ಬೆಂಗಳೂರು: ಬರುವ ಸರಣಿ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ತರುವುದೇ ನಮ್ಮ ಮೊದಲ ಆದ್ಯತೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್‌ಗೌಡ ಹೇಳಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದ ಕೆಂಪಾಪುರ ವಾರ್ಡ್‌ನಲ್ಲಿ ಸೋಮವಾರ ಆಯೋಜಿಸಿದ್ದ ‘ಬಿಜೆಪಿ ಸೇರ್ಪಡೆ’ ಕಾರ್ಯಕ್ರಮದಲ್ಲಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಟಿ.ರಮೇಶ್,ಹಿಂದುಳಿದ ವರ್ಗಗಳ ಮುಖಂಡ ರಾಜು ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಬಿಜೆಪಿಯನ್ನು ಇನ್ನಷ್ಟು ಸಂಘಟಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಹಲವು ದಿನಗಳಿಂದ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಮೀತಿಮೀರಿದ ಭ್ರಷ್ಟಾಚಾರ,ಜನವಿರೋಧಿ ನೀತಿಯಿಂದ ರಾಜ್ಯದ ಜನರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಮೂಲಸೌಕರ್ಯ ಸಮಸ್ಯೆ ತೀವ್ರವಾಗಿದೆ ಎಂದು ತಮ್ಮೇಶ್‌ಗೌಡ ವಾಗ್ದಾಳಿ ನಡೆಸಿದ್ದಾರೆ.
ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸುವ, ಪ್ರತಿಭಟನೆ ನಡೆಸುವ ಮುಕ್ತವಾದ ಸ್ವಾತಂತ್ರ್ಯ ಇಲ್ಲವಾಗಿದೆ. ಪೊಲೀಸ್ ಶಕ್ತಿ ಬಳಸಿ ಜನಪರ ಚಳವಳಿ, ಪ್ರತಿಭಟನೆ ಹತ್ತಿಕ್ಕಲಾಗುತ್ತಿದೆ. ಇಂತಹ ಪ್ರಾಯೋಜಿತ ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ. ‘ಕಾಂಗ್ರೆಸ್ ತೊಲಗಿಸಿ ಬ್ಯಾಟರಾಯನಪುರ ಉಳಿಸಿ’ ಎಂಬ ಬೃಹತ್ ಅಭಿಯಾನದ ಮೂಲಕ ಕ್ಷೇತ್ರದ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.
ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ನಗರ ಮಂಡಲ ಉಪಾಧ್ಯಕ್ಷ ಚಂದ್ರಶೇಖರರೆಡ್ಡಿ, ಗೋಪಿನಾಥ್ ರೆಡ್ಡಿ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ, ಕೆಂಪಾಪುರ ವಾರ್ಡ್ ಅಧ್ಯಕ್ಷೆ ಉಷಾ, ವಿಲ್ಸನ್‌ರೆಡ್ಡಿ ಮತ್ತಿತರರಿದ್ದರು.