ರಾಜ್ಯ

ಎಥೆನಾಲ್​ ಇಕ್ಕಟ್ಟು! ಇ-20 ಇಂಧನಕ್ಕೆ ವಿವಾದದ ಕಿಡಿ

ಪೆಟ್ರೋಲ್​ನಲ್ಲಿ ಶೇ. 20 ಎಥೆನಾಲ್ ಮಿಶ್ರಣದ ನೀತಿ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕ ಸರ್ಕಾರ ನಡೆಸಿದ ಪರೀಕ್ಷೆಯಲ್ಲಿ ಕೆಲವು ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ. 31ರವರೆಗೆ ಇದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಇದರ ಪರೀಕ್ಷಾ ವಿಧಾನವನ್ನೇ ಪ್ರಶ್ನಿಸಿವೆ. ಎಥೆನಾಲ್ ಮಿಶ್ರಣದ ಉದ್ದೇಶವೇನು? ಇಂಧನದ ಗುಣಮಟ್ಟದ ಮಾನದಂಡಗಳೇನು? ವಾಹನಗಳ ಮೈಲೇಜ್ ಮತ್ತು ಎಂಜಿನ್ ಮೇಲೆ ಎಥೆನಾಲ್​ನ ಪರಿಣಾಮ ಎಷ್ಟು? ಈ ಕುರಿತ ವಿಶ್ಲೇಷಣೆ ಇಲ್ಲಿದೆ.

ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡುವುದು, ವಿದೇಶಿ ವಿನಿಮಯ ಉಳಿಸುವುದು, ರೈತರಿಗೆ ಹೆಚ್ಚುವರಿ ಮಾರುಕಟ್ಟೆ ಕಲ್ಪಿಸುವುದು ಮತ್ತು ಪರಿಸರ ಮಾಲಿನ್ಯ ತಗ್ಗಿಸುವುದು- ಈ ಉದ್ದೇಶಗಳೊಂದಿಗೆ ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯನ್ನು ಜಾರಿಗೊಳಿಸಿದೆ. ದೇಶದಲ್ಲಿ ಶೇ. 20 ಎಥೆನಾಲ್ ಮಿಶ್ರಣದ ಗುರಿಯನ್ನೂ ನಿಗದಿತ ಅವಧಿಗಿಂತ ಮುಂಚಿತವಾಗಿ ಸಾಧಿಸಲಾಗಿದೆ. ಆದರೆ ಈ ನೀತಿಯ ಅನುಷ್ಠಾನದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಕರ್ನಾಟಕದ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಆರೋಪಿಸಿದ ಬೆನ್ನಲ್ಲೇ, ಈ ವಿಷಯದ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಮಾತನಾಡಿರುವುದರಿಂದ ಇದು ಈಗ ರಾಷ್ಟ್ರಮಟ್ಟದ ವಿವಾದವಾಗಿ ಮಾರ್ಪಾಟಾಗಿದೆ.

ಆದರೆ ಕೇಂದ್ರ ಸರ್ಕಾರದ ಪ್ರಕಾರ, ದೇಶಾದ್ಯಂತ ನಡೆಸಿದ ಪರೀಕ್ಷೆಗಳಲ್ಲಿ ಇಂಧನ ನಿಗದಿತ ಗುಣಮಟ್ಟದಲ್ಲಿಯೇ ಇದೆ. ಹಾಗಾದರೆ ಕರ್ನಾಟಕದ ವರದಿ ಮತ್ತು ಕೇಂದ್ರದ ಅಂಕಿ-ಅಂಶಗಳ ನಡುವೆ ವ್ಯತ್ಯಾಸವೇಕೆ? ಪರೀಕ್ಷಾ ವಿಧಾನದಲ್ಲಿ ಭಿನ್ನತೆ ಇದೆಯೇ ಅಥವಾ ಇಂಧನ ಪೂರೈಕೆಯಲ್ಲೇ ಸಮಸ್ಯೆಯಿದೆಯೇ? ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳಲು ಈ ವಿವಾದದ ವೈಜ್ಞಾನಿಕ, ಆರ್ಥಿಕ ಮತ್ತು ರಾಜಕೀಯ ಆಯಾಮಗಳತ್ತ ಗಮನಹರಿಸಬೇಕಿದೆ.

ಏಳು ಜಿಲ್ಲೆಗಳಲ್ಲಿ ನಡೆದ ಪರೀಕ್ಷೆ

ಎಥೆನಾಲ್ ಮಿಶ್ರಣದ ಪ್ರಮಾಣದ ಬಗ್ಗೆ ರಾಜ್ಯ ಸರ್ಕಾರದ ಪರೀಕ್ಷಾ ವರದಿಯನ್ನು ಸಚಿವ ರಿಜ್ವಾನ್ ಅರ್ಷದ್ ನ. 6ರಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲೆಗಳಿಂದ 63 ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವುಗಳ ಪೈಕಿ ಪ್ರಕಟಿಸಲಾದ ಪರೀಕ್ಷಾ ಫಲಿತಾಂಶಗಳಲ್ಲಿ 14 ಮಾದರಿಗಳ ವಿವರಗಳಿದ್ದು, ಅವುಗಳ ಪೈಕಿ 11ರಲ್ಲಿ ಎಥೆನಾಲ್ ಪ್ರಮಾಣ ಶೇ. 20ಕ್ಕಿಂತ ಹೆಚ್ಚಿತ್ತು. ಇಂಡಿಯನ್ ಆಯಿಲ್ ಕಂಪನಿಯ ಒಂದು ಮಾದರಿಯಲ್ಲಿ ಶೇ. 31.2 ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನ ಮಾದರಿಯಲ್ಲಿ ಶೇ. 30.5ರಷ್ಟು ಎಥೆನಾಲ್ ಇರುವುದು ಪತ್ತೆಯಾಗಿದೆ. ಇತರ ಕೆಲವು ಕಂಪನಿಗಳ ಮಾದರಿಗಳಲ್ಲೂ ನಿಗದಿತ ಪ್ರಮಾಣ ಮೀರಿದೆ ಎಂಬುದು ಸಚಿವರ ಆರೋಪ.

ಕೇಂದ್ರದ ಅಂಕಿ-ಅಂಶಗಳೇನು ಹೇಳುತ್ತವೆ?

ಸಚಿವ ಅರ್ಷದ್ ಆರೋಪಕ್ಕೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನ. 7ರಂದು ಸ್ಪಷ್ಟನೆ ನೀಡಿ, ‘ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 893 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲ ಮಾದರಿಗಳಲ್ಲೂ ಎಥೆನಾಲ್ ಪ್ರಮಾಣ ನಿಗದಿತ ಮಿತಿಯಲ್ಲೇ ಇತ್ತು. ಈ ಪೈಕಿ ಕರ್ನಾಟಕದ 56 ಮಾದರಿಗಳ ಪರೀಕ್ಷೆಯಲ್ಲೂ ಶೇ. 19ರಿಂದ 20ರಷ್ಟು ಎಥೆನಾಲ್ ಇತ್ತು’ ಎಂದು ತಿಳಿಸಿದೆ. ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿ, ಎಚ್​ಪಿ ಕಂಪನಿಗಳೂ ಕರ್ನಾಟಕದ ವರದಿಯನ್ನು ತಳ್ಳಿಹಾಕಿವೆ. ಪರೀಕ್ಷೆಗೆ ಬಳಸಿದ ಮಾದರಿಗಳ ಸಂಗ್ರಹ ಮತ್ತು ವಿಶ್ಲೇಷಣೆ ನಿಗದಿತ ಕಾನೂನು ಹಾಗೂ ತಾಂತ್ರಿಕ ವಿಧಾನಗಳ ಪ್ರಕಾರ ನಡೆದಿಲ್ಲ ಎಂಬುದು ಅವುಗಳ ವಾದ. ರಾಜ್ಯ ಸರ್ಕಾರದ ಪರೀಕ್ಷಾ ವರದಿಯಲ್ಲಿ ಬಳಸಿದ ವಿಧಾನ, ಅಗತ್ಯವಾದ ಉಲ್ಲೇಖ ಮಾದರಿ ಮತ್ತು ಪರೀಕ್ಷೆಯ ಕೆಲವು ತಾಂತ್ರಿಕ ವಿವರಗಳು ಸ್ಪಷ್ಟವಾಗಿಲ್ಲ ಎನ್ನುತ್ತಿದೆ ಕೇಂದ್ರ ಸರ್ಕಾರ.

ಕರ್ನಾಟಕ ಸರ್ಕಾರದ ಪ್ರಯೋಗಾಲಯದ ಪ್ರಮಾಣಪತ್ರದಲ್ಲಿ ‘ಗ್ಯಾಸ್ ಕ್ರೊಮ್ಯಾಟೋಗ್ರಫಿ’ ವಿಧಾನದ ಮೂಲಕ ಎಥೆನಾಲ್ ಪ್ರಮಾಣವನ್ನು ಪರೀಕ್ಷಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಪರೀಕ್ಷೆಯಲ್ಲಿ ಐಎಸ್ 17021 ಮಾನದಂಡದ ಪ್ರಕಾರ ಅನುಸರಿಸಬೇಕಾದ ನಿರ್ದಿಷ್ಟ ವಿಧಾನ, ಮಾದರಿಯನ್ನು 1:1 ಅನುಪಾತದಲ್ಲಿ ಪೆಟ್ರೋಲ್​ನೊಂದಿಗೆ ದುರ್ಬಲಗೊಳಿಸುವ ಪ್ರಕ್ರಿಯೆ ಮತ್ತು ಇ10 ಪ್ರಮಾಣೀಕೃತ ಉಲ್ಲೇಖ ಮಾದರಿಯ ಬಳಕೆಯ ವಿವರಗಳಿಲ್ಲ ಎಂಬುದು ತೈಲ ಕಂಪನಿಗಳ ಆಕ್ಷೇಪ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕರ್ನಾಟಕ ಸರ್ಕಾರದ ಪರೀಕ್ಷೆಯನ್ನೂ, ತೈಲ ಕಂಪನಿಗಳು ಉಲ್ಲೇಖಿಸಿರುವ 893 ಮಾದರಿಗಳ ಪರೀಕ್ಷೆಯನ್ನೂ ಒಂದೇ ರೀತಿಯ ವಿಧಾನದಲ್ಲಿ ನಡೆಸಲಾಗಿದೆಯೇ ಎಂಬುದಕ್ಕೆ ಸ್ಪಷ್ಟತೆ ಬೇಕಿದೆ. ಆದ್ದರಿಂದ ಎರಡೂ ಕಡೆಯ ವರದಿಗಳನ್ನು ಸ್ವತಂತ್ರವಾಗಿ ಪರಿಶೀಲಿಸುವ ಅಗತ್ಯವಿದೆ.

ಮೈಲೇಜ್ ಕಡಿಮೆ ಆಗುತ್ತದೆಯೇ?

ವಾಹನ ಸವಾರರ ಪ್ರಮುಖ ಆತಂಕ ಮೈಲೇಜ್. ಎಥೆನಾಲ್​ನ ಶಕ್ತಿಮೌಲ್ಯ ಪೆಟ್ರೋಲ್​ಗಿಂತ ಕಡಿಮೆ. ಹೀಗಾಗಿ ಒಂದೇ ಪ್ರಮಾಣದ ಇಂಧನದಲ್ಲಿ ದೊರೆಯುವ ಶಕ್ತಿಯಲ್ಲಿ ವ್ಯತ್ಯಾಸ ಉಂಟಾಗಬಹುದು. ಕೇಂದ್ರ ಸರ್ಕಾರದ ಹಿಂದಿನ ಅಧ್ಯಯನಗಳ ಪ್ರಕಾರ, ಇ10 ಇಂಧನಕ್ಕೆ ವಿನ್ಯಾಸಗೊಳಿಸಿದ ಕೆಲವು ವಾಹನಗಳಲ್ಲಿ ಇ20 ಬಳಸಿದಾಗ ಇಂಧನ ದಕ್ಷತೆ ಶೇ. 3ರಿಂದ 5ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ಇ20 ಬಳಕೆಗೆ ತಕ್ಕಂತೆ ವಿನ್ಯಾಸಗೊಳಿಸಿದ ವಾಹನಗಳಲ್ಲಿ ಈ ವ್ಯತ್ಯಾಸವನ್ನು ತಗ್ಗಿಸಬಹುದು. ವಾಹನದ ಮೈಲೇಜ್ ಮೇಲೆ ಇಂಧನದ ಗುಣಮಟ್ಟವೊಂದೇ ಪರಿಣಾಮ ಬೀರುವುದಿಲ್ಲ. ವಾಹನದ ವಯಸ್ಸು, ಎಂಜಿನ್ ನಿರ್ವಹಣೆ, ಟೈರ್​ಗಳಲ್ಲಿನ ಗಾಳಿಯ ಒತ್ತಡ, ಸಂಚಾರ ದಟ್ಟಣೆ ಮತ್ತು ಚಾಲನಾ ವಿಧಾನವೂ ಮುಖ್ಯವಾಗುತ್ತವೆ. ಆದ್ದರಿಂದ ಮೈಲೇಜ್ ಕಡಿಮೆಯಾದ ಪ್ರತಿಯೊಂದು ಪ್ರಕರಣಕ್ಕೂ ಎಥೆನಾಲ್ ಮಿಶ್ರಣವೇ ಕಾರಣ ಎಂದು ಹೇಳಲಾಗದು. ಅದೇ ರೀತಿ, ವಾಹನ ಸವಾರರ ದೂರುಗಳನ್ನು ನಿರ್ಲಕ್ಷಿಸುವುದೂ ಸರಿಯಲ್ಲ.

ಏನು ಪ್ರಯೋಜನ?

ಎಥೆನಾಲ್ ಮಿಶ್ರಣದಿಂದ ದೇಶಕ್ಕೆ ಹಲವು ಪ್ರಯೋಜನಗಳಿವೆ. ಭಾರತ ತನ್ನ ಕಚ್ಚಾ ತೈಲ ಅಗತ್ಯದ ಬಹುಪಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಪೆಟ್ರೋಲ್​ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಿದಂತೆ ಪೆಟ್ರೋಲಿಯಂ ಆಮದಿನ ಅಗತ್ಯವನ್ನು ತಗ್ಗಿಸಲು ಅವಕಾಶ ಸಿಗುತ್ತದೆ. ಇದರಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ. ಮತ್ತೊಂದೆಡೆ, ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಗೂ ನೆರವಾಗುತ್ತದೆ. ಕಬ್ಬಿನ ಬಾಕಿ ಪಾವತಿ ಸಮಸ್ಯೆ ತಗ್ಗಿಸಲು ಎಥೆನಾಲ್ ಖರೀದಿ ಸಹಕಾರಿಯಾಗಿದೆ. ಕೃಷಿ ಉತ್ಪನ್ನಗಳನ್ನು ಇಂಧನವಾಗಿ ಬಳಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವುದು ಈ ನೀತಿಯ ಪ್ರಮುಖ ಉದ್ದೇಶ.

ಹಳೆಯ ವಾಹನಗಳ ಎಂಜಿನ್​ಗೆ ತೊಂದರೆಯೇ?

ಇ20 ಇಂಧನ ಬಳಕೆಗೆ ಸಂಬಂಧಿಸಿದಂತೆ ವಾಹನಗಳ ಹೊಂದಾಣಿಕೆಯೂ ಪ್ರಮುಖ ಪ್ರಶ್ನೆ. 2023ರ ಏಪ್ರಿಲ್​ನಿಂದ ತಯಾರಾಗುವ ಹಲವು ವಾಹನಗಳನ್ನು ಇ20 ಬಳಕೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. 2025ರ ಏಪ್ರಿಲ್​ನಿಂದ ಹೊಸದಾಗಿ ತಯಾರಾಗುವ ಪೆಟ್ರೋಲ್ ವಾಹನಗಳಿಗೆ ಇ20 ಇಂಧನಕ್ಕೆ ಹೊಂದಿಕೊಳ್ಳುವ ಪ್ರಮಾಣೀಕರಣ ಕಡ್ಡಾಯವಾಗಿದೆ. ಹಳೆಯ ವಾಹನಗಳ ವಿಷಯದಲ್ಲಿ ಮಾತ್ರ ಮಾಲೀಕರು ವಾಹನ ತಯಾರಕರ ಸೂಚನೆಗಳನ್ನು ಗಮನಿಸಬೇಕು.

ಕೆಲವು ಹಳೆಯ ವಾಹನಗಳಲ್ಲಿ ರಬ್ಬರ್ ಪೈಪ್​ಗಳು, ಸೀಲ್​ಗಳು ಮತ್ತು ಇಂಧನ ವ್ಯವಸ್ಥೆಯ ಕೆಲವು ಬಿಡಿಭಾಗಗಳು ಎಥೆನಾಲ್​ಗೆ ದೀರ್ಘಕಾಲ ಒಡ್ಡಿಕೊಂಡಾಗ ಬೇಗ ಸವೆದುಹೋಗುವ ಸಾಧ್ಯತೆಯಿದೆ. ಆದರೆ ಇದರಿಂದ ಎಲ್ಲ ಹಳೆಯ ವಾಹನಗಳ ಎಂಜಿನ್ ಹಾಳಾಗುತ್ತದೆ ಎಂದರ್ಥವಲ್ಲ. ಕೇಂದ್ರ ಸರ್ಕಾರ ಮತ್ತು ವಾಹನ ತಯಾರಕರ ಸಂಘಟನೆಗಳ ಅಧ್ಯಯನಗಳು, ‘ನಿಗದಿತ ಗುಣಮಟ್ಟದ ಇ20 ಬಳಕೆಯಿಂದ ಹಳೆಯ ವಾಹನಗಳಲ್ಲಿ ವ್ಯಾಪಕ ಪ್ರಮಾಣದ ಎಂಜಿನ್ ಹಾನಿ ಕಂಡುಬಂದಿಲ್ಲ’ ಎಂದು ಹೇಳಿವೆ. ಆದರೂ ವಾಹನದ ಮಾದರಿ ಮತ್ತು ತಯಾರಿಕಾ ವರ್ಷವನ್ನು ಇದು ಅವಲಂಬಿಸಿರುತ್ತದೆ.

ತಪ್ಪು ಸಾಬೀತಾದರೆ ಪರಿಹಾರ ಯಾರಿಂದ?

ಕರ್ನಾಟಕ ಸರ್ಕಾರದ ಆರೋಪ ಸತ್ಯವೆಂದು ಜಂಟಿ ಪರೀಕ್ಷೆಯಲ್ಲಿ ದೃಢಪಟ್ಟರೆ, ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಗ್ರಾಹಕರು ಹಣ ಕೊಟ್ಟು ಖರೀದಿಸುವ ಇಂಧನವು ನಿಗದಿತ ಗುಣಮಟ್ಟದಲ್ಲಿರಲೇಬೇಕು. ಇದು ಕಂಪನಿಗಳ ಜವಾಬ್ದಾರಿ. ಇಂಧನದ ಗುಣಮಟ್ಟದ ಲೋಪದಿಂದ ವಾಹನಕ್ಕೆ ಹಾನಿಯಾದರೆ ಗ್ರಾಹಕರು ಪರಿಹಾರ ಕೇಳುವ ಹಕ್ಕನ್ನೂ ಹೊಂದಿರುತ್ತಾರೆ. ಆದರೆ ಪರಿಹಾರ ಪಡೆಯಲು ಇಂಧನದ ಗುಣಮಟ್ಟದ ಲೋಪ ಮತ್ತು ವಾಹನದ ಹಾನಿಯ ನಡುವಿನ ಸಂಬಂಧವನ್ನು ತಾಂತ್ರಿಕವಾಗಿ ಸಾಬೀತುಪಡಿಸಬೇಕಾಗುತ್ತದೆ.

ಇದಕ್ಕೆ ಪೆಟ್ರೋಲ್ ಬಂಕ್​ಗಳಲ್ಲಿ ಗುಣಮಟ್ಟದ ಮಾಹಿತಿ ಪ್ರದರ್ಶಿಸುವುದು, ದೂರು ದಾಖಲಿಸಲು ಸರಳ ವ್ಯವಸ್ಥೆ ಕಲ್ಪಿಸುವುದು ಮತ್ತು ಪರೀಕ್ಷಾ ವರದಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿಸುವುದು ಮುಖ್ಯ. ವಾಹನ ಸವಾರರು ಮೈಲೇಜ್​ನಲ್ಲಿ ಅಸಹಜ ಬದಲಾವಣೆ ಅಥವಾ ಎಂಜಿನ್ ಸಮಸ್ಯೆ ಕಂಡುಬಂದರೆ ತಕ್ಷಣ ವಾಹನ ತಯಾರಕರ ಅಧಿಕೃತ ಸೇವಾ ಕೇಂದ್ರದಲ್ಲಿ ಪರಿಶೀಲನೆ ಮಾಡಿಸಿಕೊಳ್ಳಬೇಕು. ಇಂಧನ ಖರೀದಿಯ ರಸೀದಿಯನ್ನು ಉಳಿಸಿಕೊಳ್ಳುವುದೂ ದೂರು ಸಲ್ಲಿಸುವಾಗ ಸಹಾಯಕವಾಗಬಹುದು.

ವಿವಾದಕ್ಕೇನು ಪರಿಹಾರ?

ಈ ವಿವಾದದಲ್ಲಿ ಕೇಂದ್ರ ಸರ್ಕಾರದ ಎಥೆನಾಲ್ ನೀತಿಯ ಉದ್ದೇಶವನ್ನು ಪ್ರಶ್ನಿಸುವುದಕ್ಕಿಂತ, ಅನುಷ್ಠಾನದಲ್ಲಿ ಗುಣಮಟ್ಟದ ನಿಯಂತ್ರಣ ಎಷ್ಟು ಕಟ್ಟುನಿಟ್ಟಾಗಿದೆ ಎಂಬುದನ್ನು ಪರಿಶೀಲಿಸುವುದು ಮುಖ್ಯ. ಇಂಧನ ಆಮದು ಕಡಿಮೆ ಮಾಡಿ ರೈತರ ಆದಾಯ ಹೆಚ್ಚಿಸುವ ರಾಷ್ಟ್ರೀಯ ಉದ್ದೇಶದ ಜತೆಗೆ, ಗ್ರಾಹಕರ ವಾಹನ ಮತ್ತು ಹಣದ ಸುರಕ್ಷತೆಯೂ ಅಷ್ಟೇ ಮುಖ್ಯ. ಕರ್ನಾಟಕ ಸರ್ಕಾರ ಮತ್ತು ತೈಲ ಕಂಪನಿಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಜಂಟಿ, ಪಾರದರ್ಶಕ ಹಾಗೂ ಮಾನ್ಯ ತಾಂತ್ರಿಕ ಪರೀಕ್ಷೆಯೇ ಸೂಕ್ತ ಉತ್ತರ ನೀಡಬಲ್ಲದು.