ದೇವರಹಿಪ್ಪರಗಿ ಬಿಎಲ್‌ಡಿಇ ಸಂಸ್ಥೆಯ ಎ. ಬಿ. ಸಾಲಕ್ಕಿ ಕಲಾ, ವಾಣಿಜ್ಯ ಪದವಿ ಪೂರ್ವ ಕಾಲೇಜ್ ಹಾಗೂ ಮಾಧ್ಯಮಿಕ ವಿಭಾಗದ ಕ್ರೀಡಾ ಹಾಗೂ ಸಾಂಸ್ಕೃತಿಕ ಉದ್ಘಾಟನಾ ಸಮಾರಂಭ ಜರುಗಿತು. ಕೆ.ಎ. ಉಪ್ಪಾರ, ತಹಸೀಲ್ದಾರ್ ನಿಂಗಣ್ಣ, ಶರಣಪ್ಪ ಸಾಲಕ್ಕಿ, ಕಾಶೀನಾಥ ಸಾಲಕ್ಕಿ ಮತ್ತಿತರರಿದ್ದರು. 
ರಾಜ್ಯ

ಆಧುನಿಕತೆ ಬೆಳೆದಂತೆ ಶಿಕ್ಷಣ ರಂಗ ವಿಸ್ತಾರ

ಪ್ರಮುಖ ಮುಖ್ಯಾಂಶಗಳು

  • ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಅಧೀಕ್ಷಕ ಎಸ್.ಎ. ಬಿರಾದಾರ ಸಲಹೆ
  • ಸಾಂಸ್ಕೃತಿಕ ಸಮಾರಂಭ ಉದ್ಘಾಟನೆ
ದೇವರಹಿಪ್ಪರಗಿ: ವಿದ್ಯಾರ್ಥಿಗಳು ದೇಶದ ನಿಜವಾದ ಆಸ್ತಿಯಾಗಿದ್ದು, ಪ್ರತಿಯೊಬ್ಬರೂ ಉತ್ಕೃಷ್ಠ ಗುಣಮಟ್ಟದ ಶಿಕ್ಷಣ ಪಡೆದು ಸುಂದರ ಜೀವನ ರೂಪಿಸಿಕೊಳ್ಳಬೇಕೆಂದು ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಅಧೀಕ್ಷಕ ಎಸ್‌ಎ ಬಿರಾದಾರ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ ಬಿ ಸಾಲಕ್ಕಿ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜ್ ಹಾಗೂ ಮಾಧ್ಯಮಿಕ ವಿಭಾಗದ ಕ್ರೀಡಾ ಹಾಗೂ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆ ಶಿಕ್ಷಣ ರಂಗವೂ ವಿಸ್ತಾರವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತಕ್ಕಂತೆ ಯೋಜನೆಗಳು, ಸೌಲಭ್ಯಗಳು ಸಿಗುತ್ತಿವೆ. ಅವುಗಳನ್ನು ಸೂಕ್ತವಾಗಿ ಬಳಸಿಕೊಂಡು ಉತ್ತಮ ಶಿಕ್ಷಣವಂತರಾಗಬೇಕೆಂದು ಕರೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎ. ಉಪ್ಪಾರ ಹಾಗೂ ದೇವರಿಪ್ಪರಗಿ ತಹಸೀಲ್ದಾರ್ ನಿಂಗಣ್ಣ ಬಿರಾದಾರ ಮಾತನಾಡಿ, ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವಿರಬೇಕು. ಜೀವನದಲ್ಲಿ ಏನಾದರೂ ಮಾಡಿ ಮುಂದೆ ಬರುತ್ತೇನೆ ಎಂಬ ಛಲದಿಂದ ಅಭ್ಯಾಸ ಮಾಡಿ ಹೆಸರು ಗಳಿಸಬೇಕು. ಒಳ್ಳೆಯ ಜ್ಞಾನವಂತರಾಗಿ ಸಮಾಜಮುಖಿ ಬದುಕು ಸಾಗಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಮೊಬೈಲ್ ದಾಸರಾಗದೆ ಭವಿಷ್ಯದ ರೂವಾರಿಗಳಾಗಬೇಕೆಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಶರಣಪ್ಪ ಸಾಲಕ್ಕಿ, ಕಾಶೀನಾಥ ಸಾಲಕ್ಕಿ, ಪ್ರಾಚಾರ್ಯ ವಿ.ಜಿ ಹೂನಳ್ಳಿ, ಬಿ.ಬಿ. ಬಿರಾದಾರ, ವಿಜಯಲಕ್ಷ್ಮೀ ಹಿರೇಮಠ, ಸುನಿಲಕುಮಾರ, ರಮೇಶ ಕೋರಿ ಮತ್ತಿತರರಿದ್ದರು.