೆ ಚರ್ಚಿಸಿದರು ಮತ್ತು ಡಾ.ಪಾಂಡುರಂಗ ಪತ್ತಿ ಭಾರತೀಯ ತೆರಿಗೆಯಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿದರು.
ಪ್ರೊ.ಶಿವಕುಮಾರ ದೀನೆ, ಡಾ.ಶಿವಕುಮಾರ ಬೆಳ್ಳಿ, ಡಾ.ನಿರಂಜನ ಪೂಜಾರ್​, ಡಾ.ಸುಜಾತ, ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಇತರರಿದ್ದರು. ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಂ. ಜೋಹೈರ್​ ಸ್ವಾಗತಿಸಿದರು. ಸಚಿನ್​ಸಿಂಗ್​ ಶೇಖಾವತ್​ ನಿರೂಪಣೆ ಮಾಡಿದರು. ಡಾ.ಸುಮಾ ಸ್ಕಾರಿಯಾ ವಂದಿಸಿದರು.
"

ಕೇಂದ್ರ ಬಜೆಟ್​ ಬಂಡವಾಳ ವೆಚ್ಚ 11.2 ಲಕ್ಷ ಕೋಟಿಯಿಂದ 12.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿ ಹಣಕಾಸಿನ ಕೊರತೆ ಶೇ.4.30ಕ್ಕೆ ಗುರಿಪಡಿಸಿ ಸಾರ್ವಜನಿಕ ಸಾಲ ಜಿಡಿಪಿಯ ಶೇಕಡವಾರು ಪ್ರಮಾಣದಲ್ಲಿ ಕಡಿಮೆ ಮಾಡುವ ಮೂಲಕ ಹಣಕಾಸು ಸಚಿವರು ಹಣಕಾಸಿನ ಶಿಸ್ತು ಕಾಯ್ದುಕೊಂಡಿದ್ದಾರೆ.

> ಪ್ರೊ.ಆರ್​.ಆರ್​.ಬಿರಾದಾರ್​

ಕುಲಸಚಿವ, ಸಿಯುಕೆ