ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ಆಯೋಜಿಸಿದ್ದ ಮತ್ಸ್ಯ ಮೇಳದಲ್ಲಿ ಕಲ್ಲೂರು ಸರ್ಕಾರಿ ಶಾಲೆ ಮಕ್ಕಳು ಮೀನು ನೋಡಿ ಮಾಹಿತಿ ಪಡೆಯುತ್ತಿರುವುದು. ರೈತರ ಆದಾಯದ ಗಣಿ ರೂಪ್‌ಚಂದ್ ಮೀನು. ಫೈಯರ್‌ಮೌತ್ ಮೀನು. ರೆಡ್‌ಫ್ಯಾರಲ್ ಫಿಶ್. ಮತ್ಸ್ಯ ಮೇಳದಲ್ಲಿ ಗಮನ ಸೆಳೆದ ನಕ್ಷತ್ರ ಆಕಾರದ ಮೀನುಗಳು.
- ಮೀನುಗಳ ಹಿಂಡು ನೋಡಲು ಬಂದ ವಿದ್ಯಾರ್ಥಿಗಳ ದಂಡು
- ಫೋಟೋ, ಸೆಲ್ಫೀ ತೆಗೆದುಕೊಂಡು ಖುಷಿಪಟ್ಟ ಜನರು
ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ನಗರದ ಕೃಷಿ ವಿಜ್ಞಾನಗಳ ವಿವಿ ಆವರಣದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿರುವ ಮತ್ಸ್ಯಮೇಳ ಕಣ್ಮನ ಸೆಳೆಯಿತು.
ಮತ್ಸ್ಯಮೇಳ ಪ್ರದರ್ಶನವಾಗಿರದೆ ಮೀನು ತಳಿಗಳ ಸಮಗ್ರ ಮಾಹಿತಿ ನೀಡುವ ಕಣಜವಾಗಿದೆ. ರಾಜ್ಯದ ಬೇರೆ ಜಿಲ್ಲೆಗಳು ಮಾತ್ರವಲ್ಲ ದೇಶದ ಬೇರೆಬೇರೆ ರಾಜ್ಯಗಳ ವಿವಿಧ ತಳಿಯ ಮೀನುಗಳು ಮೇಳಕ್ಕೆ ಆಗಮಿಸಿವೆ. ವ್ಯಾಪಾರ ದೃಷ್ಟಿಯಿಂದ ಮೀನು ಸಾಕಣೆ, ಊಟಕ್ಕಾಗಿ ಆರೈಕೆ, ಹವ್ಯಾಸಿ ಮೀನುಗಾರಿಕೆ, ಮನೆಯ ಅಲಂಕಾರಕ್ಕಾಗಿ ಮೀನು ಆರೈಕೆ, ನಿತ್ಯ ಕಸುಬು ಮಾಡುವ ಮೀನುಗಾರರಿಗೆ ಮಾಹಿತಿ ನೀಡಲಾಗುತ್ತಿದೆ.
ಮೇಳದಲ್ಲಿ 70 ತಳಿಯ ಮೀನುಗಳ ಪ್ರದರ್ಶನಕ್ಕಿಡಲಾಗಿಎ. ಬಿಸಿಲನಾಡು ಜಿಲ್ಲೆಯಲ್ಲಿ ಸಾಕಣೆ ಮಾಡಬಹುದಾದ ಆರು ತಳಿಯ ಮೀನುಗಳಿಗೆ ಇಲಾಖೆಯಿಂದ ಪ್ರಾಮುಖ್ಯ ನೀಡಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ತಂಡೋಪ ತಂಡವಾಗಿ ಭೇಟಿ ನೀಡಿ ಬಣ್ಣಬಣ್ಣದ ಮೀನುಗಳನ್ನು ನೋಡಿ ಸಂಭ್ರಮಿಸಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಜತೆ ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
ಯಾವ್ಯಾವ ಫಿಶ್‌ಗಳಿವೆ ?
ಮತ್ಸೃ ಮೇಳದಲ್ಲಿ ಬೆಳ್ಳಿಗೆಂಡೆ, ಪಾಸು ಫಿರಾನ್ಹ್, ಫ್ಯಾನ್ಸಿ ಗುಪ್ಪಿನ್, ಕಲರ್‌ವೈಟ್ ತೆಟ್ರಾ, ಪ್ರಫರ್ ಫಿಶ್, ಬ್ಲಾಕ್ ಮೊಲ್ಲಿ, ಕಿಸ್ಸಿಂಗ್ ಗೋರಮ್, ಸ್ಕಾಟ್ ಫಿಶ್, ಪಂಗೇಷಿಯನ್, ಸ್ನೇಕ್ ವೈಟ್ ಚಿಚ್ಲಿಡ್, ಆಲ್‌ಬಿನೋ ಟಿಗ್ರ್ ಬಾರ್ಟ್, ರೂಪ್‌ಚಂದ್, ರೋಹು, ದೊಡ್ಡ ಗೆಂಡೆ ಮೀನು, ಡೆಡ್ ಡೆವಿಲ್ ಚಿಚ್ಲಿಡ್, ಫಯರ್ ಮೌತ್ ಚಿಚ್ಲಿಡ್, ಟೈಗರ್ ಆಸ್ಕರ್ ಫಿಸ್, ರೆಡ್ ಪ್ಯಾರಲ್ ಫಿಶ್, ಎಲೆಕ್ಟ್ರಿಕ್ ಚಿಚ್ಲಿಡ್, ಸಾಣೆ ಮೀನು, ಕಪ್ಪೆ ತಳಿ ಮೀನು, ಸ್ನೇಕ್ ಮೀನು ಸೇರಿ ವಿವಿಧ ತಳಿಯ ಮೀನುಗಳು ಗಮನ ಸೆಳೆದವು.
ಕೆಲ ಮೀನುಗಳು ಬಾನಲ್ಲಿ ಹಾರಾಡುವ ಚುಕ್ಕಿಯಂತೆ ಕಂಗೊಳಿಸಿದರೆ, ಕೆಲವು ಗಜಗಾತ್ರದಂತೆ ಕಂಡುಬಂದವು. ಮಿಂಚುಳ್ಳಿಯಂಥ ಮೀನು ಲೈಟ್ ನೋಡಿ ಕುಣಿದಾಡಿದರೆ, ಕೆಲವು ನೋಡುಗರತ್ತ ಆಹಾರ ಹುಡುಕುತ್ತ ಬರುತ್ತಿದ್ದವು. ಕೆಲವು ಮೀನು ಜನರಿಗೆ ಅಂಜಿ ಮೂಲೆ ಸೇರಿದರೆ, ವಿಚಿತ್ರ ಆಕಾರದ ಮೀನುಗಳು ಗಮನ ಸೆಳೆದವು.
ರೈತನ ಕೈಹಿಡಿದ ರೂಪ್‌ಚಂದ್
ಜಿಲ್ಲೆಯ ಬಿಸಿಲಿನತಾಪ, ನೀರಿನ ಗುಣಕ್ಕೆ ಸ್ಥಳೀಯ ಮೀನಿನ ಜತೆಗೆ ರೂಪ್‌ಚಂದ್ ಮೀನು ವ್ಯಾಪಾರಿಗಳ ಕೈಹಿಡಿದಿದೆ. ವ್ಯಾಪಾರಕ್ಕೆ ಈ ಮೀನು ಅನುಕೂಲವಿದ್ದು ಸರಿಯಾಗಿ ಬೆಳೆಸಿದರೆ ಒಂದು ಮೀನು 4-5 ಕೆಜಿವರೆಗೆ ಬೆಳೆದು ಮಾಲೀಕರಿಗೆ ಲಾಭ ತಂದುಕೊಡುತ್ತದೆ. ಜಿಲ್ಲೆಯ ಅಮರೇಶ್ವರ ಕ್ಯಾಂಪ್‌ನ ರೈತ ಸೂರ್ಯನಾರಾಯಣ್ ಅವರು ರೂಪ್‌ಚಂದ್ ಬೆಳೆದು ಲಕ್ಷಾಂತರ ರೂ. ಲಾಭ ಪಡೆಯುತ್ತಿದ್ದಾರೆ.
ಆಂಧ್ರದಲ್ಲಿ ಮೀನುಮರಿ ತಂದು 12ಎಕರೆಯಲ್ಲಿ ಸಾಮಾನ್ಯ ಮೀನಿನ ಜತೆ ಸಾಕಣೆ ಮಾಡಿದ್ದಾರೆ. ಮರಿ ಸಾಗಣೆ ವೆಚ್ಚ ಸೇರಿ 5 ರೂ. ಬೆಲೆಯಿದ್ದು 8-10ತಿಂಗಳು ಮೇಯಿಸಿದರೆ ಕೆಜಿಗೆ 90-120 ರೂ.ನಂತೆ ಮಾರಾಟ ಮಾಡುತ್ತಾರೆ. ಶೇಂಗಾ ಹಿಂಡಿ, ಪಾಲೀಸ್ ಪದಾರ್ಥ, ವಿವಿಧ ಕಾಳು ಆಹಾರವಾಗಿ ನೀಡುತ್ತಾರೆ. ಜತೆಗೆ ತಜ್ಞರ ಸಲಹೆ ಮೇರೆಗೆ ಫೀಡ್ ಮಾಡುತ್ತಾರೆ. ಒಂದು ಮೀನು ಬೆಳೆಸಲು 50-60ರೂ. ಖರ್ಚು ಮಾಡುತ್ತಾರೆ. ಎಕರೆಗೆ 3ರಿಂದ 4ಟನ್ ಬೆಳೆಯುತ್ತಾರೆ. ವಾರ್ಷಿಕವಾಗಿ ಎಲ್ಲ ಖರ್ಚುವೆಚ್ಚ ತೆಗೆದು 15-20ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.
ಮೀನು ತಳಿಗಳ ಸಮಗ್ರ ಮಾಹಿತಿ ನೀಡುವ ಜತೆಗೆ ರೈತರು ಕೃಷಿ ಜತೆ ಮೀನುಗಾರಿಕೆ ಮಾಡಲು ಪ್ರೊತ್ಸಾಹ ನೀಡಲಾಗುತ್ತಿದೆ. ಮೀನುಗಾರಿಕೆಗೆ ಪ್ರೋತ್ಸಾಹಧನವಿದೆ. ಜಿಲ್ಲೆಯಲ್ಲಿ 520 ಎಕರೆಯಲ್ಲಿ ಮೀನುಗಾರಿಕೆ ಮಾಡಲಾಗುತ್ತಿದ್ದು, ವರ್ಷಕ್ಕೆ 20 ಸಾವಿರ ಮೆಟ್ರಿಕ್ ಟನ್ ಬೆಳೆಯಲಾಗುತ್ತಿದೆ. ಕೋಲ್ಡ್ ಸ್ಟೋರೇಜ್, ಮೀನುಮರಿ ಮಾರಾಟ ಕೇಂದ್ರ, ಪಾಲನೆ, ಉತ್ಪಾದನೆ ಕೇಂದ್ರ ಆರಂಭಕ್ಕೆ ಸರ್ಕಾರಕ್ಕೆ 700 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ.
ಕೆರೆ, ಹಳ್ಳದಲ್ಲಿ ಒಂದೆರಡು ತರಹದ ಮೀನು ನೋಡಿದ್ದೇವೆ. ಮೇಳದಲ್ಲಿ ಹತ್ತಾರು ತಳಿಯ, ಬಣ್ಣಬಣ್ಣದ ಮೀನುಗಳನ್ನು ನೋಡಿ ತುಂಬ ಖುಷಿ ಆಯ್ತು. ಮೀನುಗಳ ಸಾಕಣೆ, ಆಹಾರ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದರು.