ನಾಲವಾರದ ಶ್ರೀ ಕೋರಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಅಸಂಖ್ಯಾತ ಭಕ್ತರು ತಲೆಯ ಮೇಲೆ ತನಾರತಿ ಹೊತ್ತು ಹೆಜ್ಜೆ ಹಾಕಿ ಹರಕೆ ತೀರಿಸಿದರು.
- ಡಾ.ಸಿದ್ಧತೋಟೇಂದ್ರ ಶ್ರೀಗಳ ನೇತೃತ್ವದಲ್ಲಿ ದೀಪ ಹೊತ್ತು ಹೆಜ್ಜೆ ಹಾಕಿದ ಭಕ್ತರು
ಶಹಾಬಾದ್: ನಾಲವಾರದ ಶ್ರೀ ಕೋರಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಶನಿವಾರ ನಸುಕಿನ ಜಾವ ಅಪಾರ ಭಕ್ತರು ಹರಕೆಯ ತನಾರತಿ ಹೊತ್ತು ಕೋರಿಸಿದ್ದೇಶ್ವರರ ಕರ್ತೃ ಗದ್ದುಗೆಗೆ ಪ್ರದಣೆ ಹಾಕುವ ಮೂಲಕ ಹರಕೆ ತೀರಿಸಿದರು.
ಅಕ್ಷಯ ತೃತೀಯಾ ಅಮವಾಸ್ಯೆ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಶ್ರೀ ಕೋರಿಸಿದ್ಧೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮಹಾಮಂಗಳಾರತಿ ನಡೆಯಿತು. ಸಂಜೆ ಮಹಾಮಂಗಳಾರತಿ ಜರುಗಿತು. ಮಧ್ಯರಾತ್ರಿ ರಾಜ್ಯ, ಹೊರರಾಜ್ಯದಿಂದ ಬಂದ ಸಾವಿರಾರು ಜನ ಭಕ್ತರು ಮಡಿಯುಟ್ಟು, ತಮ್ಮ ಇಷ್ಟಾರ್ಥ ಸಿದ್ಧಿಸಿದ್ದಕ್ಕೆ ಕೃತತಾ ರುಪದಲ್ಲಿ ಗೋದಿ ಹಿಟ್ಟಿನ ದೀಪಗಳನ್ನು ಸಿದ್ಧಪಡಿಸಿಕೊಂಡು, ದೀಪ ಬೆಳಗಿಸಿ ತಲೆಯ ಮೇಲೆ ಹೊತ್ತು ಹೆಜ್ಜೆ ಹಾಕಿ ಹರಕೆ ತೀರಿಸಿದರು.
ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀಮಠ ಪರಂಪರೆಯಂತೆ ವಿಶೇಷ ಉಡುಪು ಧರಿಸಿ, ವಿವಿಧ ವಾಧ್ಯವೃಂದ, ಪುರವಂತರ ಸೇವೆ, ಛತ್ರ, ಚಾಮರ, ದೀವಿಟಿಗೆ, ಪೂರ್ಣಕುಂಭ, ಗದ್ವಾಲದ ನಾದಸ್ವರದೊಂದಿಗೆ ತನಾರತಿ ಉತ್ಸವದಲ್ಲಿ ಪಾಲ್ಗೊಂಡರು. ಪೂಜ್ಯರು ಗದ್ದುಗೆಗೆ ಪ್ರದಣೆ ಹಾಕುತ್ತಿದ್ದಂತೆ ಅಸಂಖ್ಯ ಭಕ್ತರು ಪೂಜ್ಯರ ಹಿಂದೆ ಸಾಗಿದರು. ಬಳಿಕ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆಯುವ ಮೂಲಕ ಉತ್ಸವಕ್ಕೆ ತೆರೆ ಬಿದ್ದಿತು.